ಜಿಎಸ್‌ಟಿ ಗೊಂದಲವಿಲ್ಲದೆ ಉದ್ಯಮ ಸ್ನೇಹಿಯಾಗಬೇಕಿದೆ

ಜಿಎಸ್‌ಟಿ ಗೊಂದಲವಿಲ್ಲದೆ ಉದ್ಯಮ ಸ್ನೇಹಿಯಾಗಬೇಕಿದೆ

ಜಿಎಸ್‌ಟಿ ಕುರಿತ ವಿಚಾರ ಸಂಕಿರಣದಲ್ಲಿ ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತ ಎನ್.ಎಸ್. ನಾಗಸ್ವಾಮಿ

ದಾವಣಗೆರೆ, ಜು. 18 – ಜಿ.ಎಸ್.ಟಿ. ನಿಯಮಗಳ ಜಾರಿ ಸಂಬಂಧದಲ್ಲಿ ಇರುವ ಗೊಂದಲ ಹಾಗೂ ಅಸ್ಪಷ್ಟತೆಗಳನ್ನು ನಿವಾರಿಸಿಕೊಳ್ಳಬೇಕಿದೆ ಎಂದು ಬಳ್ಳಾರಿ ಕೇಂದ್ರ ವಲಯದ ವಾಣಿಜ್ಯ ತೆರಿಗೆಗಳ (ಜಾರಿ) ಜಂಟಿ ಆಯುಕ್ತ ಎನ್.ಎಸ್. ನಾಗಸ್ವಾಮಿ ಹೇಳಿದ್ದಾರೆ.

ದಾವಣಗೆರೆ ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ವತಿಯಿಂದ ನಗರದ ಲೆಕ್ಕಪರಿಶೋಧಕರ ಭವನದಲ್ಲಿ ಆಯೋಜಿಸಲಾಗಿದ್ದ ಜಿ.ಎಸ್.ಟಿ. ಕಾಯ್ದೆ ಕುರಿತ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಯಾವುದೇ ಕಾಯ್ದೆ ಇಲ್ಲವೇ ನಿಯಮಗಳು ಸಿದ್ಧಾಂತದಲ್ಲಿ ಸ್ಪಷ್ಟವಾಗಿರುತ್ತವೆ. ಆದರೆ, ಜಾರಿಗೆ ತರುವಾಗ ಗೊಂದಲ ಹಾಗೂ ಅಸ್ಪಷ್ಟತೆಗಳಿರುತ್ತವೆ. ತೆರಿಗೆ ನಿಯಮಗಳ ವಿಷಯದಲ್ಲಂತೂ ಗೊಂದಲಗಳು ಇನ್ನಷ್ಟು ಹೆಚ್ಚಾಗುತ್ತವೆ ಎಂದವರು ಹೇಳಿದರು.

ಹಾಗೆಂದ ಮಾತ್ರಕ್ಕೆ, ಪ್ರತಿಯೊಬ್ಬ ತೆರಿಗೆ ಅಧಿಕಾರಿಯೂ ತಾನು ಭಾವಿಸಿದ ರೀತಿಯಲ್ಲಿ ನಿಯಮಗಳನ್ನು ಜಾರಿಗೆ ತರಲಾಗದು. ಉದ್ಯಮ ಸ್ನೇಹಿ ವ್ಯವಸ್ಥೆ ಜಾರಿಯಾಗಬೇಕಾದಲ್ಲಿ ಗೊಂದಲ ಹಾಗೂ ಅಸ್ಪಷ್ಟತೆಗಳನ್ನು ನಿವಾರಿಸಬೇಕಿದೆ ಎಂದು ನಾಗಸ್ವಾಮಿ ತಿಳಿಸಿದರು.

ನಿಯಮಗಳನ್ನು ಸರಿಯಾಗಿ ಅರ್ಥೈಸಿಕೊಂಡು ಜಾರಿಗೆ ತರಲು ತೆರಿಗೆ ಸಲಹೆಗಾರರು ಹಾಗೂ ಅಧಿಕಾರಿಗಳು ಜೊತೆಯಾಗಿ ಕಾರ್ಯನಿರ್ವಹಿಸಬೇಕಿದೆ ಎಂದವರು ಕರೆ ನೀಡಿದರು.

ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಪ್ರಾಕ್ಟಿಷನರ್ಸ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷ ಶ್ರೀಧರ ಪಾರ್ಥಸಾರಥಿ ಮಾತನಾಡಿ, ತೆರಿಗೆ ಸಲಹೆಗಾರರು ಜಿ.ಎಸ್.ಟಿ. ಕಾಯ್ದೆಯನ್ನು ಸರಿಯಾಗಿ ತಿಳಿದರೆ ಮಾತ್ರ ಉಳಿಯಲು ಹಾಗೂ ಬೆಳೆಯಲು ಸಾಧ್ಯ ಎಂದು ಹೇಳಿದರು.

ನ್ಯಾಯಾಲಯದಲ್ಲಿ ವಕೀಲರು ಇಲ್ಲವೇ ಕಕ್ಷಿದಾರರಿಗೆ ಮಾತ್ರ ವಾದ ಮಂಡಿಸಲು ಅವಕಾಶ ಇದೆ. ಅದೇ ರೀತಿ ತೆರಿಗೆ ವಿಷಯದಲ್ಲೂ ಸಲಹೆ ನೀಡುವವರ ಬಗ್ಗೆ ನಿರ್ಬಂಧಗಳಿವೆ. ತೆರಿಗೆ ವಿಷಯದಲ್ಲಿ ಅನಧಿಕೃತ ವ್ಯಕ್ತಿಗಳ ಪ್ರವೇಶ ನಿರ್ಬಂಧಿಸಬೇಕಿದೆ ಎಂದು ತಿಳಿಸಿದರು.

ರಾಜ್ಯ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ಎಸ್. ನಂಜುಂಡ ಪ್ರಸಾದ್ ಮಾತನಾಡಿ, ಮುಂದಿನ ತಿಂಗಳು ಆಗಸ್ಟ್ 4-5ರಂದು ಮೈಸೂರಿನಲ್ಲಿ ರಾಜ್ಯ ತೆರಿಗೆ ಸಲಹೆಗಾರರ ಸಮಾವೇಶ ಆಯೋಜಿಸಲಾಗಿದೆ ಎಂದರು.

ದಾವಣಗೆರೆ ವಿಭಾಗದ ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತ ಹೆಚ್. ವೀರೇಂದ್ರ ಪಾಟೀಲ್, ದಾವಣಗೆರೆ ಲೆಕ್ಕ ಪರಿಶೋಧಕರ ಸಂಘದ ಅಧ್ಯಕ್ಷ ಉಮೇಶ್ ಶೆಟ್ಟಿ, ತೆರಿಗೆ ಸಲಹೆಗಾರರ ಸಂಘದ ದಾವಣಗೆರೆ ವಿಭಾಗದ ವಲಯ ಉಪಾಧ್ಯಕ್ಷ ಜಂಬಿಗಿ ರಾಧೇಶ್, ಲೆಕ್ಕ ಪರಿಶೋಧಕರಾದ ಅನ್ನಪೂರ್ಣ ಕಬ್ರ, ಟಿ.ಆರ್. ರಾಜೇಶ್ ಕುಮಾರ್ ಹಾಗೂ ಜತಿನ್ ಅನಿಲ್ ಕ್ರಿಸ್ಟೋಫರ್, ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಗೌರವಾಧ್ಯಕ್ಷ ಡಿ.ಆರ್. ಶಂಕರ್, ಕಾರ್ಯದರ್ಶಿ ಜಿ. ಮಹಾಂತೇಶ್, ಜಂಟಿ ಕಾರ್ಯದರ್ಶಿ ಎನ್.ವಿ. ಶಿವಪ್ರಸನ್ನ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ಹೆಚ್.ಟಿ. ಸುಧೀಂದ್ರ ರಾವ್ ಅಧ್ಯಕ್ಷತೆ ವಹಿಸಿದ್ದರು.

error: Content is protected !!