ಬೆಣ್ಣೆನಗರಿ ಸಾಹಿತ್ಯ ಸಂಭ್ರಮ- ಸಮ್ಮೇಳನದಲ್ಲಿ ಚಿಂತಕ ಡಾ. ಗಂಗಾಧರ ಅಭಿಮತ
ದಾವಣಗೆರೆ, ಜು.28- ಕಾವ್ಯದಲ್ಲಿ ಗಟ್ಟಿತನ ಬರಬೇಕು. ಕೇವಲ ಭಾವನಾತ್ಮಕ ವಿಚಾರಗಳಿಂದ ಕನ್ನಡದ ಬೆಳವಣಿಗೆ ಆಗದು ಎಂದು ಸಾಗರದ ಶಿಕ್ಷಣ ಚಿಂತಕ ಡಾ. ಗಂಗಾಧರ ವ.ಮ. ಅತ್ರೇಯ ಎಚ್ಚರಿಸಿದರು.
ರಾಜ್ಯ ಕರುನಾಡ ಹಣತೆ ಕವಿ ಬಳಗ ಮತ್ತು ಸಾಂಸ್ಕೃತಿಕ ಕಲಾ ತಂಡ ಚಿತ್ರದುರ್ಗ ಹಾಗೂ ದಾವಣಗೆರೆ ಸಮಿತಿ ಸಹಯೋಗದಲ್ಲಿ ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬೆಣ್ಣೆನಗರಿ ಸಾಹಿತ್ಯ ಸಂಭ್ರಮ- ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಸಮಾಜಕ್ಕೆ ಪ್ರಬುದ್ಧ ಮತ್ತು ಗಟ್ಟಿತನದ ಕಾವ್ಯ ರಚನೆಯ ಅಗತ್ಯವಿದೆ. ಈ ತಲೆಮಾರಿನ ಕವಿಗಳು ಷಟ್ಪದಿ, ರಗಳೆೆ ಹಾಗೂ ಕಂದ ಪದ್ಯ ಮೊದಲಾದ ಚೌಕಟ್ಟಿನ ಮಾದರಿಯ ಕಾವ್ಯ ರಚನೆಗೆ ಪ್ರಯತ್ನ ಮಾಡಬೇಕು ಮತ್ತು ನಮ್ಮ ಕಾರ್ಯಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕಾವ್ಯ, ಕಥೆ ಮೊದಲಾದ ಸಾಹಿತ್ಯವನ್ನು ಜನರಿಗೆ ಉಣಬಡಿಸಬೇಕು ಎಂದು ಹೇಳಿದರು.
ಕೇಂದ್ರ ಸರ್ಕಾರ ನಡೆಸುವ ಕೆಲವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಭಾಷೆ ನಿಗದಿಪಡಿಸಿದ್ದರೂ ಅಭ್ಯರ್ಥಿಗಳಲ್ಲಿ ತಾರ್ಕಿಕ ಶಕ್ತಿಯೂ ಅಗತ್ಯವಿದೆ. ಇಂಗ್ಲಿಷ್ ಒಂದಿದ್ದರೆ ಎಲ್ಲವನ್ನೂ ಪಡೆಯಬಹುದೆಂಬ ಮನೋಭಾವ ಪೋಷಕರಲ್ಲಿ ಬೇಡ. ಆಂಗ್ಲ ಭಾಷೆ ಬೇಕು. ಆದರೆ ಅದೇ ಉಸಿರಲ್ಲ ಎಂಬ ಭಾವನೆ ಬೆಳೆದರೆ ಅಂದಿನಿಂದಲೇ ಕನ್ನಡ ಚಿಗುರೊಡೆಯಲಿದೆ ಎಂದು ಹೇಳಿದರು.
ಆಶಯ ನುಡಿ ಮಾತನಾಡಿದ ಚಿತ್ರದುರ್ಗ ಕೇಂದ್ರ ಘಟಕದ ಉಪಾಧ್ಯಕ್ಷ ಡಾ.ಎಸ್.ಎಚ್. ಶಫಿವುಲ್ಲಾ ಅವರು, ದೇಶದಲ್ಲಿ ಅನೇಕ ಪ್ರಾದೇಶಿಕ ಭಾಷೆಗಳಿವೆ. ಇಂತಹ ಪ್ರಾದೇಶಿಕ ಭಾಷೆಯನ್ನು ತುಳಿಯಲು ಕೇಂದ್ರ ಸರ್ಕಾರ ಏಕ ಭಾಷೆಯ ಮೂಲಕ ಹಿಂದಿ ಭಾಷೆಯನ್ನು ಬಲವಂತವಾಗಿ ಕನ್ನಡದ ಮೇಲೆ ಹೇರಿ ನಮ್ಮ ಭಾಷೆಯನ್ನು ಮೂಲೆಗುಂಪು ಮಾಡುವ ಕಾರ್ಯ ಮಾಡುತ್ತಿದೆ. ಆದ್ದರಿಂದ ಕನ್ನಡಿಗರು ಎಚ್ಚೆತ್ತುಕೊಳ್ಳಬೇಕಿದೆ ಎಂದು ಹೇಳಿದರು.
