ಲೀಡ್ ಬ್ಯಾಂಕ್ ಸಭೆಯಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಸೂಚನೆ
ದಾವಣಗೆರೆ, ಜು. 18- ಶೈಕ್ಷಣಿಕ ಸಾಲಕ್ಕಾಗಿ ವಿದ್ಯಾರ್ಥಿಗಳನ್ನು ಅಲೆದಾಡಿಸ ಬೇಡಿ ಎಂದು ಬ್ಯಾಂಕ್ ಅಧಿಕಾರಿಗಳಿಗೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ತಾಕೀತು ಮಾಡಿದರು.
ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಮ್ಮ ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ಪೋಷಕರು ಭಿಕ್ಷಾಪಾತ್ರೆ ಹಿಡಿದು ಸಂಘ-ಸಂಸ್ಥೆಗಳ ನೆರವಿಗಾಗಿ ಓಡಾಡುವಂತಾಗಿದೆ. ಅರ್ಹರನ್ನು ಅಲೆದಾಡಿಸದೇ ಶೈಕ್ಷಣಿಕ ಸಾಲ ಮಂಜೂರು ಮಾಡಿ ಎಂದು ಸೂಚಿಸಿದರು.
ವಿಶ್ವವಿದ್ಯಾನಿಲಯ ಹಾಗೂ ಕಾಲೇಜು ಗಳಲ್ಲಿ ಶೈಕ್ಷಣಿಕ ಸಾಲ ಪಡೆಯಲು ಇರುವ ಅರ್ಹತೆಗಳು, ನಿಬಂಧನೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊ ಳ್ಳುವಂತೆ ಡಾ.ಪ್ರಭಾ ಸಲಹೆ ನೀಡಿದರು.
ಸೌಜನ್ಯದಿಂದ ವರ್ತಿಸಿ
ಸಾಲದ ಅರ್ಜಿ ತಿರಸ್ಕರಿಸಲು ಸಿಬಿಲ್ ಸ್ಕೋರ್ ಕಡಿಮೆ ಎಂಬ ಕಾರಣವೇ ನೆಪವಾಗಬಾರದು. ಸಾರ್ವಜನಿಕರು ಬ್ಯಾಂಕ್ಗಳಿಗೆ ಬಂದಾಗ ಸೌಜನ್ಯದಿಂದ ವರ್ತಿಸಿ, ಅರ್ಜಿ ಅರ್ಹವಾಗಿದ್ದರೆ ಕೂಡಲೇ ಸಾಲ ಮಂಜೂರು ಮಾಡ ಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಬ್ಯಾಂಕ್ ಅಧಿಕಾರಿ ಗಳಿಗೆ ಸೂಚಿಸಿದರು. ಸಭೆಗೂ ಮುನ್ನ ಪೂರ್ವಭಾವಿ ಸಭೆ ನಡೆಸಿ, ಅಂಕಿ-ಅಂಶಗಳೊಂದಿಗೆ ಸಭೆಗೆ ಆಗಮಿಸು ವಂತೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸಂಸದರು ಸೂಚಿಸಿದರು.
ಗೃಹ ಲಕ್ಷ್ಮಿ ಹಣವೂ ಸಾಲಕ್ಕೆ…ಜಿ.ಪಂ. ಸಿಇಒ ಅಸಮಾಧಾನ
ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಹಣವನ್ನು ಸಾಲಕ್ಕೆ ಜಮಾ ಮಾಡಿಕೊಳ್ಳಲಾಗುತ್ತಿದೆ. ಈ ಬಗ್ಗೆ ಶಾಸಕರ ಜನಸ್ಪಂದನ ಕಾರ್ಯಕ್ರಮದಲ್ಲಿ ಫಲಾನುಭವಿಯೊಬ್ಬರು ದೂರು ನೀಡಿದ್ದರು.
