ಜಿಲ್ಲೆಯಲ್ಲೂ ಪ್ರವಾಹ ಭೀತಿ

ಜಿಲ್ಲೆಯಲ್ಲೂ ಪ್ರವಾಹ ಭೀತಿ

ತುಂಗಭದ್ರಾ ನದಿ ನೀರು ಪ್ರಮಾಣ 1,44,468 ಕೂಸೆಕ್ಸ್‌ಗೆ ಏರಿಕೆ

ಶಾಸಕರು-ಅಧಿಕಾರಿಗಳಿಂದ ಜಂಟಿ ಸಮೀಕ್ಷೆ – ನದಿಪಾತ್ರದಲ್ಲಿ ಎಚ್ಚರದಿಂದಿರಲು ಸೂಚನೆ

ದಾವಣಗೆರೆ, ಜು.31- ಮಲೆನಾಡಿನ ಭಾಗದಲ್ಲಿ ಸಾಕಷ್ಟು ಮಳೆಯಾಗುತ್ತಿರುವುದರಿಂದ ಭದ್ರಾ ಜಲಾಶಯ ಭರ್ತಿಯಾಗಿದೆ. ತುಂಗಾ ನದಿಯಿಂದ ಎಲ್ಲಾ ಕ್ರೆಸ್ ಗೇಟ್‌ಗಳ ಮೂಲಕ ನೀರನ್ನು ನದಿಗೆ ಹೊರಬಿಡಲಾಗುತ್ತಿದ್ದು, ತುಂಗಭದ್ರಾ ನದಿಯಲ್ಲಿ ನೀರು 1,44,468 ಕ್ಯೂಸೆಕ್ಸ್‌ಗೆ ಏರಿಕೆಯಾಗಿದ್ದು ಇದು ಅಪಾಯ ಮಟ್ಟವನ್ನು ತಲುಪಿರುವುದರಿಂದ ನದಿ ಪಾತ್ರದಲ್ಲಿನ ಜನರು ಎಚ್ಚರಿಕೆ ವಹಿಸಬೇಕೆಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಜನರಿಗೆ ಮನವಿ ಮಾಡಿದ್ದಾರೆ.

 ಅವರು ಬುಧವಾರ ಹೊನ್ನಾಳಿಯ ಸಾಸ್ವೆಹಳ್ಳಿ, ಬಾಲರಾಜ್‌ಘಾಟ್, ಬಂಬೂ ಬಜಾರ್ ಪ್ರದೇಶಗಳಿಗೆ ಶಾಸಕ ಡಿ.ಜಿ.ಶಾಂತನಗೌಡ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್ ಹಾಗೂ ವಿವಿಧ ಅಧಿಕಾರಿ ಗಳೊಂದಿಗೆ ಭೇಟಿ ನೀಡಿ ಪ್ರವಾಹದಿಂದ ತೊಂದರೆ ಯುಂಟಾಗುವ ಪ್ರದೇಶಗಳ ವೀಕ್ಷಣೆ ಮಾಡಿದರು. 

ತುಂಗಾ ನದಿಯಿಂದ 82053 ಮತ್ತು ಭದ್ರಾದಿಂದ 62415 ಕ್ಯೂಸೆಕ್ಸ್ ನೀರು ಬರುತ್ತಿದ್ದು ತುಂಗಭದ್ರಾ ನದಿಯಲ್ಲಿ ಒಂದೂವರೆ ಲಕ್ಷ ಕ್ಯೂಸೆಕ್‌ ವರೆಗೆ ನೀರು ಹರಿಯುತ್ತಿದೆ. ಇದರಿಂದ ಹೊನ್ನಾಳಿ ಬಾಲರಾಜ್‌ಘಾಟ್, ಬಂಬೂ ಬಜಾರ್ ಪ್ರದೇಶದ ನದಿಪಾತ್ರದಲ್ಲಿನ ಮನೆಗಳಿಗೆ ನೀರು ಬರಲಿದೆ. ಇದಕ್ಕಾಗಿ ಅಂಬೇಡ್ಕರ್ ಭವನದಲ್ಲಿ 20 ಕುಟುಂಬಗಳ 93 ಜನರು, ಗುರುಭವನದಲ್ಲಿ 6 ಕುಟುಂಬಗಳ 27 ಜನರಿಗೆ ಕಾಳಜಿ ಕೇಂದ್ರ ತೆರೆದು ಪ್ರವಾಹ ಪೀಡಿತ ಪ್ರದೇಶದಿಂದ ಇಲ್ಲಿಗೆ ಸ್ಥಳಾಂತರಿಸಲಾಗಿದೆ. ಹರಿಹರದ ಗಂಗಾನಗರದಲ್ಲಿ ಪ್ರವಾಹ ಉಂಟಾಗಬಹುದೆಂದು ಎಪಿಎಂಸಿಯಲ್ಲಿ ಕಾಳಜಿ ಕೇಂದ್ರ ತೆರೆಯಲು ಸಿದ್ದತೆ ಮಾಡಿಕೊಳ್ಳಲಾಗಿದೆ.

ಹೊನ್ನಾಳಿ ಬೇಸ್ ಸ್ಟೇಷನ್ : ಹೊನ್ನಾಳಿಯಲ್ಲಿ ತುಂಗಭದ್ರಾ ನದಿಯ ನೀರಿನ ಮಟ್ಟ ಅಳತೆಗೆ ಕೇಂದ್ರ ವಾಟರ್ ಬೋರ್ಡ್‌ನ ಬೇಸ್ ಸ್ಟೇಷನ್ ಇದ್ದು ಇಲ್ಲಿ ಜುಲೈ 31 ರ ಸಂಜೆ 6 ಗಂಟೆ ವೇಳೆಗೆ 12.06 ಮೀಟರ್ ಪ್ರಮಾಣದಲ್ಲಿ ನೀರು ಹರಿಯುತ್ತಿದೆ, ಇದು ಅಪಾಯ ಮಟ್ಟವಾಗಿದೆ. ಈ ಸ್ಟೇಷನ್‌ನಲ್ಲಿ 10.85 ಮೀಟರ್ ಹರಿವು ದಾಖಲಾದರೆ ಅಪಾಯದ ಮಟ್ಟ ಎಂದೇ ಪರಿಗಣಿಸಲಾಗುತ್ತದೆ. 12.57 ಮೀಟರ್ ದಾಖಲಾದರೆ ಪ್ರವಾಹ ಉಂಟಾಗಿ ಹಾನಿಯ ಮಟ್ಟವೆಂದು ಪರಿಗಣಿಸ ಲಾಗುತ್ತದೆ. ಪ್ರತಿ  ಗಂಟೆಗೆ ಇಲ್ಲಿನ ದಾಖಲೆಯಲ್ಲಿ ಪಡೆದು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತದೆ.

error: Content is protected !!