ಭದ್ರಾ ಒಳ ಹರಿವು ಮತ್ತಷ್ಟು ಹೆಚ್ಚಳ

ಭದ್ರಾ ಒಳ ಹರಿವು ಮತ್ತಷ್ಟು ಹೆಚ್ಚಳ

ಶಿವಮೊಗ್ಗ, ಜು. 18 – ಮಲೆನಾಡಿನಲ್ಲಿ ಮುಂಗಾರು  ಮಳೆ ಧಾರಾಕಾರವಾಗಿ ಸುರಿಯುತ್ತಿದ್ದು ತುಂಗಾ ಮತ್ತು ಭದ್ರಾ ನದಿಗಳಲ್ಲಿ ನೀರಿನ ಹರಿವು ಗುರುವಾರ ಮತ್ತಷ್ಟು ಹೆಚ್ಚಾಗಿದೆ. 

ಗಾಜನೂರಿನ ತುಂಗಾ ಜಲಾಶಯಕ್ಕೆ ಸುಮಾರು 80 ಸಾವಿರ ಕ್ಯೂಸೆಕ್ಸ್ ಒಳಹರಿವು ಇದ್ದು ಅಷ್ಟೇ ಪ್ರಮಾಣದ ನೀರನ್ನು ಡ್ಯಾಮ್ ನ ಎಲ್ಲಾ ಕ್ರೆಸ್ಟ್ ಗೇಟುಗಳನ್ನು ತೆರೆದು ನದಿಗೆ ಬಿಡಲಾಗಿದೆ. ಇದರಿಂದಾಗಿ ತುಂಗಭದ್ರಾ ನದಿಯಲ್ಲಿ ನೀರು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಸುಕ್ಷೇತ್ರ ಉಕ್ಕಡಗಾತ್ರಿಯಲ್ಲಿ ನದಿ ಹಿನ್ನೀರು ಇನ್ನೂ ಹೆಚ್ಚಾಗಿ ಪ್ರವಾಹ ಭೀತಿ ಎದುರಾಗಿದೆ. ಫತ್ತೇಪುರ -ಉಕ್ಕಡಗಾತ್ರಿ ನಡುವೆ ನದಿ ಹಿನ್ನೀರಿನಲ್ಲಿ ಜಲಾವೃತ ಗೊಂಡಿರುವ ಸಂಪರ್ಕ ಸೇತುವೆ ಮತ್ತು ತೋಟ,  ಗದ್ದೆಗಳನ್ನು ಹರಿಹರ ತಹಶೀಲ್ದಾರ್ ಗುರುಬಸವರಾಜ್   ವೀಕ್ಷಣೆ ಮಾಡಿದರು.

ಭದ್ರಾ ಒಳ ಹರಿವು ಮತ್ತಷ್ಟು ಹೆಚ್ಚಳ : ಭದ್ರಾ ಜಲಾಶಯಕ್ಕೆ ಬುಧವಾರ 35 ಸಾವಿರ ಕ್ಯೂಸೆಕ್ಸ್ ಇದ್ದ ಒಳ ಹರಿವು ಗುರುವಾರ ಸಂಜೆ 45 ಸಾವಿರ ಕ್ಯೂಸೆಕ್ಸ್ ಗೆ ಏರಿಕೆ ಆಗಿತ್ತು. ಜಲಾಶಯದ ನೀರಿನ ಮಟ್ಟ 155 ಅಡಿ ದಾಟಿದ್ದು ಕಳೆದ ವರ್ಷಕ್ಕಿಂತ 14 ಅಡಿ ನೀರು ಹೆಚ್ಚು ಸಂಗ್ರಹವಾಗಿದೆ. ಜಲಾಶಯ ಭರ್ತಿಗೆ 30 ಅಡಿ ಭಾಕಿ ಇದ್ದು, ಜಲಾಶಯದ ಗರಿಷ್ಠ ಮಟ್ಟ 186 ಅಡಿಗಳಾಗಿರುತ್ತದೆ.

ಕಳೆದ ವರ್ಷ ಈ ದಿನ ಜಲಾಶಯದಲ್ಲಿ 141 ಅಡಿ ನೀರಿತ್ತು. ಭದ್ರಾ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗುತ್ತಿರುವುದು ಅಚ್ಚುಕಟ್ಟಿನ ರೈತರಿಗೆ ಖುಷಿ ತಂದಿದೆ.

ಹೊಸಪೇಟೆ ಜಲಾಶಯಕ್ಕೆ 1 ಲಕ್ಷ ಕ್ಯೂಸೆಕ್ಸ್ ಒಳಹರಿವು

ಗಾಜನೂರಿನ ತುಂಗಾ ಜಲಾಶಯದಿಂದ ಬಿಡುಗಡೆ ಮಾಡಿರುವ 80 ಸಾವಿರ ಕ್ಯೂಸೆಕ್ಸ್ ನೀರಿನ ಜೊತೆಗೆ ಇತರೆ ಹಳ್ಳ-ಕೊಳ್ಳ ನದಿಗಳ ನೀರು ಸೇರಿ ಒಟ್ಟು 1 ಲಕ್ಷದ 10 ಸಾವಿರ ಕ್ಯೂಸೆಕ್ಸ್ ನೀರು ಹೊಸಪೇಟೆಯ ತುಂಗಭದ್ರಾ ಜಲಾಶಯಕ್ಕೆ ಹರಿದು ಬಂದಿದೆ. ಇದರಿಂದಾಗಿ ಜಲಾಶಯದ ನೀರಿನ ಮಟ್ಟ 1615 ಅಡಿ ಆಗಿದ್ದು, 48 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದ ಗರಿಷ್ಠ ಮಟ್ಟ 1633 ಅಡಿ ಇದೆ.

error: Content is protected !!