`ಪ್ರಥಮ ಏಕಾದಶಿ, ಪಾಂಡುರಂಗ ವಿಠಲ’ ಒಂದು ಚಿಂತನೆ

`ಪ್ರಥಮ ಏಕಾದಶಿ, ಪಾಂಡುರಂಗ ವಿಠಲ’ ಒಂದು ಚಿಂತನೆ

ಚಂದ್ರಮಾನದ ಪ್ರಕಾರ ಒಂದು ತಿಂಗಳಲ್ಲಿ 15 ದಿನಗಳ ಎರಡು ಪಕ್ಷಗಳು . ಒಂದು ಶುಕ್ಲ ಪಕ್ಷ ಮತ್ತೊಂದು ಕೃಷ್ಣ ಪಕ್ಷ. ಈ 15 ದಿನಗಳಲ್ಲಿ 11ನೇ ದಿನವನ್ನು ಏಕಾದಶಿ ಎಂದು ಕರೆಯುತ್ತಾರೆ.

ಪರಮಾತ್ಮನಾದ ಶ್ರೀಹರಿಯ ಭಕ್ತರಲ್ಲಿ ಏಕಾದಶಿಗೆ ಬಹಳ ಮಹತ್ವದ ಸ್ಥಾನವಿದೆ. ಈ ದಿನದಂದು ಎಲ್ಲಾ ಇಂದ್ರಿಯಗಳನ್ನು ಅಂತರ್ಮುಖವಾಗಿ ಎಳೆದುಕೊಂಡು ಪರಮಾತ್ಮನ ಉಪಾಸನೆಯನ್ನು ಮಾಡುತ್ತಾ ಅವನಿಗೆ ಹತ್ತಿರವಾಗುವ ಕೆಲಸಗಳಾದ ಭಜನೆ, ಧ್ಯಾನ, ನಾಮ ಜಪ ಸಂಕೀರ್ತನೆಗಳನ್ನು ಮಾಡಬೇಕೆಂಬ ನಿಯಮವಿದೆ. 

ಈ ದಿನ ಆಹಾರ, ನೀರನ್ನು ಕೂಡ ಸ್ವೀಕರಿಸದೇ ಯಾವ ಚಪಲಕ್ಕೂ ಒಳಗಾಗದೆ ಒಂದೇ ಮನಸ್ಸಿನಿಂದ ಪರಮಾತ್ಮನ ಆರಾಧನೆಯನ್ನು ಮಾಡಬೇಕು ಎಂಬ ವಿಧಿ ವಿಧಾನವಿದೆ. ಪ್ರಾತಃಕಾಲದಲ್ಲೇ ಈ ವ್ರತವನ್ನು ಆಚರಿಸುವ ಸಂಕಲ್ಪವನ್ನು ಮಾಡಿದವರು ಕಟ್ಟುನಿಟ್ಟಾಗಿ ವ್ರತಾಚರಣೆಯನ್ನು ಮಾಡಿ 12ನೇ ದಿನ ಎಂದರೆ ದ್ವಾದಶಿಯ ದಿನ ಸೂರ್ಯೋದಯಕ್ಕೆ ಮುಂಚೆ ಊಟವನ್ನು ಮಾಡಿ ಉಪವಾಸ ವ್ರತವನ್ನು ಸಂಪನ್ನಗೊಳಿಸುತ್ತಾರೆ.

ಆಷಾಢ ಮಾಸದ ಕೃಷ್ಣ ಪಕ್ಷದ ಏಕಾದಶಿಯನ್ನು ಪ್ರಥಮೇಕಾದಶಿ ಎಂದು ಕರೆಯುತ್ತಾರೆ. ಏಕಾದಶಿ ಮಾಡುವುದರಿಂದ ಪುಣ್ಯಫಲಗಳು ಸಿಗುತ್ತವೆ ಎಂಬ ನಂಬಿಕೆ ಇದೆ. ಅದರಲ್ಲೂ ಪ್ರಥಮೇಕಾದಶಿಯ ದಿನ ಆಹಾರ ನೀರನ್ನು ಬಿಟ್ಟು ಭಗವಂತನ ಧ್ಯಾನ ಆರಾಧನೆ ಮಾಡಿದರೆ ಅತ್ಯಂತ ಶ್ರೇಷ್ಠ ಫಲ ಎಂಬ ನಂಬಿಕೆ ಆಸ್ತಿಕರಲ್ಲಿದೆ.

