ಸ್ಕೌಟ್ಸ್-ಗೈಡ್ಸ್ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಅಭಿಮತ
ದಾವಣಗೆರೆ, ಜು. 23 – ಸ್ಕೌಟ್ಸ್ ಮತ್ತು ಗೈಡ್ಸ್ಗಳು ಸನ್ನಡತೆ, ಸದ್ಭಾವನೆ, ಶಿಸ್ತು ಮತ್ತು ಸೇವಾ ಮನೋಭಾವದಂಥ ಶಿಕ್ಷಣ ಪಡೆದು ಭಾರತೀಯ ಸಂಪನ್ಮೂಲ ವ್ಯಕ್ತಿಗಳಾಗಿ ಹೊರಹೊಮ್ಮುತ್ತಿರುವುದು ಹೆಮ್ಮೆಯ ವಿಚಾರ ಎಂದು ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಶ್ಲ್ಯಾಘಿಸಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕದ ಜಿಲ್ಲಾ ಸಂಸ್ಥೆಯಿಂದ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ನಿನ್ನೆ ಏರ್ಪಡಿಸಿದ್ದ ಜಿಲ್ಲಾ ಪುರಸ್ಕಾರ ಪ್ರಶಸ್ತಿ ಹಾಗೂ ಸೇವಾ ಪದಕ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕೇವಲ ಅಂಕ ಗಳಿಕೆಯ ವಿಷಯದ ಜ್ಞಾನ ನೀಡಿದರೆ ಶಿಕ್ಷಣ ಪರಿಪೂರ್ಣವಾಗುವುದಿಲ್ಲ, ಜತೆಗೆ ಸನ್ನಡತೆ, ಸದ್ಭಾವನೆ, ಶಿಸ್ತು, ಪ್ರೀತಿ ಮತ್ತು ಸೇವಾ ಮನೋಭಾವನೆ ನೀಡಿದ್ದಲ್ಲಿ ವಿದ್ಯಾರ್ಥಿಗಳು ಸುಸಂಸ್ಕೃತ ನಾಗರಿಕರಾಗುತ್ತಾರೆ. ಇಂಥ ಶಿಸ್ತಿನ ಶಿಕ್ಷಣ ನೀಡುತ್ತಿರುವ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಉತ್ತಮ ಕೆಲಸ ಮಾಡುತ್ತಿದೆ ಎಂದರು.
ತರಬೇತಿ ಅವಧಿಯಲ್ಲಿ ಸದ್ಗುಣ ಮತ್ತು ಶಿಸ್ತಿನ ತರಬೇತಿ ಪಡೆದು ಭಾರತದ ಆಸ್ತಿಯಾಗಿ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು ಹೊರಹೊಮ್ಮುತ್ತಿರುವುದು ಸಂತಸ ತಂದಿದೆ, ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳನ್ನು ಎಲ್ಲ ಶಾಲೆಗಳಲ್ಲಿ ಅಳವಡಿಸಬೇಕು ಎಂದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಜಿಲ್ಲಾ ಉಪಾಧ್ಯಕ್ಷ ಹೆಚ್.ಬಿ. ಮಂಜುನಾಥ ಮಾತನಾಡಿ, ಬ್ರಿಟಿಷ್ ಆರ್ಮಿ ಅಧಿಕಾರಿ ರಾಬರ್ಟ್ ಬೇಡನ್ ಪಾವೆಲ್ ಸ್ಕೌಟ್ಸ್ ಮತ್ತು ಗೈಡ್ಸ್ನ ಸಂಸ್ಥಾಪಕ. ಇವರು 1857 ಫೆ. 22 ರಲ್ಲಿ ಲಂಡನ್ನಲ್ಲಿ ಜನಿಸಿದ್ದು ಮೊಟ್ಟ ಮೊದಲ ಬಾರಿಗೆ ಸ್ಕೌಟ್ ಚಳವಳಿ ಆರಂಭಿಸಿದರು. ಚಿಕ್ಕಂದಿನಿಂದ ಸಂಯಮಿ ಮತ್ತು ಯೋಧರಾಗಿದ್ದರು, ಭಾರತದಲ್ಲಿ 1909 ರಲ್ಲಿ ಸ್ಕೌಟ್ಸ್ ಆರಂಭವಾಯಿತು. ಪ್ರಸ್ತುತ ರಾಜ್ಯದಲ್ಲಿ 4.5 ಲಕ್ಷ ಸ್ಕೌಟ್ಸ್ ಮತ್ತು ಗೈಡ್ಸ್ ಇದ್ದಾರೆ. ವಿಶ್ವದಲ್ಲಿ 325 ದಶಲಕ್ಷ ಸ್ಕೌಟ್ಸ್ಗಳೂ ಇದ್ದಾರೆ ಎಂದು ತಿಳಿಸಿದರು.
5-10 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಬುಲ್ಬುಲ್ ಮತ್ತು ಗಂಡು ಮಕ್ಕಳಿಗೆ ಕಬ್ಸ್ ಎಂದು, ಪ್ರೌಢ ಶಾಲಾ ಹಂತವನ್ನು ಸ್ಕೌಟ್ಸ್ ಮತ್ತು ಗೈಡ್ಸ್ ಎಂದು, ಕಾಲೇಜು ಹಂತದ ಮಕ್ಕಳನ್ನು ರೋವರ್ಸ್ ಮತ್ತು ರೇಂಜರ್ ಎಂದು ಹಂತ ಹಂತವಾಗಿ ಶಿಸ್ತಿನ ತರಬೇತಿ ನೀಡಲಾಗುವುದು ಎಂದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆಯ ಉಪಾಧ್ಯಕ್ಷ ಆರ್.ಡಿ. ಬದ್ರಿನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ದಾವಣಗೆರೆ ದಕ್ಷಿಣ, ಉತ್ತರ, ಸಿದ್ದಗಂಗಾ ಶಾಲೆಯ ಮಕ್ಕಳು, ಕೊಂಡಜ್ಜಿ ಬಸಪ್ಪ ಶಾಲೆ, ಹರಿಹರ ಸ್ಥಳೀಯ ಸಂಸ್ಥೆ, ಜಗಳೂರು ಸ್ಥಳೀಯ ಸಂಸ್ಥೆ, ಚನ್ನಗಿರಿ ಸ್ಥಳೀಯ ಸಂಸ್ಥೆ, ಹೊನ್ನಾಳಿ ಸ್ಥಳೀಯ ಸಂಸ್ಥೆ, ನ್ಯಾಮತಿ ಸ್ಥಳೀಯ ಸಂಸ್ಥೆ, ಕಬ್ ಬುಲ್ಬುಲ್, ಸ್ಕೌಟ್ಸ್ ಗೈಡ್, ರೋವರ್ಸ್ ಮತ್ತು ರೇಂಜರ್ ವಿಭಾಗದ ಶಾಲಾ ಮಕ್ಕಳಿಗೆ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ. ಕೊಟ್ರೇಶ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕರಿಸಿದ್ದಪ್ಪ. ಎಸ್.ಜಿ, ಜಿಲ್ಲಾ ಮುಖ್ಯ ಆಯುಕ್ತ ಮುರುಘರಾಜೇಂದ್ರ ಚಿಗಟೇರಿ, ಜಿಲ್ಲಾ ಸ್ಕೌಟ್ಸ್ ಆಯುಕ್ತ ಎ.ಪಿ. ಷಡಾಕ್ಷರಪ್ಪ ಹಾಗೂ ಉಪಸ್ಥಿತರಿದ್ದರು.