ಮಿತ್ರರನ್ನೇ ಶತ್ರು ಮಾಡುವ ಶಿಕ್ಷಣ ವ್ಯವಸ್ಥೆ ಬೇಡ

ಮಿತ್ರರನ್ನೇ ಶತ್ರು ಮಾಡುವ ಶಿಕ್ಷಣ ವ್ಯವಸ್ಥೆ ಬೇಡ

ಮೌಲ್ಯ ಕಲಿಸದ ಶಿಕ್ಷಣವೇ ಸಮಸ್ಯೆ : ಜಯದೇವ್

ದಾವಣಗೆರೆ, ಜು. 26 – ಅನುಕಂಪ, ಕರುಣೆ, ಸಹಾನುಭೂತಿ ಹಾಗೂ ಸಂವೇದನೆಯಂತಹ ಗುಣಗಳನ್ನು ಬೆಳೆಸದ ಶಿಕ್ಷಣ ವ್ಯವಸ್ಥೆ ಸಮಾಜಕ್ಕೆ ಕೆಡುಕನ್ನೇ ತರುತ್ತದೆ. ಇಂತಹ ಶಿಕ್ಷಣ ಇರುವುದಕ್ಕಿಂತ, ಇಲ್ಲದಿರುವುದೇ ವಾಸಿ ಎಂದು ಚಾಮರಾಜನಗರ ದೀನಬಂಧು ಟ್ರಸ್ಟ್‌ನ ಜಿ.ಎಸ್. ಜಯದೇವ ಅಭಿಪ್ರಾಯಪಟ್ಟಿದ್ದಾರೆ.

ನಗರದ ಸಿದ್ದಗಂಗಾ ವಿದ್ಯಾಸಂಸ್ಥೆಯಲ್ಲಿ ಕರ್ನಾ ಟಕ ಸಾಹಿತ್ಯ ಅಕಾಡೆಮಿ,  ಜೆ.ಹೆಚ್. ಪಟೇಲ್ ಫೌಂಡೇ ಷನ್, ಕರುಣಾ ಜೀವ ಕಲ್ಯಾಣ ಟ್ರಸ್ಟ್ ಸಂಯು ಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಶಿಕ್ಷಣ ಮತ್ತು ಮಕ್ಕಳ ಮನೋವಿಕಾಸ ವಿಷಯಕ್ಕೆ ಸಂಬಂಧಿಸಿದ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮೊದಲ ಸ್ಥಾನ ಗಳಿಸುವುದಕ್ಕೇ ಸಾಕಷ್ಟು ಶಿಕ್ಷಣ ಸಂಸ್ಥೆಗಳು ಆದ್ಯತೆ ನೀಡುತ್ತಿವೆ. ಇದರಿಂದಾಗಿ ಶಾಲೆಯ ಸಹಪಾಠಿಗಳು ಹಾಗೂ ಮಿತ್ರರ ನಡುವೆಯೇ ಸ್ಪರ್ಧೆ ಯಾಗುತ್ತಿದೆ. ಸಹಪಾಠಿಗಳೂ ಸಹ ಶತ್ರುಗಳಾಗಿ ಮಾರ್ಪಡುತ್ತಿದ್ದಾರೆ ಎಂದವರು ವಿಷಾದಿಸಿದರು.

ಎಲ್ಲರನ್ನೂ ಹಿಂದೆ ಹಾಕಿ ಮುಂದೆ ಬರಬೇಕು ಎಂಬ ಮನೋಭಾವವೇ ಸಮಸ್ಯೆಗೆ ಮೂಲ ಕಾರಣ.  ಮಕ್ಕಳ ನಡುವೆ ಇಂತಹ ಸ್ಪರ್ಧೆ ಹುಟ್ಟು ಹಾಕಿ, ಅತಿ ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿಯನ್ನು ವೈಭವೀಕರಿಸುವ ಕೆಲಸವನ್ನು ಸಾಕಷ್ಟು ಶಿಕ್ಷಣ ಸಂಸ್ಥೆಗಳು ಮಾಡುತ್ತಿವೆ. 

ಶಿಕ್ಷಣ ಸಮಾಜದ ಸಮಸ್ಯೆ ಬಗೆಹರಿಸಬೇಕಿತ್ತು. ಆದರೆ, ಮೌಲ್ಯಗಳನ್ನು ಕಲಿಸದ ಶಿಕ್ಷಣ ವ್ಯವಸ್ಥೆ, ಈಗ ತಾನೇ ಸಮಸ್ಯೆಯಾಗಿದೆ ಎಂದು ಜಯದೇವ ವಿಷಾದಿಸಿದರು.

