ಅಪಾಯ ಮಟ್ಟ ಮೀರಿ ಹರಿಯುತ್ತಿರುವ ತುಂಗಭದ್ರೆ
ಉಕ್ಕಡಗಾತ್ರಿ – ಪತ್ತೇಪುರ ಸಂಪರ್ಕ ಬಂದ್
ಶಿವಮೊಗ್ಗ, ಜು.16- ಮಲೆನಾಡಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಭದ್ರಾ ಮತ್ತು ತುಂಗಾ ನದಿಗಳಲ್ಲಿ ನೀರಿನ ಹರಿವು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ.
ಭದ್ರಾ ನದಿ ನೀರಿನಲ್ಲಿ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದ್ದು, ಕಳಸ-ಹೊರನಾಡು ರಸ್ತೆ ಸಂಪರ್ಕ ಕಡಿತವಾಗಿದೆ.
ಈ ಮಳೆಗಾಲದಲ್ಲಿ ಇದೇ ಮೊದಲ ಬಾರಿಗೆ ಹೆಬ್ಬಾಳೆ ಸೇತುವೆ ಮುಳುಗಿದೆ ಎನ್ನಲಾಗಿದೆ. ಇದರಿಂದಾಗಿ ಭದ್ರಾ ಜಲಾಶಯಕ್ಕೆ ಬರುವ ನೀರಿನ ಒಳಹರಿವು ಗಣನೀಯವಾಗಿ ಹೆಚ್ಚಳವಾಗಿದೆ. ಸೋಮವಾರ 16040 ಕ್ಯೂಸೆಕ್ಸ್ ಇದ್ದ ನೀರಿನ ಒಳಹರಿವು ಮಂಗಳವಾರ ಬೆಳಿಗ್ಗೆ 27839 ಕ್ಯೂಸೆಕ್ಸ್‌ಗೆ ಏರಿಕೆಯಾಗಿದೆ.
ಜಲಾಶಯದ ನೀರಿನ ಮಟ್ಟ 144 ಅಡಿ 7 ಇಂಚು ಆಗಿದೆ. ಕಳೆದ ವರ್ಷ ಜಲಾಶಯದಲ್ಲಿ ಈ ದಿನ 141 ಅಡಿ 3 ಇಂಚು ನೀರಿತ್ತು.
ಭದ್ರಾ ಜಲಾಶಯಕ್ಕೆ ನೀರಿನ ಒಳಹರಿವು ದಿಢೀರ್ ಹೆಚ್ಚಾಗಿರುವುದು ಅಚ್ಚುಕಟ್ಟಿನ ರೈತರಿಗೆ ಸಂತಸ ತಂದಿದ್ದು, ಮುಂಗಾರು ಹಂಗಾಮಿನಲ್ಲಿ ಭತ್ತದ ನಾಟಿ ಮಾಡುವ ಆಶಾ ಭಾವನೆ ಮೂಡಿದೆ.
ತುಂಗಭದ್ರಾ ನದಿಯಲ್ಲಿ ನೀರು ಹೆಚ್ಚಳ : ರಸ್ತೆ ಸಂಪರ್ಕ ಕಡಿತ
ಗಾಜನೂರಿನ ತುಂಗಾ ಜಲಾಶಯಕ್ಕೆ 60 ಸಾವಿರ ಕ್ಯೂಸೆಕ್ಸ್‌ಗೂ ಅಧಿಕ ನೀರಿನ ಒಳಹರಿವು ಇದ್ದು, ಅಷ್ಟೇ ಪ್ರಮಾಣದ ನೀರನ್ನು ತುಂಗಾ ನದಿಗೆ ಬಿಟ್ಟಿರುವುದರಿಂದ ಉಕ್ಕಡಗಾತ್ರಿ ಬಳಿ ತುಂಗ ಭದ್ರಾ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದೆ. ಇದರಿಂದಾಗಿ ಉಕ್ಕಡಗಾತ್ರಿ-ಪತ್ತೇಪುರ ಸಂಪರ್ಕ ಸೇತುವೆ ನದಿ ಹಿನ್ನೀರಿನಲ್ಲಿ ಮುಳುಗಡೆ ಆಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ಅಲ್ಲದೇ, ನೂರಾರು ಎಕರೆ ತೋಟ, ಗದ್ದೆಗಳು ನದಿ ಹಿನ್ನೀರಿನಲ್ಲಿ ಮುಳುಗಡೆ ಆಗಿವೆ.