ತೆರಿಗೆ ವಿನಾಯಿತಿ, ಉದ್ಯೋಗ ಸೃಷ್ಟಿ, ಮೂಲ ಸೌಲಭ್ಯ

ತೆರಿಗೆ ವಿನಾಯಿತಿ, ಉದ್ಯೋಗ ಸೃಷ್ಟಿ, ಮೂಲ ಸೌಲಭ್ಯ

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ಬಿಹಾರ, ಆಂಧ್ರ ಪ್ರದೇಶಗಳಿಗೆ ಮಣೆ

ನವದೆಹಲಿ, ಜು. 23 – ಮಧ್ಯಮ ವರ್ಗಕ್ಕೆ ಆದಾಯ ತೆರಿಗೆ ವಿನಾಯಿತಿ, ಉದ್ಯೋಗ ಸೃಷ್ಟಿ ಯೋಜನೆಗಳಿಗೆ 2 ಲಕ್ಷ ಕೋಟಿ ರೂ. ಹಾಗೂ ಎನ್‌ಡಿಎ ಮಿತ್ರ ಪಕ್ಷಗಳ ಆಡಳಿತ ಇರುವ ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡುವ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ.

ಸತತ ಏಳನೇ ಬಾರಿ ಬಜೆಟ್ ಮಂಡಿಸಿರುವ ಸೀತಾರಾಮನ್, ಗ್ರಾಮೀಣ ಅಭಿವೃದ್ದಿ ಯೋಜನೆಗಳಿಗೆ 2.66 ಲಕ್ಷ ಕೋಟಿ ರೂ. ನೀಡಿದ್ದಾರೆ ಹಾಗೂ ದೀರ್ಘಾವಧಿ ಮೂಲಭೂತ ಸೌಲಭ್ಯ ಯೋಜನೆಗಳಿಗೆ 11.11 ಲಕ್ಷ ಕೋಟಿ ರೂ. ನೀಡುವ ಮೂಲಕ ಆರ್ಥಿಕ ಬೆಳವಣಿಗೆಗೆ ಒತ್ತು ನೀಡಿದ್ದಾರೆ.

ನವೋದ್ಯಮಗಳ ಎಲ್ಲಾ ವರ್ಗಗಳಿಗೆ ಏಂಜಲ್ ತೆರಿಗೆ ರದ್ದುಗೊಳಿಸಲಾಗಿದೆ. ಮೊಬೈಲ್ ಹಾಗೂ ಬಂಗಾರದ ಆಮದಿನ ಸುಂಕ ಇಳಿಸಲಾಗಿದೆ. ಬಂಡವಾಳ ಲಾಭ ತೆರಿಗೆ ಸರಳಗೊಳಿಸಲಾಗಿದೆ. ಆದರೆ ಷೇರು ಗಳ ವಹಿವಾಟಿನ ತೆರಿಗೆ ಹೆಚ್ಚಿಸ ಲಾಗಿದೆ. ಷೇರುಗಳ ವಹಿವಾಟು ತೆರಿಗೆ ಹೆಚ್ಚಿಸಿರುವುದರಿಂದ ಷೇರುಪೇಟೆಯಲ್ಲಿ ಕುಸಿತವಾಗಿದೆ. ವಿಶ್ವ ಈಗ ನೀತಿಗಳ ಅನಿಶ್ಚಿತತೆಯಲ್ಲಿ ಸಿಲುಕಿದೆ. ಆದರೆ ಭಾರತ ಅದಕ್ಕೆ ಅಪವಾದವಾಗಿದೆ. ಭಾರತದ ಆರ್ಥಿಕತೆ ಈಗ ಪ್ರಗತಿಯಲ್ಲಿದ್ದು, ಈ ಪ್ರಗತಿ ಮುಂದುವರಿಯಲಿದೆ ಎಂದು ಬಜೆಟ್ ಮಂಡಿಸುವಾಗ ಸೀತಾರಾಮನ್ ಹೇಳಿದ್ದಾರೆ.

ಬಜೆಟ್‌ನಲ್ಲಿ ಉದ್ಯೋಗ, ಕೌಶಲ್ಯ, ಸಣ್ಣ ಉದ್ಯಮ ಹಾಗೂ ಮಧ್ಯಮ ವರ್ಗಗಳಿಗೆ ವಿಶೇಷ ಆದ್ಯತೆ ನೀಡಲಾಗಿದೆ ಎಂದು ಸೀತಾರಾಮನ್ ತಿಳಿಸಿದ್ದಾರೆ.