`ಉಪ’ ಎಂದರೆ `ಹತ್ತಿರ’, `ವಾಸ’ ಎಂದರೆ `ಇರುವುದು’. ನಾವು ನಮ್ಮ ಮನಸ್ಸಿನಿಂದ ಭಗವಂತನಿಗೆ  ಹತ್ತಿರವಾಗುವುದೇ ಉಪವಾಸ. ಇದಕ್ಕೆ ಬೇಕಾಗಿರುವುದು ಮೊದಲಿಗೆ ಅಚಲ ನಂಬಿಕೆ, ವಿಶ್ವಾಸ ಭಕ್ತಿ ಮತ್ತು ಭಗವಂತನಲ್ಲಿ ಅನನ್ಯವಾದ ದೃಢವಾದ ಪ್ರೀತಿ. ನಮ್ಮ ಸುತ್ತಲೂ ಇರುವ ಪ್ರತಿಯೊಬ್ಬರಿಗಿಂತ ಪ್ರತಿಯೊಂದು ವಸ್ತುವಿಗಿಂತ ಭಗವಂತ ನಮಗೆ ಪ್ರಿಯವಾಗ ಬೇಕು. ಮತ್ತು ಅವನ ಮಹಿಮೆ ನಾವು ಅರಿಯ ಬೇಕು.ಅವನು ಸರ್ವಸ್ವ ನಾವು ಒಂದು ಧೂಳಿನ ಕಣ ಎಂಬ ವಿಚಾರ ಮನದಟ್ಟಾಗಬೇಕು.

 

ಅಳುವ ಮಗುವಿಗೆ ತಾಯಿ ಆಟದ ಸಾಮಾನು ಊಟಗಳನ್ನು ಕೊಟ್ಟು ಸಮಾಧಾನಪಡಿಸಿ ತನ್ನ ಕೆಲಸದಲ್ಲಿ ತಾನು ತಲ್ಲೀನಳಾಗುತ್ತಾಳೆ. ಆದರೆ ಮಗು ನೀನೇ ಬೇಕು ಬೇರೆ ಏನೂ ಬೇಡ ಎಂದಾಗ ಓಡಿ ಅದರ ಹತ್ತಿರ ಬರುತ್ತಾಳೆ ಅದನ್ನು ಎತ್ತಿ ಮುತ್ತಾಡುತ್ತಾಳೆ. ಹೀಗೆ ಎಲ್ಲರಿಗೂ ತಂದೆ ಆಗಿರುವಂತಹ ಭಗವಂತ ನಮ್ಮ ಪಂಚೇಂದ್ರಿಯಗಳು ಆಸೆಪಡುವ ವಿಷಯಗಳನ್ನು ನೀಡಿ ತೃಪ್ತಿಗೊಳಿಸಿ ತಾನು ಕಣ್ಮರೆಯಾಗುತ್ತಾನೆ. ಇದು ಯಾವುದು ಬೇಡ ನೀನೇ ಬೇಕು ಎಂದು ಹಠ ಹಿಡಿದು ಪ್ರೀತಿಯಿಂದ ಕರೆದು ಧ್ಯಾನ ಮಾಡಿದಾಗ ಅಂತರಂಗದಲ್ಲಿ ಕಾಣಿಸಿಕೊಂಡು ಅತ್ಯಂತ ಆನಂದವನ್ನು ನೀಡುತ್ತಾನೆ. ನಾವು ಅನುಭವಿಸುವ ಸುಖದ ಜೊತೆಗೆ ದುಃಖ ಬೆರತಿರುತ್ತದೆ ಸುಖದ ಹಿಂದೆ ದುಃಖ ದುಃಖದ ಹಿಂದೆ ಸುಖ ಇದನ್ನೇ ಸಂಸಾರದ ಚಕ್ರ ಎಂದು ಕರೆಯುತ್ತಾರೆ. ಆದರೆ ಭಗವಂತನು ಕೊಡುವ ಆನಂದದಲ್ಲಿ ದುಃಖದ ಲೇಪವೇ ಇರುವುದಿಲ್ಲ. ಅವನೇ ಆನಂದ ಮತ್ತು ಜ್ಞಾನದ ಸ್ವರೂಪವಾಗಿ ರುವುದರಿಂದ ಅವನು ಕೊಡುವ ಆನಂದಕ್ಕೆ ಮಿತಿ ಇಲ್ಲ. ಆದರೆ ಅದನ್ನು ಸ್ವೀಕರಿಸುವ ನಾವು  ಸಮುದ್ರದ ನೀರನ್ನು ತುಂಬಿಕೊಳ್ಳುವ ಪಾತ್ರೆಗಳಂತೆ! ಪಾತ್ರೆ ಎಷ್ಟು ದೊಡ್ಡದು ಅಷ್ಟೇ ನೀರು ಹಿಡಿಸುತ್ತದೆ, ಬೇಕಾದಷ್ಟು ನೀರು ಸಮುದ್ರದಲ್ಲಿದ್ದರೂ ಅದನ್ನು ತುಂಬಿಕೊಳ್ಳಲಾ ಗುವುದಿಲ್ಲ. ಹಾಗೆಯೇ ನಮ್ಮ ಯೋಗ್ಯತೆ ಎಂಬ ಪಾತ್ರೆ ಎಷ್ಟು ದೊಡ್ಡದು ಅಷ್ಟೇ ಆನಂದವನ್ನು ನಾವು ತುಂಬಿಕೊಳ್ಳಬಹುದು. ಪರಮಾತ್ಮ ಆನಂದದ ಸಮುದ್ರ. ಅವನನ್ನು ಕಾಣಲು ಬೇಕಾಗಿರುವುದು ತಪಸ್ಸು. ತಪ ಎಂದರೆ ಶಾಖ. ಒಂದು ಮಣ್ಣಿನ ಮಡಿಕೆಯನ್ನು ಮಾಡುವಾಗ ಮಣ್ಣು ನೀರನ್ನು ಕಲಿಸಿ ಅದಕ್ಕೆ ನಾವು ರೂಪ ಕೊಟ್ಟರೂ ಅದಕ್ಕೆ ಶಾಖ ಬಿದ್ದಾಗ ಮಾತ್ರ ಅದು ಗಟ್ಟಿಯಾಗಿ ಉಳಿಯಲು ಸಾಧ್ಯ. ಆದ್ದರಿಂದಲೇ ನಾವು ಭಗವಂತನನ್ನು ಒಲಿಸಿಕೊಳ್ಳಬೇಕಾದರೆ ನಮ್ಮ ದೇಹಕ್ಕೆ ಶಾಖವನ್ನು ನೇಮ ನಿಷ್ಠೆಗಳ ಮೂಲಕ ನೀಡಬೇಕಾಗುತ್ತದೆ. ನಮ್ಮ ಇಂದ್ರಿಯ ಗಳನ್ನು ನಾವು ಹಿಡಿತದಲ್ಲಿಟ್ಟುಕೊಳ್ಳುವುದನ್ನು ಕಲಿಯಬೇಕಾಗುತ್ತದೆ. ಈ ನಿಟ್ಟಿನಲ್ಲಿ ಏಕಾದಶಿ ವ್ರತಾಚರಣೆ ಬಹಳ ಮುಖ್ಯ.

