ದಾವಣಗೆರೆ, ಜು.17- ಜಿಲ್ಲೆಯ ರೈತರ ಜೀವನಾಡಿಯಾಗಿರುವ ಭದ್ರಾ ಜಲಾಶಯದ ಜಲಾನಯನ ಪ್ರದೇಶದಲ್ಲಿ ಪುನರ್ವಸು ಮಳೆ ಪುರುಸೊತ್ತು ಇಲ್ಲದೇ ಸುರಿಯುತ್ತಿದೆ. ಒಳಹರಿವಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರಿಂದ ರೈತರಲ್ಲಿ ಮಂದಹಾಸ ಮೂಡಿದ್ದು, ಕಳೆದ ಬೇಸಿಗೆ ಹಂಗಾಮಿನಲ್ಲಿ ಭೀಕರ ಬಿಸಿಲಿನ ತಾಪಮಾನದಿಂದ ಬಸವಳಿದ ರೈತರು, ಪ್ರಸ್ತುತ ಹಂಗಾಮಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ಜಮೀನು ಉಳುಮೆ ಮಾಡಿಕೊಂಡು ಭತ್ತದ ಬೀಜ ಬಿತ್ತನೆಗೆ ಸಜ್ಜಾಗಿ ಡ್ಯಾಂನ ಒಳಹರಿವಿನ ಪ್ರಮಾಣವನ್ನು ಜಾತಕ ಪಕ್ಷಿಯಂತೆ ನೋಡುತ್ತಿದ್ದಾರೆ ಎಂದು ಜಿಲ್ಲಾ ಬಿಜೆಪಿ ರೈತ ಮೋರ್ಚಾವು ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಅವರನ್ನು ನಿನ್ನೆ ಭೇಟಿ ಮಾಡಿ ಮನವಿ ಸಲ್ಲಿಸಿತು.
ಪ್ರಸ್ತುತ ದಿನದಲ್ಲಿ ಭದ್ರಾ ಡ್ಯಾಂನ ಒಳಹರಿವು 27839 ಕ್ಯೂಸೆಕ್ ಇದ್ದು, ನೀರಿನ ಮಟ್ಟ 144 ಅಡಿ 7 ಇಂಚು ಇದೆ. 30.142 ಟಿಎಂಸಿ ಯಷ್ಟು ನೀರಿನ ಸಂಗ್ರಹ ಇದೆ. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗುತ್ತದೆ. ಹೀಗಾಗಿ ಈ ಸಲ ಭದ್ರಾ ಡ್ಯಾಂ ತುಂಬುತ್ತದೆ ಎಂದು ರೈತರಲ್ಲಿ ಭರವಸೆ ಮೂಡಿದೆ. ಇದರಿಂದ ದಾವಣಗೆರೆ ಜಿಲ್ಲೆಯಲ್ಲಿ 65847 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲು ಅಣಿಯಾಗುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಗೆ ತಿಳಿಸಿದರು.
ತಕ್ಷಣ ಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ನಡೆಸಬೇಕು. ಭದ್ರಾ ಡ್ಯಾಂನಲ್ಲಿ ನೀರಿನ ಲಭ್ಯತೆಗೆ ಅನುಸಾರವಾಗಿ ನೀರು ಬಿಡುವ ನಿರ್ಧಾರ ಮಾಡಬೇಕು. ಸ್ಲೂಯಿಸ್ ಗೇಟ್ ಮೂಲಕ ನೀರು ಸೋರಿಕೆಯಾಗುತ್ತಿದೆ. ಸೋರಿಕೆ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು. ಸ್ಲೂಯಿಸ್ ಭದ್ರತೆ ಬಗ್ಗೆ ಸ್ಪಷ್ಟನೆ ನೀಡಬೇಕು. ಹಳೆಯದಾಗಿರುವ ಡ್ಯಾಂ ಗೇಟ್ಗಳನ್ನು ಸರಿಪಡಿಸಿ, ಗಟ್ಟಿಗೊಳಿಸಬೇಕು ಹಾಗೂ ಜರ್ಮನ್ ತಂತ್ರಜ್ಞಾನದಡಿ ಸಿದ್ಧಪಡಿಸಿರುವ ಡ್ಯಾಂ ನಿರ್ವಹಣೆಯ ಕ್ರೇನ್ಗಳನ್ನು ರೀ ಕಂಡೀಷನ್ ಮಾಡಿಸಬೇಕೆಂದು ಹೀಗೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಅವರು, ರೈತರ ಕುಂದು – ಕೊರತೆಗಳನ್ನು ಸಮಾಧಾನದಿಂದ ಆಲಿಸಿದರು.
ಶಿವಮೊಗ್ಗ ಜಿಲ್ಲಾಧಿಕಾರಿ ಮತ್ತು ಐಸಿಸಿ ಅಧ್ಯಕ್ಷರೂ ಆದ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರನ್ನು ಸಂಪರ್ಕ ಮಾಡಿ, ಶೀಘ್ರ ಐಸಿಸಿ ಸಭೆ ಕರೆಯಲು ಆಗ್ರಹಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಈ ಹಂಗಾಮಿನಲ್ಲಿ ದಾವಣಗೆರೆ ಜಿಲ್ಲೆಯ ರೈತರು ಭತ್ತ ಬೆಳೆಯಲು ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ರೈತರಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರೈತ ಮೋರ್ಚಾ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್, ಜಿಲ್ಲಾ ಬಿಜೆಪಿ ವಕ್ತಾರ ಕೊಳೇನಹಳ್ಳಿ ಬಿ.ಎಂ.ಸತೀಶ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೇಬಾಳ್, ಮಾಜಿ ಮೇಯರ್ ಹೆಚ್.ಎನ್.ಗುರುನಾಥ್, ಮಾಜಿ ಎಪಿಎಂಸಿ ಅಧ್ಯಕ್ಷ ಕುಂದುವಾಡ ಗಣೇಶಪ್ಪ, ವಾಟರ್ ಮಂಜುನಾಥ, ಮತ್ತಿ ಪಿ.ಎಂ.ಮಂಜುನಾಥ, ಹೂವಿನಮಡು ಪ್ರಭು, ಮತ್ತೇರ ರೇವಣಸಿದ್ದಪ್ಪ, ಹೆಚ್.ಜಿ.ಮಂಜಪ್ಪ ಮುಂತಾದವರು ಉಪಸ್ಥಿತರಿದ್ದರು.