ದಾವಣಗೆರೆ, ಜು.29- ನಿರೀಕ್ಷೆಯಂತೆ ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ದಿನೇಶ್ ಕೆ.ಶೆಟ್ಟಿ ಅವರು ನೇಮಕಗೊಂಡಿದ್ದಾರೆ.
ಈ ಸಂಬಂಧ ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯ ದರ್ಶಿ ಕೆ. ಲತಾ ಅವರು ಇಂದು ಆದೇಶ ಹೊರಡಿಸಿದ್ದಾರೆ.
ದೂಡಾ ಸದಸ್ಯರುಗಳನ್ನಾಗಿ ನಗರಸಭೆ ಮಾಜಿ ಅಧ್ಯಕ್ಷ ಎಂ. ಮಂಜುನಾಥ (ತಕ್ಕಡಿ), ಶ್ರೀಮತಿ ಎಂ.ಆರ್. ವಾಣಿ (ಅಭಿ ಕಾಟನ್), ಚಲುವಾದಿ ಸಮಾಜದ ಯುವ ಮುಖಂಡ ಹೆಚ್. ಗಿರೀಶ್ ಮತ್ತು ಹರಿಹರದ ಹೆಚ್. ಜಬ್ಬಾರ್ ಖಾನ್ ಅವರುಗಳನ್ನು ನೇಮಕ ಮಾಡಲಾಗಿದೆ ಎಂದು ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ.
ನಾಳೆ ಅಧಿಕಾರ ಸ್ವೀಕಾರ : ದೂಡಾ ಅಧ್ಯಕ್ಷರಾಗಿ ನೇಮಕಗೊಂಡಿರುವ ದಿನೇಶ್ ಕೆ. ಶೆಟ್ಟಿ ಅವರು ನಾಡಿದ್ದು ದಿನಾಂಕ 31ರ ಬುಧವಾರ ಮಧ್ಯಾಹ್ನ 12 ಗಂಟೆಗೆ ಅಧಿಕಾರ ಸ್ವೀಕರಿಸಲಿದ್ದಾರೆ.
ಇಂಜಿನಿಯರಿಂಗ್ ಪದವೀಧರರಾದ ದಿನೇಶ್ ಶೆಟ್ಟಿ ಅವರು, ಲಯನ್ಸ್ ಕ್ಲಬ್ ಸೇರಿದಂತೆ, ಹಲವಾರು ಸಾಮಾಜಿಕ ಸಂಘ-ಸಂಸ್ಥೆಗಳು ಮತ್ತು ಕ್ರೀಡೆಗಳ ಮುಖಾಂತರ ರಾಜಕೀಯ ಕ್ಷೇತ್ರವನ್ನು ಪ್ರವೇಶಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಅವರ ಆತ್ಮೀಯ ಸ್ನೇಹಿತರಲ್ಲೊಬ್ಬರಾಗಿರುವ ದಿನೇಶ್ ಶೆಟ್ಟಿ ಅವರು, ವಿದ್ಯಾರ್ಥಿ ಸಂಘಟನೆ ಎನ್‌ಎಸ್‌ಯುಐ ಮೂಲಕ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡು, ಸಮಾಜದಲ್ಲೀಗ ಸಕ್ರಿಯ ಮುಖಂಡರಲ್ಲೊಬ್ಬರಾಗಿದ್ದಾರೆ.