ಇತ್ತೀಚೆಗೆ ನಡೆದ ಸಂಶೋ ಧನೆಗಳಲ್ಲಿ 15 ದಿನಕ್ಕೊಮ್ಮೆ ಉಪವಾಸವಿದ್ದರೆ ದೇಹದಲ್ಲಿ ಉಪಯೋಗಕ್ಕೆ ಬಾರದ ಜೀವಕೋಶಗಳು ತಮಷ್ಟಕ್ಕೆ ತಾವು ನಾಶವಾಗಿ ಹೋಗುತ್ತವೆ. ದೇಹಕ್ಕೆ ಇದು ಬಹಳ ಸಹಕಾರಿ ಎಂದು ತಿಳಿದುಬಂದಿದೆ. ಈ ಸಂಶೋಧನೆಗೆ  2016ರಲ್ಲಿ ಜಪಾನದ ವಿಜ್ಞಾನಿ ಡಾ. ಯೋಶಿನೋರಿ ಓಷುಮಿ ಅವರಿಗೆ ನೊಬೆಲ್ ಬಹುಮಾನ ಬಂದಿದೆ.

ನಮ್ಮ ಭಾರತದ ಋಷಿಮುನಿಗಳು ತಾವು ಕಂಡುಕೊಂಡಂತಹ ಸತ್ಯಗಳನ್ನು ಶಾಸ್ತ್ರಗಳನ್ನಾಗಿ ಮಾಡಿ ಎಲ್ಲರಿಗೂ ಉಪಯೋಗ ವಾಗಲಿ ಎಂದು ರಚಿಸಿದ್ದಾರೆ. ದೇಹದ ಒಳಿತಿಗಾಗಿ ಯೋಗ, ಪ್ರಾಣಾಯಾಮ ಮತ್ತು ವ್ರತ ನೇಮಗಳನ್ನು ಸೂಚಿಸಿದ್ದಾರೆ. ಅವುಗಳಲ್ಲಿ ಏಕಾದಶಿ ಬಹು ಮುಖ್ಯವಾದದ್ದು.