4.1 ಕೋಟಿ ಯುವಕರಿಗೆ ಉದ್ಯೋಗ, ಕೌಶಲ್ಯ ಹಾಗೂ ಅವಕಾಶಗಳನ್ನು ಒದಗಿಸುವ ಐದು ವರ್ಷಗಳ ಯೋಜನೆಗೆ 2 ಲಕ್ಷ ಕೋಟಿ ರೂ ಒದಗಿಸಲಾಗಿದೆ. ಶಿಕ್ಷಣ, ಉದ್ಯೋಗ ಹಾಗೂ ಕೌಶಲ್ಯ ಯೋಜನೆಗಳಿಗೆ 1.48 ಲಕ್ಷ ಕೋಟಿ ರೂ. ನೀಡಲಾಗಿದೆ ಸೀತಾರಾಮನ್ ತಿಳಿಸಿದರು.

ಬಿಹಾರದ ಎಕ್ಸ್‌ಪ್ರೆಸ್‌ ವೇ, ವಿದ್ಯುತ್ ಘಟಕ, ಪಾರಂಪರಿಕ ಕಾರಿಡಾರ್ ಹಾಗೂ ಹೊಸ ವಿಮಾನ ನಿಲ್ದಾಣಗಳಿಗಾಗಿ 60,000 ಕೋಟಿ ರೂ. ನೀಡುವುದಾಗಿ ಸೀತಾರಾಮನ್ ಪ್ರಕಟಿಸಿದ್ದಾರೆ. ಬಿಹಾರದ ಮುಖ್ಯಮಂತ್ರಿ ಹಾಗೂ ಜೆಡಿಯು ನಾಯಕ ನಿತೀಶ್ ಕುಮಾರ್ ಅವರ ಬೆಂಬಲ ಕೇಂದ್ರ ಸರ್ಕಾರಕ್ಕೆ ಮಹತ್ವದ್ದಾಗಿದೆ. ಅಲ್ಲದೆ ಮುಂದಿನ ವರ್ಷ ಬಿಹಾರ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ, ಬಜೆಟ್ ಅನುದಾನ ಗಮನಾರ್ಹವಾಗಿದೆ.

ಅದೇ ರೀತಿ ಆಂಧ್ರಪ್ರದೇಶಕ್ಕೆ ಹಲವು ಯೋಜನೆಗಳ ಮೂಲಕ 15,000 ಕೋಟಿ ರೂಪಾಯಿ ಒದಗಿಸಲಾಗಿದೆ. ಆಂಧ್ರಪ್ರದೇಶದ ಆಡಳಿತಾರೂಢ ಟಿಡಿಪಿ ಸಹ ಕೇಂದ್ರ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡುತ್ತಿದೆ.

ಮಧ್ಯಮ ವರ್ಗಕ್ಕೆ ಆದಾಯ ತೆರಿಗೆಯಲ್ಲಿ ವಿನಾಯಿತಿ ನೀಡಲಾಗಿದೆ. ತೆರಿಗೆ ನಿಗದಿಗಾಗಿ ಪರಿಗಣಿಸುವ ವಾರ್ಷಿಕ ಆದಾಯಕ್ಕೆ 75,000 ಡಿಡಕ್ಷನ್ ಪ್ರಕಟಿಸಲಾಗಿದೆ. ಇದು ಕಳೆದ ಬಾರಿಗೆ ಹೋಲಿಸಿದರೆ ಶೇಕಡ 50 ರಷ್ಟು ಹೆಚ್ಚಾಗಿದೆ. ಈ ಕ್ರಮದಿಂದಾಗಿ ತೆರಿಗೆದಾರರಿಗೆ ವರ್ಷಕ್ಕೆ 17,500 ರೂ.ಗಳ ವರೆಗೆ ಉಳಿತಾಯವಾಗಲಿದೆ.

ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡುವ ಸಲುವಾಗಿ ಬಜೆಟ್‌ನಲ್ಲಿ ಕಂಪನಿಗಳಿಗೆ ನೆರವು ನೀಡುವ ಯೋಜನೆಗಳನ್ನು ಪ್ರಕಟಿಸಲಾಗಿದೆ. ಮೊದಲ ಬಾರಿಗೆ ಉದ್ಯೋಗಿಯಾದವರಿಗೆ ಒಂದು ತಿಂಗಳ ವೇತನವನ್ನು ನೀಡಲಾಗುವುದು. ನೇಮಕವಾದ ಮೊದಲ ನಾಲ್ಕು ವರ್ಷಗಳಿಗೆ ನಿವೃತ್ತಿ ನಿಧಿಯಲ್ಲಿ ಉದ್ಯೋಗಿ ಹಾಗೂ ಉದ್ಯೋಗದಾತ ಇಬ್ಬರಿಗೂ ನೆರವು ಸಿಗಲಿದೆ. ಇ.ಪಿ.ಎಫ್.ಒ. ದೇಣಿಗೆಯಲ್ಲಿ ಎರಡು ವರ್ಷಗಳಿಗೆ 3 ಸಾವಿರ ರೂ.ಗಳವರೆಗೆ ಮರು ಪಾವತಿ ಮಾಡಲಾಗುವುದು.

ಕೌಶಲ್ಯವೃದ್ಧಿಗೆ ಇಂಟರ್ನ್‌ಶಿಪ್ ಹಾಗೂ ಉನ್ನತ ಶಿಕ್ಷಣಕ್ಕೆ ಸಬ್ಸಿಡಿ ಸಾಲದ ಯೋಜನೆಗಳನ್ನು ಪ್ರಕಟಿಸಲಾಗಿದೆ. ಭಾರತದಲ್ಲಿ ನಗರ ಪ್ರದೇಶಗಳಲ್ಲಿ ನಿರುದ್ಯೋಗ ದರ ಶೇ. 6.7 ರಷ್ಟು ಇದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಆದರೆ ನಿರುದ್ಯೋಗ ದರ ಇನ್ನೂ ಹೆಚ್ಚಾಗಿದೆ ಎಂದು ಖಾಸಗಿ ಅಧ್ಯಯನಗಳು ತಿಳಿಸಿವೆ.

2024 – 25 ರ ಸಾಲಿನಲ್ಲಿ ವಿತ್ತೀಯ ಕೊರತೆ ಶೇ. 4.9 ರಷ್ಟಿರಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಮಂಡಿಸಲಾಗಿದ್ದು ಹಂಗಾಮಿ ಬಜೆಟ್‌ನಲ್ಲಿ ವಿತ್ತೀಯ ಕೊರತೆ ಶೇ. 5.1 ರಷ್ಟು ಇರಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ತೆರಿಗೆ ಸಂಗ್ರಹ ಹಾಗೂ ರಿಸರ್ವ್ ಬ್ಯಾಂಕ್‌ನಿಂದ ಹೆಚ್ಚು ಡಿವಿಡೆಂಡ್ ದೊರೆತ ಕಾರಣ ವಿತ್ತೀಯ ಕೊರತೆ ಅಂದಾಜು ತಗ್ಗಿಸಲಾಗಿದೆ. ಮಾರುಕಟ್ಟೆಯಿಂದ ಪಡೆಯುವ ಒಟ್ಟು ಸಾಲವನ್ನು ಸಹ 14.01 ಲಕ್ಷ ಕೋಟಿ ರೂ.ಗಳಿಗೆ ಇಳಿಸಲಾಗಿದೆ.

ಕೃಷಿ ಹಾಗೂ ಸಂಬಂಧಿತ ವಲಯಗಳಿಗಾಗಿ 1.52 ಲಕ್ಷ ಕೋಟಿ ರೂ.ಗಳನ್ನು ಒದಗಿಸಲಾಗಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮೂರು ಕೋಟಿ ಕಡಿಮೆ ವೆಚ್ಚದ ಮನೆಗಳನ್ನು ನಿರ್ಮಿಸಲು ಪ್ರಸ್ತಾಪಿಸಲಾಗಿದೆ.

ಸಣ್ಣ ಹಾಗೂ ಮಧ್ಯಮ ಉದ್ಯಮಗಳಿಗೆ ಸಾಲದ ನೆರವು, 12 ಕೈಗಾರಿಕಾ ಪಾರ್ಕ್ ಸ್ಥಾಪನೆ ಹಾಗೂ ಬಾಹ್ಯಾಕಾಶ ವಲಯಕ್ಕೆ 1,000 ಕೋಟಿ ರೂಗಳ ಬಂಡವಾಳ ನಿಧಿ ಸ್ಥಾಪಿಸುವುದಾಗಿಯೂ ಸೀತಾರಾಮನ್ ಪ್ರಕಟಿಸಿದ್ದಾರೆ.

error: Content is protected !!