ನಾಲೆಗೆ ನೀರು ಹರಿಸುವಂತೆ ರೈತರ ಒತ್ತಾಯ

ನಾಲೆಗೆ ನೀರು ಹರಿಸುವಂತೆ ರೈತರ ಒತ್ತಾಯ

ನಾಳಿನ ಹೆದ್ದಾರಿ ಬಂದ್‌ನಲ್ಲಿ ಭಾಗವಹಿಸಿಲು ರೈತರಿಗೆ ಮಾಜಿ ಸಚಿವ ರವೀಂದ್ರನಾಥ್ ಕರೆ

ದಾವಣಗೆರೆ, ಜು. 22- ಭದ್ರಾ ಜಲಾಶಯ ಸುರಕ್ಷತೆ ಮತ್ತು ನಾಲೆ ಆಧುನೀಕರಣಕ್ಕೆ ಒತ್ತಾಯಿಸಿ ಇದೇ ದಿನಾಂಕ 24 ರಂದು ನಡೆಸಲಿರುವ ಹೆದ್ದಾರಿ ಬಂದ್ ಚಳವಳಿಯಲ್ಲಿ ಪಕ್ಷಾತೀತವಾಗಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ, ಮಾಜಿ ಸಚಿವರೂ, ಭಾರತೀಯ ರೈತ ಒಕ್ಕೂಟದ ಗೌರವಾಧ್ಯಕ್ಷ ಎಸ್.ಎ. ರವೀಂದ್ರನಾಥ್ ಕರೆ ನೀಡಿದರು.

ನಗರದ ಅಭಿನವ ರೇಣುಕಾ ಮಂದಿರದ ಆವರಣದಲ್ಲಿ ಭಾರತೀಯ ರೈತ ಒಕ್ಕೂಟದಿಂದ ಕರೆಯಲಾಗಿದ್ದ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಭದ್ರಾ ಜಲಾಶಯದಿಂದ ಕೂಡಲೇ ನಾಲೆಗಳಿಗೆ ನೀರು ಹರಿಸಬೇಕು. ಶೀಘ್ರವೇ ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ರೈತರ ಹಿತದೃಷ್ಟಿಯಿಂದ ಕಾಡಾ ಸಮಿತಿ ಸಭೆ ಕರೆದು, ಸೂಕ್ತ ತೀರ್ಮಾನ ಕೈಗೊಳ್ಳ ಬೇಕೆಂದು ಮನವಿ ಮಾಡಿದರು.

ಸದ್ಯದ ಪರಿಸ್ಥಿತಿಯಲ್ಲಿ ನಾಲೆಗಳಿಗೆ ನೀರು ಹರಿಸುವ ಬಗ್ಗೆ ಚಿಂತನೆ ನಡೆಸ ಬೇಕಾಗಿದೆ. ದುರಸ್ತಿ ಬಗ್ಗೆ ಆಮೇಲೆ ಯೋಚನೆ ಮಾಡೋಣ. ಭಾರತೀಯ ರೈತ ಒಕ್ಕೂಟವಾಗಲೀ, ಭದ್ರಾ ನೀರಿನ ಸಮಸ್ಯೆ ಕುರಿತ ಯಾವುದೇ ಸಭೆಗಳಿ ರಲಿ ಭದ್ರಾ ಅಚ್ಚುಕಟ್ಟುದಾರರು ಕಡ್ಡಾ ಯವಾಗಿ ಭಾಗವಹಿಸಿದಾಗ ಮಾತ್ರ ಸರಿಯಾದ ನಿರ್ಧಾರ ಕೈಗೊಂಡು ಸರ್ಕಾರದ ಗಮನ ಸೆಳೆಯಲು ಸಾಧ್ಯ ಎಂದರು.

ಒಕ್ಕೂಟದ ಕಾರ್ಯದರ್ಶಿ ಶಾಮನೂರು ಹೆಚ್.ಆರ್. ಲಿಂಗರಾಜ್ ಮಾತನಾಡಿ, ಭದ್ರಾ ಜಲಾಶಯದಲ್ಲಿ ಹಾಲಿ 41 ಟಿಎಂಸಿ ನೀರು ಸಂಗ್ರಹವಾಗಿದ್ದು,  ಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ನಾಲೆಗಳಿಗೆ ಕೂಡಲೇ ನೀರು ಹರಿಸಬೇಕೆಂದು ಆಗ್ರಹಿಸಿದರು.

ಸದ್ಯ ಭತ್ತದ ನಾಟಿಗೆ ನೀರಿನ ಅವಶ್ಯಕತೆ ಇದ್ದು, ನೀರು ಹರಿಸಿದರೆ ರೈತರಿಗೆ ಅನುಕೂಲವಾಗಲಿದೆ. ಶೇ. 75 ಭಾಗ ರೈತರು ಭದ್ರಾ ಜಲಾಶಯದ ನೀರನ್ನೇ ನಂಬಿ ಕೃಷಿ ಮಾಡುತ್ತಿದ್ದಾರೆ. ಹಾಗಾಗಿ ದಾವಣಗೆರೆ ಜಿಲ್ಲೆಯವರನ್ನೇ ಕಾಡಾ ಸಮಿತಿ ಅಧ್ಯ ಕ್ಷರನ್ನಾಗಿ ನೇಮಕ ಮಾಡಬೇಕು. ದಾವಣಗೆರೆಯಲ್ಲಿಯೇ ಸಭೆ ನಡೆಯುವಂತಾಗಬೇಕೆಂದರು.

