ವಚನಗಳೇ ಲಿಂಗಾಯತ ಧರ್ಮದ ನಿಜವಾದ ಪಠ್ಯ

ವಚನಗಳೇ ಲಿಂಗಾಯತ ಧರ್ಮದ ನಿಜವಾದ ಪಠ್ಯ

ಬಸವ ಬಳಗದಲ್ಲಿನ ಉಪನ್ಯಾಸ – ಸಂವಾದ ಕಾರ್ಯಕ್ರಮದಲ್ಲಿ ಸಾಹಿತಿ ಎಸ್.ಜಿ. ಸಿದ್ದರಾಮಯ್ಯ

ದಾವಣಗೆರೆ, ಜು. 26- ಶರಣರ ವಚನಗಳೇ ಲಿಂಗಾಯತ ಧರ್ಮದ ನಿಜವಾದ ಪಠ್ಯಗಳು. ವಚನಗಳನ್ನು ಅರ್ಥ ಮಾಡಿಕೊಂಡಾಗ ನಾವು ಜೀವನದಲ್ಲಿ ಹೇಗೆ ಬಾಳಬೇಕು ಎಂಬುದು ತಿಳಿಯುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರೂ, ಸಾಹಿತಿ ಎಸ್.ಜಿ. ಸಿದ್ದರಾಮಯ್ಯ ಹೇಳಿದರು.

ಬಸವ ಬಳಗ, ಜಾಗತಿಕ ಲಿಂಗಾಯತ ಮಹಾಸಭಾ, ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ ಮತ್ತು ಕರುಣಾ ಜೀವ ಕಲ್ಯಾಣ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಸರಸ್ವತಿ ನಗರದಲ್ಲಿನ ಬಸವ ಬಳಗದ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ `ಲಿಂಗಾಯತ ಧರ್ಮ ಸಮಕಾಲೀನ ಅವಶ್ಯಕತೆ’ ಕುರಿತ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

41 ವಚನಕಾರರು 441 ವಚನಗಳಲ್ಲಿ ವೈದಿಕ ಪಠ್ಯವನ್ನು ವಿರೋಧಿಸಿದ್ದಾರೆ. ಬಸವಣ್ಣನವರೇ ತಮ್ಮ 64 ವಚನಗಳಲ್ಲಿ ವೈದಿಕ ಪಠ್ಯ ವಿರೋಧಿಸಿದ್ದಾರೆ. ಆದರೆ ದುರದೃಷ್ಟ ವಶಾತ್ ಇಂದು ಲಿಂಗಾಯತರು ವೈದಿಕ ಧರ್ಮಕ್ಕೆ ಜೋತು ಬೀಳುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ವಚನಗಳು ಭಜನೆಯಲ್ಲ. ಅವು ಚಳವಳಿಯೊಂದರ ಉಪ ಉತ್ಪನ್ನಗಳಾಗಿವೆ. ಕ್ರಾಂತಿಯ ಜೊತೆ ಜೊತೆಯಲ್ಲಿಯೇ ಸೃಷ್ಟಿಯಾದ ಸಾಹಿತ್ಯವೇ ವಚನ ಸಾಹಿತ್ಯ. ಇಂತಹ ಸಾಹಿತ್ಯ ಜಗತ್ತಿನಲ್ಲಿ ಬೇರೆಲ್ಲೂ ಇಲ್ಲ. ವಚನ ಸಾಹಿತ್ಯವು ಕನ್ನಡ ಭಾಷೆಗೆ ಬಹುತ್ವದ ದನಿಯಾಗಿದೆ ಎಂದು ಹೇಳಿದರು.