ಇನ್ನು ಪ್ರಥಮ ಏಕಾದಶಿ ದಿನ ಅನೇಕ ಜನರು ಭಕ್ತಾದಿಗಳು ಮಹಾರಾಷ್ಟ್ರದ ಪಾಂಡುರಂಗ ವಿಠಲ ದೇವಸ್ಥಾನಕ್ಕೆ ಬರುತ್ತಾರೆ. ಇವರು ಕಾಲ್ನಡಿಗೆಯಲ್ಲಿ, ವಿಠಲ ನಾಮಸ್ಮರಣೆ ಯನ್ನು ಮಾಡುತ್ತಾ ಸ್ವಂತ ಜ್ಞಾನೇಶ್ವರ ಮತ್ತು ತುಕಾರಾಮ ಅವರು ರಚಿಸಿರುವ ಅಭಂಗಗಳನ್ನು ಹಾಡಿಕೊಳ್ಳುತ್ತಾ ಬಹಳ ನಿಷ್ಠೆ ಶ್ರದ್ಧೆಯಿಂದ ಆ ಗ್ರಂಥಗಳನ್ನು ಹೊತ್ತು ಗುಂಪುಗಳಲ್ಲಿ ಬರುತ್ತಾರೆ. ಪ್ರಥಮ ಏಕಾದಶಿಯ ದಿನ ಪಾಂಡುರಂಗ ವಿಠಲನ ದರ್ಶನ ಮಾಡುತ್ತಾರೆ. ತಂದೆ ,ತಾಯಿ, ಬಂಧು ಬಳಗ ಎಲ್ಲವೂ ವಿಠಲ ನೀನೇ ಎಂದು ನಂಬುತ್ತಾರೆ. ಹಾಡಿ ಕುಣಿದು ತಾಳ ಹಾಕಿ ವಿಠಲ ನಾಮ ಸ್ಮರಣೆಯಲ್ಲಿ ತಲ್ಲೀನರಾಗುತ್ತಾರೆ ಕಷ್ಟಗಳನೆಲ್ಲ ಮರೆತು ಆತ್ಮಾನಂದವನ್ನು ಹೊಂದುತ್ತಾರೆ. ಇವರನ್ನು ವಾರ್ಕರಿಗಳು ಎಂದು ಕರೆಯುತ್ತಾರೆ.

ಕರ್ನಾಟಕದ ಹರಿದಾಸರು ಕೂಡ ವಿಠಲನಾಮಸ್ಮರಣೆಗೆ ಅತ್ಯಂತ ಮಹತ್ವವನ್ನು ನೀಡಿದ್ದಾರೆ. ಸಂಶೋಧನೆಗಳು ವಿಠಲ ನಾಮಸ್ಮರಣೆಯಲ್ಲಿ ಇರುವಂತಹ ಸಕಾರಾತ್ಮಕ ಶಕ್ತಿಯನ್ನು ಹೃದ್ರೋಗವನ್ನು ತಡೆಗಟ್ಟುವ ಶಕ್ತಿಯನ್ನು ಗುರುತಿಸಿದ್ದಾರೆ.

ಎಷ್ಟೇ ದುಡ್ಡು, ಬಂಗಾರ, ಅಸ್ತಿ ಏನಿದ್ದರೂ ದುಃಖ ತಪ್ಪಿದ್ದಲ್ಲ. ಎಷ್ಟು ಸಿಕ್ಕರೂ ಮತ್ತಷ್ಟು ಬೇಕು ಎನ್ನುವ ಬಯಕೆ ಮರೀಚಿಕೆಯಂತೆ ಸುಖವನ್ನು ದೂರ ಇಡುತ್ತದೆ. ಯಾವುದೂ ಬೇಡ ನೀನೊಬ್ಬನೇ ಸಾಕು ಎಂಬ ಮನೋಭಾವ ಬಂದಾಗ “ಸಾಕು” ಎಂಬ ಸಂತೃಪ್ತಿ ಬಂದಾಗ, ಭಗವಂತನಲ್ಲಿಗೆ ಮನಸ್ಸು ಹರಿದಾಗ ಆನಂದದ ಅನುಭವ ಅಂತರಂಗಕ್ಕೆ ಆಗುತ್ತದೆ ‌ ಇಂತಹ ಆನಂದ ಆ ಪಾಂಡುರಂಗ ವಿಠಲನ ದರ್ಶ ನದಿಂದ ಭಕ್ತಾದಿಗಳು ಪಡೆದುಕೊಳ್ಳುತ್ತಾರೆ. ಅಲ್ಲಿ ಅವನ ಪಾದಸ್ಪರ್ಶವನ್ನು ಮಾಡಿ ಜೀವನ ಸಾರ್ಥಕವಾಯಿತು ಎಂದು ನಂಬುತ್ತಾರೆ.