ಮಕ್ಕಳನ್ನು ಸ್ಪರ್ಧೆಗೆ ಒಡ್ಡುವ ಬದಲು ಅವರಲ್ಲಿನ ಪ್ರತಿಭೆಗಳನ್ನು ಹುಡುಕಿ ಪ್ರೋತ್ಸಾಹಿಸಬೇಕು. ಮಕ್ಕಳು ದೊಡ್ಡವರಾದ ಮೇಲೆ ಯಾವುದೇ ಉದ್ಯೋಗಕ್ಕೆ ಹೋದರೂ ಶಿಸ್ತು, ಪ್ರಾಮಾಣಿಕತೆ ಹಾಗೂ ಕರ್ತವ್ಯ ನಿಷ್ಠೆಯಿಂದ ಕೆಲಸ ಮಾಡಬೇಕು. ಆಗ ಮಾತ್ರ ಸಮಾಜ ಬೆಳೆಯುತ್ತದೆ ಎಂದವರು ತಿಳಿಸಿದರು.

ಪೊಲೀಸರಿಂದ ಹಿಡಿದು ನರ್ಸ್‌ಗಳವರೆಗೆ, ವೈದ್ಯರು – ಇಂಜಿನಿಯರ್‌ಗಳವರೆಗೆ ಎಲ್ಲರೂ ಶಿಸ್ತು ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಸಮಾಜಕ್ಕೆ ಬಹು ದೊಡ್ಡ ಕೊಡುಗೆ ನೀಡಿದಂತಾಗುತ್ತದೆ. ಆಗ ಸಮಾಜದಲ್ಲಿನ ಸಮಸ್ಯೆಗಳು ಬಗೆಹರಿಯುತ್ತವೆ. ಇಂತಹ ಗುಣಗಳನ್ನು ಶಿಕ್ಷಣ ಸಂಸ್ಥೆಗಳು ಬೆಳೆಸಬೇಕು ಎಂದು ಜಯದೇವ ಹೇಳಿದರು.

ಮಕ್ಕಳನ್ನು ವೈದ್ಯ ಇಲ್ಲವೇ ಇಂಜಿನಿಯರ್ ಹುದ್ದೆಗಳಿಗೆ ಮಾತ್ರ ಸೀಮಿತಗೊಳಿಸಬಾರದು. ಬಡಿಗೆಯವರಿಂದ ಹಿಡಿದು ಕಲಾವಿದರವರೆಗೆ ಯಾವುದೇ ಕೆಲಸದಲ್ಲಿ ಆಸಕ್ತಿ ತೋರಿದರೂ ಪ್ರೋತ್ಸಾಹಿಸಬೇಕು. ಯಾವುದೇ ಕೆಲಸ ಕೀಳಲ್ಲ. ಯಾವುದೇ ಕೆಲಸ ಮಾಡಿದರೂ ಶಿಸ್ತು ಹಾಗೂ ಪ್ರಾಮಾಣಿಕತೆ ಇರುವಂತಹ ಮನೋಭಾವ ಬೆಳೆಸಬೇಕು ಎಂದವರು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿದ್ಧಗಂಗಾ ವಿದ್ಯಾಸಂಸ್ಥೆಯ ಅಧ್ಯಕ್ಷೆ ಜಸ್ಟಿನ್ ಡಿಸೋಜ, ಜಿ.ಎಸ್. ಜಯದೇವ ಅವರ ತಂದೆ ಹೆಸರಾಂತ ಸಾಹಿತಿ ಹಾಗೂ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರು ತಮ್ಮ ಶಾಲೆಗೆ ಭೇಟಿ ನೀಡಿದ್ದರು. ಆಗ ಶಾಲೆಯ ಮಕ್ಕಳು 150 ಕವನಗಳ ಸಂಕಲನ ರೂಪಿಸಿ ಶಿವರುದ್ರಪ್ಪ ಅವರಿಗೆ ಅರ್ಪಿಸಿದ್ದರು ಎಂದು ಸ್ಮರಿಸಿದರು.

ವಿಜಯಪುರ ಶರಣ ತತ್ವ ಚಿಂತಕ ಡಾ. ಜೆ.ಎಸ್. ಪಾಟೀಲ ಬಸವ ವಾದ ಮತ್ತು ಸಂವಿಧಾನದ ಆಶಯಗಳು ವಿಷಯ ಕುರಿತು ಉಪನ್ಯಾಸ ನೀಡಿದರು.

error: Content is protected !!