ಬೆಳೆ ಪರಿಹಾರ, ಪಿಂಚಣಿ ಅಥವಾ ಸರ್ಕಾರ ನೀಡುವ ಯೋಜನೆಗಳ ಹಣವನ್ನು ಸಾಲಕ್ಕೆ ಹೊಂದಾಣಿಕೆ ಮಾಡಿಕೊಳ್ಳದಂತೆ ಅನೇಕ ಬಾರಿ ಹೇಳಿದ್ದರೂ ಇಂತಹ ಪ್ರಕರಣಗಳು ಮರುಕಳಿಸುತ್ತಿವೆ. ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ಜಿ.ಪಂ. ಸಿಇಒ ಸುರೇಶ್ ಇಟ್ನಾಳ್ ಹೇಳಿದರು.
ಸರ್ಕಾರದ ವಿವಿಧ ಯೋಜನೆಗಳಿಗಾಗಿ ಫಲಾನುಭವಿಗಳು ಸಲ್ಲಿಸಲಾಗಿರುವ ಅರ್ಜಿ ಗಳನ್ನು ಅರ್ಹತೆ ಆಧಾರದ ಮೇಲೆ 15 ದಿನಗಳೊಳಗೆ ಇತ್ಯರ್ಥಪಡಿಸುಂತೆ ಹೇಳಿದ ಸಂಸದರು, ಸಭೆಯಲ್ಲಿ ಪ್ರಶ್ನಿಸಿದಾಗ ಮಾತ್ರ ಅರ್ಜಿಗಳ ಇತ್ಯರ್ಥಕ್ಕೆ ಸಮಯ ಕೇಳಬಾರದು. ಅರ್ಜಿ ತಿರಸ್ಕರಿಸಿದರೆ ಅದಕ್ಕೆ ಸೂಕ್ತ ಕಾರಣ ವನ್ನು ಅರ್ಜಿದಾರರಿಗೆ ತಿಳಿಸಬೇಕು ಎಂದರು.
ಜಿಲ್ಲಾ ಸಹಕಾರ ಬ್ಯಾಂಕ್‌ನಲ್ಲಿ ರೈತರಿಗೆ ಸಾಲ ನೀಡುತ್ತಿಲ್ಲ ಎಂಬ ದೂರುಗಳು ಬರುತ್ತಿವೆ, ಏಕೆ ಎಂದು ಸಂಸದರು ಪ್ರಶ್ನಿಸಿದಾಗ, 2022 ನೇ ಸಾಲಿನಲ್ಲಿ 641 ಕೋಟಿ ಸಾಲ ವಿತರಿಸ ಲಾಗಿತ್ತು. 2023ರಲ್ಲಿ 838 ಹಾಗೂ 2024ರಲ್ಲಿ 840 ಕೋಟಿ ರೂ. ಸಾಲ ವಿತರಿಸಲಾಗಿದೆ. ವಸೂಲಾತಿ ಕಡಿಮೆಯಾಗಿದ್ದು, ನಬಾರ್ಡ್ ಹಾಗೂ ಅಪೆಕ್ಸ್ ಬ್ಯಾಂಕ್‌ನಿಂದ ಹಣ ಕಡಿಮೆ ನೀಡಲಾಗಿದೆ ಎಂದು ಬ್ಯಾಂಕ್ ಅಧಿಕಾರಿ ಉತ್ತರಿಸಿದರು. ಡಿಸಿಸಿ ಬ್ಯಾಂಕ್ ಬಾಕಿ ಇರುವ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡುವಂತೆ ಸಂಸದರು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಸಿಇಒ ಸುರೇಶ್ ಬಿ. ಇಟ್ನಾಳ್, ಆರ್‌ಬಿಐ ಬೆಂಗಳೂರು ವಿಭಾಗದ ವೆಂಕಟರಾಮಯ್ಯ ಟಿ.ಎನ್., ನಬಾರ್ಡ್ ಅಧಿಕಾರಿ ರಶ್ಮಿ ರೇಖಾ, ಲೀಡ್ ಬ್ಯಾಂಕ್ ವ್ಯವಸ್ಥಾಪಕಿ ಶೈಲಾ ಕೆ.ಮುರಾರಿ, ಕಮಲೇಶ್ ಇದ್ದರು.