ಒಕ್ಕೂಟದ ಉಪಾಧ್ಯಕ್ಷ ಕೊಂಡಜ್ಜಿ ಎಸ್. ನಾಗರಾಜರಾವ್ ಮಾತನಾಡಿ, ರೈತರು ಜಾಗೃತರಾಗದಿದ್ದರೆ ಮುಂದಿನ ದಿನಗಳಲ್ಲಿ ಸಂಕಷ್ಟ ಎದುರಿಸಬೇಕಾಗುತ್ತದೆ. ನಾಲೆಗಳಿಗೆ ಕೂಡಲೇ ನೀರು ಬಿಡುವಂತೆ ಸರ್ಕಾರದ ಮೇಲೆ ಒತ್ತಡ ತರಬೇಕಾಗಿದೆ ಎಂದರು.

ಭದ್ರಾ ಜಲಾಶಯದಿಂದ ನೀರು ಬಿಡುವ ವಿಚಾರದಲ್ಲಿ ಯಾವುದೇ ರಾಜಕಾರಣ ಮಾಡಬಾರದು. ಪಕ್ಷಾತೀತವಾಗಿ ರೈತರ ಹಿತ ಕಾಪಾಡಲು ಎಲ್ಲರೂ ಮುಂದಾಗಬೇಕು ಎಂದು ಮನವಿ ಮಾಡಿದರು.

ಕಾಡಾ ಸಭೆಗೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಹಾಜರಾಗಬೇಕು. ನಾಲೆಗೆ ನೀರು ಹರಿಸುವ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದರು.

ಕೊಂಡಜ್ಜಿ ಮುದೇಗೌಡಪ್ಪ ಮಾತನಾಡಿ, ಭದ್ರಾ ಜಲಾಶಯದಲ್ಲಿ ಈಗಾಗಲೇ 166.6 ಅಡಿ ನೀರು ಸಂಗ್ರಹವಾಗಿದ್ದು, ಭರ್ತಿಯಾಗಲು ಕೇವಲ 14 ಅಡಿ ಮಾತ್ರ ಬಾಕಿ ಇದೆ. ಈ ತಿಂಗಳ ಅಂತ್ಯದೊಳಗೆ ನಾಲೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿದರು.

ನವೆಂಬರ್‌ವರೆಗೆ ಮಳೆ ಬರುವ ನಿರೀಕ್ಷೆ ಇರುವ ಕಾರಣ ಮುಂಬರುವ ಬೇಸಿಗೆ ಕಾಲದಲ್ಲೂ ನೀರಿನ ಕೊರತೆಯಾಗಲಾರದು. ಇದೀಗ ನೀರು ಹರಿಸಿದರೆ ಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಕೆರೆಗಳನ್ನು ತುಂಬಿಸಿಕೊಂಡರೆ ರೈತರ ಬೆಳೆಗಳಿಗೆ ಅನುಕೂಲವಾಗಲಿದೆ ಎಂಬ ಇಂಗಿತ ವ್ಯಕ್ತಪಡಿಸಿದರು.

ಮುಖಂಡ ಹೆಚ್.ಎನ್. ಶಿವಕುಮಾರ್ ಮಾತನಾಡಿ, ವೇಳಾಪಟ್ಟಿಗೆ ಅನುಗುಣವಾಗಿ, ರೈತರ ಅವಶ್ಯಕತೆಗೆ  ತಕ್ಕಂತೆ ಭದ್ರಾ ನೀರು ಹರಿಸಬೇಕಾಗಿದೆ. ಭದ್ರಾ ಜಲಾಶಯದ ದುರಸ್ತಿ ಮಾಡಿಸುವ ಜೊತೆಗೆ ಸಾರ್ವಜನಿಕರ ಭೇಟಿಗೆ ಅವಕಾಶ ಕಲ್ಪಿಸಬೇಕೆಂದ ಅವರು ಭದ್ರಾ ನೀರು ಪೋಲಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ನೀಡಿದರು.

ಪಾಲಿಕೆ ಮಾಜಿ ಮೇಯರ್ ಹೆಚ್.ಎನ್. ಗುರುನಾಥ್ ಮಾತನಾಡಿ, ಕೂಡಲೇ ನೀರು ಹರಿಸಿದರೆ ಭತ್ತದ ಮಡಿಗೆ ಬೀಜ ಚೆಲ್ಲಲು ಅನುಕೂಲವಾಗಲಿದೆ. ಭದ್ರಾ ಜಲಾಶಯ ದುರಸ್ತಿಗೆ ಇದುವರೆಗೂ ಅನುದಾನ ಬಾರದಿರುವುದು ಬೇಸರದ ಸಂಗತಿಯಾಗಿದೆ. ರೈತರು ಸಂಘಟಿತರಾಗಿ ಹೋರಾಟ ಮಾಡದಿದ್ದರೆ ನೀರು ಪಡೆಯಲು ಸಾಧ್ಯವಿಲ್ಲ ಎಂದರು.

ರೈತ ಮುಖಂಡರಾದ ಶಿವರಾಜ ಪಾಟೀಲ್, ಸಂಗಪ್ಪ ಗೌಡ್ರು, ವಿಜಯಕುಮಾರ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಆವರಗೆರೆ ಸುರೇಶ್, ಇಟಗಿ ಸಿದ್ದೇಶ್ ನಿಟ್ಟೂರು, ದೇವೇಂದ್ರಪ್ಪ, ಕಾಶಿ ವಿಶ್ವನಾಥ್, ಉಜ್ಜಪ್ಪ, ಎ.ಎಂ.ಮಂಜುನಾಥ್, ಕೇಶಪ್ಪ,  ಶಿರಮಗೊಂಡನಹಳ್ಳಿ ಸೇರಿದಂತೆ ಭದ್ರ ಅಚ್ಚುಕಟ್ಟು ಪ್ರದೇಶದ ರೈತ ಮುಖಂಡರು ಹಾಜರಿದ್ದರು.

error: Content is protected !!