ಶಿಕ್ಷಣ ವಂಚಿತ ಸಮುದಾಯವು ಶಿಕ್ಷಣಕ್ಕೆ ತೆರೆದುಕೊಳ್ಳು ವಂತೆ ಮಾಡಿದ್ದೇ ಲಿಂಗಾಯತ ಮಠಗಳು. ಲಿಂಗಾಯತರಿಗೆ ಮಾತ್ರ ಮೀಸಲಾದ ಮಠಗಳಾಗಿರದೆ, ಅನ್ನದ ಜೊತೆಗೆ ಅರಿವಿನ ದಾಸೋಹ ನೀಡುತ್ತಾ ತಳ ಸಮುದಾಯಕ್ಕೆ ಶಿಕ್ಷಣ ನೀಡಿದವು. ದಾಸೋಹದ ಮೂಲಕ ಭಕ್ತರು ಆ ಮಠಗಳನ್ನು ಬೆಳೆಸುತ್ತಾ ಬಂದರು.  ಆದರೆ ರಾಜ್ಯದ ವಿತ್ತ ನೀತಿಗೆ ವಿರುದ್ಧವಾಗಿ ಮಠಗಳಿಗೆ ಭಿಕ್ಷೆಯ ರೂಪದಲ್ಲಿ ಹಣ ಕೊಡುತ್ತಾ ದಾಸೋಹ ಪ್ರಜ್ಞೆಯನ್ನೇ ನಾಶ ಗೊಳಿಸಲಾಗುತ್ತಿದೆ ಎಂದರು.

ಲಿಂಗಾಯತ ಧರ್ಮ ಸಂಘಟನಾತ್ಮಕ ಧರ್ಮವಾಗಿದೆ. ಇದು ಏಕ ವ್ಯಕ್ತಿ ಪ್ರಣೀತಿ ಧರ್ಮವಲ್ಲ. ಜಗತ್ತಿನಲ್ಲಿ ಪ್ರಜಾಸಸ್ತಾತ್ಮಕ ನೆಲೆಯಡಿ ಸಂಘಟಿತಗೊಂಡ ಧರ್ಮವೆಂದರೆ ಅದು ಲಿಂಗಾಯತ ಧರ್ಮ ಮಾತ್ರ ಎಂದರು.

ವಿಜಯಪುರದ ಶರಣ ತತ್ವ ಚಿಂತಕ ಡಾ.ಜೆ.ಎಸ್. ಪಾಟೀಲ್  `ಬಸವಣ್ಣ ಸಾಂಸ್ಕೃತಿಕ ನಾಯಕ ಏಕೆ? ‘ ಕುರಿತು ಉಪನ್ಯಾಸ ನೀಡುತ್ತಾ, ಕಳೆದ 10-15 ವರ್ಷಗಳಿಂದಲೂ ಲಿಂಗಾಯತರನ್ನು ಮುಗಿಸುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಲೇ ಇದೆ. ಹಿಂದುತ್ವವಾದಿಗಳ ಮುಖ್ಯ ಗುರಿಯೇ ಕರ್ನಾಟಕವಾಗಿದೆ ಎಂದರು.

ಬಸವ ಬಳಗದ ಅಧ್ಯಕ್ಷ ಎ.ಹೆಚ್. ಹುಚ್ಚಪ್ಪ ಮಾಸ್ಟರ್ ಆರಂಭದಲ್ಲಿ ಧ್ವಜಾರೋಹಣ ನೆರವೇರಿಸಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್, ಜಾಗತೀಕ ಲಿಂಗಾಯತ ಮಹಾಸಭಾದ ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷೆ ಕುಸುಮಾ ಲೋಕೇಶ್, ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಆವರಗೆರೆ ರುದ್ರಮುನಿ ಉಪಸ್ಥಿತರಿದ್ದರು.

ಸಿ.ಟಿ. ಪ್ರೇಮಾ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು. ಸುನೀತಾ ಶಿವಯೋಗಿ ಸ್ವಾಗತಿಸಿದರು. ಬಸವ ಬಳಗದವರು ಧ್ವಜಗೀತೆ ಹಾಡಿದರು. ವೀಣಾ ಮಂಜುನಾಥ್ ವಂದಿಸಿದರು.

error: Content is protected !!