ಗುರುವೆಂದರೆ ಅಪಾರ ಶಕ್ತಿ, ಗುರುವನ್ನು ನಾವು ಹಗುರವಾಗಿ ಪರಿಗಣಿಸಬಾರದು, ಗುರುವಿಗೆ ಗುರುತರವಾದ ಶಕ್ತಿ ಇದೆ, ಅದಕ್ಕಾಗಿ ನಾವು ಪರಿಪೂರ್ಣವಾಗಿ ಆದರ, ಗೌರವ, ಶ್ರದ್ಧಾ ಭಕ್ತಿಯಿಂದ ಗುರುವಿನೊಂದಿಗೆ ವರ್ತಿಸಬೇಕು, ಗೌರವಿಸಬೇಕು, ಗುರು ಎಂದರೆ ಒಂದು ದೇಹವೇ ? ಖಂಡಿತಾ ಅಲ್ಲ ಅದೊಂದು ಭಾವಶಕ್ತಿ, ಕಾಲ ಕಾಲಕ್ಕೆ ತಕ್ಕಂತೆ ಅದು ಬೇರೆ-ಬೇರೆ ರೂಪಗಳಲ್ಲಿ ಪ್ರಕಟವಾಗು ತ್ತದೆ, ಆದರೆ ಅದನ್ನು ಅರಿಯುವ ಪ್ರಯತ್ನ, ಎಲ್ಲಾ ಒಂದೇ ಅನ್ನುವ ಸ್ಥಿರ ಭಾವವನ್ನು ಶಿಷ್ಯರು ಹೊಂದಿರಬೇಕು, ಗುರು ವಾಕ್ಯದಲ್ಲಿ ದೃಢನಂಬಿಕೆ, ಆತ್ಮವಿಶ್ವಾಸ ಇಡಬೇಕು,
ಗುರುವಿಗಾಗಿ ಎಲ್ಲರೂ ಕಾಯಬೇಕು, ನಾವೆಲ್ಲರೂ ಗುರುವಿನ ಅಧೀನ, ಗುರುವಿಗಾಗಿ ಕಾಯುವುದರಿಂದ ನಮಗೇನು ಲಾಭ ? ಎಂದರೆ ನಮ್ಮ ಸಂಕಟದ ಸಮಯದಲ್ಲಿ, ನಮ್ಮ ದುಃಖದಲ್ಲಿ, ಕಷ್ಟದಲ್ಲಿ ಗುರುವು ನಮ್ಮನ್ನು ಕಾಯುತ್ತಾನೆ, ಈ ದೃಢ ನಂಬಿಕೆ ನಮಗಿರಬೇಕು, ಇದಕ್ಕಾಗಿ ಗುರುವಿನ ಕರುಣೆಗೆ, ಬರುವಿಕೆಗೆ, ಆಶೀರ್ವಾದಕ್ಕೆ ನಾವೆಲ್ಲ ಕಾಯಬೇಕು,
ಬರೆಯುವವನು, ಬರೆಸುವವನು ಅವನೇ ಆಗಿರುವಾಗ ನಮ್ಮ ಕೆಲಸ ಏನಿದೆ ? ಎಲ್ಲವೂ ಅವನಿಚ್ಛೆಯಂತೆ ನಡೆದಿರಲು, ನಮ್ಮ ಭವಸಾಗರವ ದಾಟಿಸುವ ಹಡಗು ಗುರುವು, ಗುರು ಸಿಕ್ಕಾಗ ಗುರಿ ತನ್ನಷ್ಟಕ್ಕೆ ತಾನೇ ಕಂಡು ಬರುತ್ತದೆ, ಸದ್ಗುರುವಿನ ಕೃಪೆಯಾದಾಗ ಎಲ್ಲವೂ ಸರಿಯಾಗುತ್ತದೆ, ಎಲ್ಲರನ್ನೂ ಒಂದಾಗಿಸಿ, ಸದಾ ಸತ್ ಚಿಂತನೆಯಲ್ಲಿ ಇರಿಸುವುದೇ ಗುರುವಿನ ಗುರಿ, ಅದನ್ನು ಮಾಡುವುದೇ ಒಂದು ಸಾಧನೆ,
ಗುರು ಬ್ರಹ್ಮ ಗುರು ವಿಷ್ಣು
ಗುರುದೇವೋ ಮಹೇಶ್ವರ
ಗುರು ಸಾಕ್ಷಾತ್ ಪರಬ್ರಹ್ಮ
ತಸ್ಮೈ ಶ್ರೀ ಗುರುವೇ ನಮಃ
