ಹೊಸ ಪೈಪ್ ಲೈನ್ ಕಾಮಗಾರಿಗೆ ಮನವಿ

ಹೊಸ ಪೈಪ್ ಲೈನ್ ಕಾಮಗಾರಿಗೆ ಮನವಿ

22 ಕೆರೆಗಳ ಏತ ನೀರಾವರಿ ಯೋಜನೆ ಕಳಪೆ : ಶಾಸಕ ಬಸವಂತಪ್ಪ ಆರೋಪ

ಹೊಸ ಪೈಪ್ ಲೈನ್  ಕಾಮಗಾರಿ ನಡೆಸಲು ಉಪಮುಖ್ಯಮಂತ್ರಿ ಡಿಕೆಶಿ ಸಕಾರಾತ್ಮಕ ಸ್ಪಂದನೆ

ದಾವಣಗೆರೆ, ಜು. 25 – ಕಳಪೆ  ಕಾಮಗಾರಿಯಿಂದ 22 ಕೆರೆಗಳ ಏತ ನೀರಾವರಿ ಯೋಜನೆ ವಿಫಲಗೊಂಡಿದ್ದು, ಕೂಡಲೇ ಹೊಸ ಪೈಪ್ ಲೈನ್ ಕಾಮಗಾರಿ ನಡೆಸಿ ಕೆರೆಗಳಿಗೆ ನೀರು ತುಂಬಿಸಿ ರೈತರಿಗೆ ನೆರವಾಗಬೇಕೆಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಒತ್ತಾಯಿಸಿದರು.

ಬೆಂಗಳೂರಿನ ವಿಧಾನಸೌದ ಮೂರನೇ ಮಹಡಿಯಲ್ಲಿರುವ ಸಮ್ಮೇಳನದ ಸಭಾಂಗಣದಲ್ಲಿ ಗುರುವಾರ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಭದ್ರಾ ಮತ್ತು ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಶಾಸಕರ ಸಭೆಯಲ್ಲಿ ಶಾಸಕ ಬಸವಂತಪ್ಪ ಈ ವಿಷಯ ಪ್ರಸ್ತಾಪಿಸಿದರು.

22 ಕೆರೆಗಳ ಏತ ನೀರಾವರಿ ಯೋಜನೆಯನ್ನು ಎಲ್ ಅಂಡ್ ಟಿ ಕಂಪನಿಗೆ ಟೆಂಡರ್ ನೀಡಲಾಗಿತ್ತು. ಆದರೆ ಕಳಪೆ ಕಾಮಗಾರಿಯಿಂದ ಈ ಯೋಜನೆ ವ್ಯಾಪ್ತಿಯ ಕೆರೆಗಳಿಗೆ ಈವರೆಗೂ ನೀರು ತುಂಬುತ್ತಿಲ್ಲ. ಇದರ ಪರಿಣಾಮ ಕಳೆದ ವರ್ಷ ಭೀಕರ ಬರಗಾಲ ಸಂಭವಿಸಿ ರೈತರು ಅಡಕೆ ತೋಟಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಟ್ಟರು. ಜೊತೆಗೆ ಜನರ ಕುಡಿಯುವ ನೀರಿಗೂ ಬಹಳ ತೊಂದರೆ ಅನುಭವಿಸಿದರು. 

ಹೀಗಾಗಿ ನೀರಾವರಿ ನಿಗಮದಲ್ಲಿ ಉಳಿದಿರುವ 18 ಕೋಟಿ ರೂ. ಜೊತೆಗೆ ಹೆಚ್ಚುವರಿ 50 ಕೋಟಿ ಅನುದಾನ ನೀಡಿ ಹೊಸದಾಗಿ ಪೈಪ್ ಲೈನ್ ಮಾಡಿ ಕೆರೆಗಳನ್ನು ತುಂಬಿಸಲು ಅನುಕೂಲ ಕಲ್ಪಿಸಬೇಕೆಂದು ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿದರು.

ಶಾಸಕ ಬಸವಂತಪ್ಪ ಅವರ ಮಾತಿಗೆ ಸಾಥ್ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಕಳಪೆ ಕಾಮಗಾರಿಯಿಂದ 22 ಕೆರೆಗಳ ಏತ ನೀರಾವರಿ ಯೋಜನೆ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬುತ್ತಿಲ್ಲ. ಈ ನಿಟ್ಟಿನಲ್ಲಿ ಹೊಸದಾಗಿ ಪೈಪ್ ಲೈನ್ ಕಾಮಗಾರಿ ನಡೆಸಿ ರೈತರಿಗೆ ನೆರವಾಗಬೇಕೆಂದರು‌.

ಸಚಿವ ಎಸ್.ಎಸ್‌.ಮಲ್ಲಿಕಾರ್ಜುನ್ ಮತ್ತು ಶಾಸಕ ಬಸವಂತಪ್ಪ ಅವರ ಒತ್ತಾಯಕ್ಕೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿಕುಮಾರ್, ಸಂಬಂಧಪಟ್ಟ ಅಧಿಕಾರಿಗಳಿಗೆ ಹೊಸ ಕಾಮಗಾರಿ ನಡೆಸಲು ನೀಲಿ ನಕ್ಷೆ ಮತ್ತು ಯೋಜನಾ ವೆಚ್ಚ ತಯಾರಿಸುವಂತೆ ಸೂಚನೆ ನೀಡಿದರು.

ಈ ಬಾರಿ ಉತ್ತಮ ಮುಂಗಾರು ಆರಂಭದಿಂದ ಭದ್ರಾ ಜಲಾಶಯ ಭರ್ತಿಯಾಗುತ್ತಿದೆ. ಕೂಡಲೇ ಸಲಹಾ ಸಮಿತಿ ಸಭೆ ಕರೆದು ನೀರು ಬಿಡುಗಡೆಗೆ ದಿನಾಂಕ ನಿಗದಿಗೊಳಿಸಿ ಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ರೈತರ ಹಿತ ಕಾಪಾಡಬೇಕೆಂದು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಶೀಘ್ರದಲ್ಲೇ ಸಲಹಾ ಸಮಿತಿ ಸಭೆ ಕರೆದು ನೀರು ಬಿಡುಗಡೆಗೆ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.

error: Content is protected !!