`ಅಂತರಂಗದೊಳಗೆ ಹರಿಯ ಕಾಣೋ’ ಎಂದು ದಾಸರು ಹಾಡಿದ್ದಾರೆ. `ಒಳಗಣ್ಣಲ್ಲಿ ಹರಿಯ ನೋಡದವ ಹುಟ್ಟು ಕುರುಡ ನೋ’ ಎನ್ನುತ್ತಾರೆ. ಹೊರಗಡೆ ಎಷ್ಟು ಹುಡುಕಿದರೂ ಸಿಗದ ಪರಮಾತ್ಮ ನಮ್ಮೊಳಗೆ ಅಡಗಿ ಕುಳಿತಿದ್ದಾನೆ. ನಾವು ಒಳಮುಖವಾಗಿ ಇಂದ್ರಿಯಗಳನ್ನು ಮುಚ್ಚಿ ಅಂತರಂಗದಲ್ಲಿ ಇಣುಕಿ ನೋಡಿದಾಗ ಮಾತ್ರ ಭಗವಂತನ ಅತ್ಯದ್ಭುತವಾದ ತೇಜೋಮಯವಾದ ಜ್ಞಾನಾನಂದ ಸ್ವರೂಪ ಗೋಚರವಾಗುತ್ತದೆ.

ಇದನ್ನು ಮಾಡಲು ಬೇರೆ ಕೆಲಸಗಳಿಗೆಲ್ಲ ರಜೆ ಕೊಟ್ಟು, ಅಡಿಗೆ ಊಟ ತಿಂಡಿ ನಿದ್ರೆ ಎಲ್ಲವನ್ನು ಬಿಟ್ಟು ಏಕಾದಶಿಯ ಪರ್ವಕಾಲ ಪರಮಾತ್ಮನ ಸಾಕ್ಷಾತ್ಕಾರಕ್ಕೆ ಸಾಧನೆಯನ್ನು ಮಾಡಿಕೊಳ್ಳಿ ಎಂದು ಹೇಳಲಾಗಿದೆ.

ಇಂತಹ ಪ್ರಥಮ ಏಕಾದಶಿ ಇಂದು ಬಂದಿದೆ. ಭಗವಂತನ ಚಿಂತನೆ ಧ್ಯಾನ ಕಥಾಶ್ರವಣ ಮುಂತಾದ ಸತ್ಸಂಗದ ಸದ್ವಿಚಾರದ ಸದಾಲೋಚನೆಗಳನ್ನು ಮಾಡುತ್ತಾ ವಿಠಲನಾಮಸ್ಮರಣೆಯನ್ನು ಮಾಡುತ್ತಾ ಆ ಪರಮಾತ್ಮನ ಕಾರುಣ್ಯಕ್ಕೆ ನಾವೆಲ್ಲರೂ ಪಾತ್ರರಾಗೋಣ. ಬೇರೆ ಯಾವ ಜೀವಿಗೂ ಕೊಡದ ಯೋಚನಾ ಶಕ್ತಿ, ಅಂತ ಶಕ್ತಿ, ಬುದ್ಧಿ ಶಕ್ತಿ, ಇಚ್ಛಾಶಕ್ತಿ ಜ್ಞಾನಶಕ್ತಿ ಕ್ರಿಯಾಶಕ್ತಿ ಎಲ್ಲವನ್ನು ಪರಮಾತ್ಮ ಮಾನವರಾದ ನಮಗೆ ಕರುಣಿಸಿದ್ದಾನೆ ‌ ಅದನ್ನು ಉಪಯೋಗಿಸಿಕೊಂಡು ಈ ಜೀವಿತಾವಧಿಯ ಮುಖ್ಯ ಉದ್ದೇಶವಾದ ಪರಮಾತ್ಮನ ಸಾಕ್ಷಾತ್ಕಾರವನ್ನು ಮಾಡಿಕೊಳ್ಳಲು ಪ್ರಯತ್ನಿಸೋಣ ಎಂದು ಪ್ರಾರ್ಥಿಸುತ್ತೇನೆ

– ಶ್ರೀ ಕೃಷ್ಣಾರ್ಪಣಮಸ್ತು

ರೂಪಶ್ರೀ ಶಶಿಕಾಂತ್

error: Content is protected !!