ರಾಜ್ಯಕ್ಕೆ ಚೊಂಬು ಕೊಟ್ಟ ಕೇಂದ್ರ ಎಸ್ಸೆಸ್‌-ಎಸ್ಸೆಸ್ಸೆಂ ಬಜೆಟ್‌ ಟೀಕೆ

ರಾಜ್ಯಕ್ಕೆ ಚೊಂಬು ಕೊಟ್ಟ ಕೇಂದ್ರ ಎಸ್ಸೆಸ್‌-ಎಸ್ಸೆಸ್ಸೆಂ ಬಜೆಟ್‌ ಟೀಕೆ

ದಾವಣಗೆರೆ, ಜು.23-  ಕೇಂದ್ರ ಸರ್ಕಾರ ಇಂದು ಪ್ರಥಮ ಬಜೆಟ್‍ನಲ್ಲಿ ರಾಜ್ಯಕ್ಕೆ ಏನನ್ನೂ ನೀಡದೇ ರಾಜ್ಯದ ಜನತೆಗೆ ದ್ರೋಹ ಬಗೆದಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಮತ್ತು ಶಾಸಕ ಶಾಮನೂರು ಶಿವಶಂಕರಪ್ಪ ಟೀಕಿಸಿದ್ದಾರೆ.

ಬಜೆಟ್‌ನಲ್ಲಿ ಕರ್ನಾಟಕಕ್ಕೆ ಚೊಂಬು ಕೊಟ್ಟಿದ್ದಾರೆ, ಕರ್ನಾಟಕಕ್ಕೆ ಪಂಗ ನಾಮ ಹಾಕಿದ್ದಾರೆ. ಆಂಧ್ರಪ್ರದೇಶ-ಬಿಹಾರ ರಾಜ್ಯಗಳಿಗೆ ವಿಶೇಷ ಅನುದಾನ ಕೊಟ್ಟಿದ್ದಾರೆ, ಬೇರೆ ರಾಜ್ಯಗಳಿಗೆ ಯಾವುದೇ ಕೊಡುಗೆ ನೀಡಿಲ್ಲ. ಏಕೆಂದರೆ ನರೇಂದ್ರ ಮೋದಿ ಪ್ರಧಾನಿಯಾಗಿ ಉಳಿಯಬೇಕೆಂದರೆ ಆ ರಾಜ್ಯಗಳ ಸಹಕಾರ ಬೇಕು.ಅದಕ್ಕಾಗಿ ವಿಶೇಷ ಅನುದಾನವನ್ನು ಕೊಟ್ಟಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಕರ್ನಾಟಕ ರಾಜ್ಯದ ಪ್ರಮುಖ ಭದ್ರಾ ಮೇಲ್ದಂಡೆ ಯೋಜನೆಗೆ ಕಳೆದ ಬಾರಿಯೇ ಅನುದಾನ ಬಿಡುಗಡೆ ಮಾಡುತ್ತೇವೆ ಎಂದಿದ್ದ ಕೇಂದ್ರ ಸರ್ಕಾರ, ಇಂದು ಮಂಡಿಸಿದ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಯಾವುದೇ ರೀತಿಯಲ್ಲಿ ಪ್ರಸ್ತಾಪಿಸದೇ ದಾವಣಗೆರೆ ಜಿಲ್ಲೆ ಸೇರಿದಂತೆ 7-8 ಜಿಲ್ಲೆಗಳ ರೈತರಿಗೆ ದ್ರೋಹ ಬಗೆದಿದ್ದಾರೆ ಎಂದು ದೂರಿದ್ದಾರೆ.

ಕಲ್ಯಾಣ ಕರ್ನಾಟಕಕ್ಕೆ ಮ್ಯಾಚಿಂಗ್ ಗ್ರ್ಯಾಂಟ್ ಕೊಟ್ಟಿಲ್ಲ. ಭದ್ರಾ ಮೇಲ್ದಂಡೆ, ಮಹದಾಯಿ, ಮೇಕೆದಾಟು ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ. ರೈತರಿಗೂ ಯಾವುದೂ ಪ್ರಯೋಜನ ಆಗಿಲ್ಲ, ರೈತರು-ಬಡವರಿಗೆ ದೊಡ್ಡ ಅನ್ಯಾಯ ಮಾಡಿದ್ದಾರೆ. ಕನಿಷ್ಠ ಬೆಂಬಲ ಬೆಲೆ ನಿಗದಿಗೆ ಕಾಯ್ದೆ ಮಾಡಿ ಅಂತ ರೈತರಿಂದ ಬಹಳದಿನಗಳ ಬೇಡಿಕೆ ಇತ್ತು, ಆದೂ ಆಗಿಲ್ಲ. 

ದಲಿತರ ಬಗ್ಗೆ ಮಾತನಾಡುವ ಇವರು, ಅನುದಾನ ಕಡಿಮೆ ಮಾಡಿದ್ದಾರೆ. ಕಳೆದ ಮಧ್ಯಂತರ ಬಜೆಟ್‍ನಲ್ಲಿ 9409 ಕೋಟಿ ರೂ. ಮೀಸಲಿಟ್ಟಿದ್ದರು. ಆದರೆ ಈಗ 6300 ಕೋಟಿ ರೂ. ಮಾತ್ರ ಮೀಸಲಿಟ್ಟಿದ್ದಾರೆ. ಐವರು ಕೇಂದ್ರ ಸಚಿವರಿದ್ದರೂ ರಾಜ್ಯಕ್ಕೆ ಯಾವುದೇ ಪ್ರಯೋಜನ ಆಗಿಲ್ಲ. ಕೈಗಾರಿಕಾ, ರೈಲ್ವೆ ಕೃಷಿ ಕ್ಷೇತ್ರಗಳಿಗೆ ಯಾವುದೇ ಕೊಡುಗೆ ಇಲ್ಲ. ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಪಂಗನಾಮ ಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

error: Content is protected !!