2500 ವರ್ಷಗಳ ಇತಿಹಾಸ ಇರುವ ಕನ್ನಡ ಭಾಷೆಯು ಜಗತ್ತಿನಲ್ಲಿ ಶ್ರೀಮಂತ ಸಾಹಿತ್ಯವನ್ನು ಹೊಂದಿದ್ದರೂ ತುಳಿತಕ್ಕೆ ಒಳಗಾಗಿದೆ ಆದ್ದರಿಂದ ರಾಜ್ಯದ ಮೂಲೆ- ಮೂಲೆಗಳಿಂದ ಕನ್ನಡ ಉಳಿಸುವ ಕಾರ್ಯ ನಡೆಯಬೇಕು ಎಂದು ಹೇಳಿದರು.
ಕನ್ನಡವು ಅನ್ನದ ಭಾಷೆಯಾಗಬೇಕು. ನಾಡು-ನುಡಿ ಸಂಸ್ಕೃತಿಗೊಸ್ಕರ ಬದುಕಬೇಕು. ಕನ್ನಡಿಗರು ಅನ್ಯಭಾಷಿಕರೊಂದಿಗೆ ಕನ್ನಡದಲ್ಲೇ ವ್ಯವಹರಿಸಬೇಕು ಮತ್ತು ಅನಗತ್ಯವಾಗಿ ಅನ್ಯಭಾಷೆ ಮಾತನಾಡಬಾರದು ಎಂದು ಹೇಳಿದರು.
ಪ್ರಸ್ತುತ ಬೆಂಗಳೂರಿನಲ್ಲಿ ಶೇ.70ರಷ್ಟು ಜನ ಅನ್ಯ ಭಾಷೆ ಹಾಗೂ ಶೇ.30ರಷ್ಟು ಜನ ಕನ್ನಡ ಮಾತನಾಡುತ್ತಿದ್ದಾರೆ. ಆಂಗ್ಲ ಭಾಷೆ ಮೇಲಿನ ಅತಿಯಾದ ವ್ಯಾಮೋಹ ಕನ್ನಡವನ್ನು ಕೊಲ್ಲುತ್ತಿದೆ ಎಂದು ಆತಂಕ ಪಟ್ಟರು.
ಇದೇ ವೇಳೆ ಎಸ್.ವಿ. ಶಾಂತಕುಮಾರ್ ಬರೆದಿರುವ `ಕನಸು ಚಿಗುರೊಡೆಯಿತು’ ಶ್ರೀದೇವಿ ಸೂರ್ಯ ಸುವರ್ಣಖಂಡಿ ಬರೆದ `ಶ್ರಾವ್ಯ’ ಕೃತಿ ಬಿಡುಗಡೆ ಮಾಡಲಾಯಿತು. ಸಾಧಕರಿಗೆ ಪ್ರಶಸ್ತಿ ಪುರಸ್ಕಾರ ಮಾಡಲಾಯಿತು. ಸಮಿತಿಯ ಜಿಲ್ಲಾಧ್ಯಕ್ಷ ಎಸ್.ವಿ. ಶಾಂತ ಕುಮಾರ್ ಪ್ರಾಸ್ತಾವಿಕ ಮಾತನಾಡಿದರು.
ಸಮ್ಮೇಳನದ ಅಧ್ಯಕ್ಷೆ ಶ್ರೀದೇವಿ ಸೂರ್ಯ ಸುವರ್ಣಖಂಡಿ, ಸಂಸ್ಥಾಪಕ ಅಧ್ಯಕ್ಷ ಕನಕ ಪ್ರೀತೀಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಗೌಡರ್, ಹಿರಿಯ ಸಾಹಿತಿ ಎನ್.ಟಿ. ಎರಿಸ್ವಾಮಿ, ರೈತ ಕವಿ ಶಂಕರಪ್ಪ ಬಳ್ಳೇಕಟ್ಟೆ, ಪತ್ರಕರ್ತ ರಾಜಪ್ಪ ವ್ಯಾಸಗೊಂಡನಹಳ್ಳಿ, ಅಭಿಮಾನ ಫೌಂಡೇಶನ್‌ನ ನಿಶ್ಚಯ ಕುಮಾರ್, ಡಾ.ಎಸ್. ವೀರೇಶ್ ಕುಮಾರ್ ಇದ್ದರು.