ನಾವುಗಳು ಗುರುವಿನ ಆಶೀರ್ವಾದ ಪಡೆದು, ಸಾರ್ಥಕ ಜೀವನದ ಸದ್ಗುಣಿಗಳಾಗಬೇಕು, ಸದಾ ಸತ್ಕಾರ್ಯದಲ್ಲಿ ತೊಡಗಬೇಕು. ಸರಳ, ಸಜ್ಜನಿಕೆಯ ಸಾಕಾರ ಮೂರ್ತಿಗಳಾಗಬೇಕು, ಒಂದು ಸುಸಜ್ಜಿತ, ಸುಸಂಸ್ಕೃತ, ಸುಸಂಬದ್ಧ, ಸುವರ್ಣಮಯ ಕುಟುಂಬದ ಸದಸ್ಯರಾಗಬೇಕು, ಒಲವು-ನಿಲುವು, ಆಚಾರ–ವಿಚಾರ, ವ್ಯವಹಾರ–ವಿಹಾರಗಳಲ್ಲಿ ತಮ್ಮದೇ ಛಾಪನ್ನು ಒತ್ತಿ, ದಿಟ್ಟ ಹೆಜ್ಜೆ ಇಡುತ್ತಾ ಮುನ್ನಡೆಯಬೇಕು, ನಮ್ಮ ಕುಟುಂಬದ ಎಲ್ಲಾ ಸದಸ್ಯರ ಮನಗೆದ್ದು, ಪ್ರೀತಿ, ಶಾಂತಿ, ನಂಬಿಕೆ ಆತ್ಮವಿಶ್ವಾಸದಿಂದ ಕುಟುಂಬವನ್ನು ಉನ್ನತಿಯ ಕಡೆಗೆ ಕರೆದೊಯ್ಯಬೇಕು,
ಮಾನವನು ದಾನಿಯಾಗಿರಬೇಕು, ಧ್ಯಾನಿಯಾಗಿರಬೇಕು ಮತ್ತು ಜ್ಞಾನಿಯಾಗಿರಬೇಕು, ಈ ಮೂರೂ ಗುಣಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳಬೇಕು, ಜೀವನದಲ್ಲಿ ಉನ್ನತವಾದದ್ದನ್ನು ಸಾಧಿಸಿ ಮಹಾನ್ ವ್ಯಕ್ತಿಗಳಾಗಬೇಕು,
ನಮ್ಮ ಬಾಳಿಗೆ ದೇವರು ಒಳ್ಳೆಯತನದ ಸಂಸ್ಕಾರ ದೀಕ್ಷೆ ನೀಡಿದ್ದಾನೆ. ಮೊಗ್ಗು ಹೂವಾಗಿ ಬಿರಿಯುವಲ್ಲಿ, ಕಾಯಿ ಹಣ್ಣಾಗಿ ಮಾರ್ಪಡುವಲ್ಲಿ, ಕಾಯಿಯ ಹಸಿರು ಹಳದಿಯಾಗಿ ಕಂಗೊಳಿಸುವಲ್ಲಿ, ಹುಳಿ ಸಿಹಿಯಾಗಿ ಪರಿವರ್ತನೆ ಯಾಗುವಲ್ಲಿ ಎಂತಹ ನೈಸರ್ಗಿಕ ಕ್ರಿಯೆ ಜರುಗುವುದೋ ಅಂತಹ ವ್ಯಕ್ತಿತ್ವವನ್ನು ನಾವು ರೂಢಿಸಿಕೊಳ್ಳಬೇಕು,
‘ಸದುವಿನಯವೇ ಸದಾಶಿವ ನೊಲುಮೆಗೆ ಸಾಕ್ಷಿ’, ‘ಸದುವಿನಯದ ಅಡುಗೆ ಮಾಡಿರಿ’, ‘ಸದುವಿನಯವೇ ಸಂಪತ್ತು’, ಎಂದು ಅರಿತು ನಾವುಗಳು ವಿನಯವಂತರಾಗಿ, ನಮ್ಮ ಕುಟುಂಬದ ಎಲ್ಲಾ ಸದಸ್ಯರನ್ನು ವಿನಯವಂತರನ್ನಾಗಿ ಮಾಡಬೇಕು,
ವಿನಯ ಗುಣ ವ್ಯಕ್ತಿಯ ಸ್ವಾಭಾವತಃ ಬಂದದ್ದಾದರೂ ವಿದ್ಯೆ, ಶಾಸ್ತ್ರ, ಜಾಣ್ಮೆ, ಗುರು ಕೃಪೆ ಮುಂತಾದವುಗಳ ಸಹಾಯದಿಂದ ಅದಕ್ಕೊಂದು ಮೆರುಗು ಮೂಡುತ್ತದೆ, ಅಂತಹ ಮೆರಗನ್ನು ನಾವು ಪಡೆಯಬೇಕು ,ದೇವರು ಹಾಗೂ ಗುರುವು ನಮ್ಮ ಈ ಭವಸಾಗರವನ್ನು ದಾಟಿಸಿ, ಉನ್ನತಿಯ ಕಡೆಗೆ ಕರೆದೊಯ್ಯಲಿ, ಜೀವನ್ಮುಕ್ತಿಯ ನೀಡಲಿ, ನಮ್ಮೆಲ್ಲರಿಗೂ ಇನ್ನೂ ಹೆಚ್ಚಿನ ಸಕಲ ಸಿರಿ ಸಂಪತ್ತನ್ನು, ಆಯುರಾರೋಗ್ಯವನ್ನು ಕರುಣಿಸಲಿ, ಶುಭವಾಗಲಿ, ಗುರುಭ್ಯೋ ನಮಃ
– ಜೆಂಬಿಗಿ ಮೃತ್ಯುಂಜಯ, ಕನ್ನಡ ಉಪನ್ಯಾಸಕರು, ದಾವಣಗೆರೆ