ಡೆಂಘಿ ಮಹಾಮಾರಿ – ಆತಂಕ ಬೇಡ ಅರಿವಿರಲಿ !

ಡೆಂಘಿ ಮಹಾಮಾರಿ – ಆತಂಕ ಬೇಡ ಅರಿವಿರಲಿ !

ಇತ್ತೀಚಿನ ದಿನಗಳಲ್ಲಿ ಡೆಂಘಿ ಜ್ವರದಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆಯ ಆತಂಕಕಾರಿ ರೀತಿಯಲ್ಲಿ ಹೆಚ್ಚಾಗುತ್ತಿದೆ. ಆದ್ದರಿಂದ ಡೆಂಘಿ ಜ್ವರದ ಬಗ್ಗೆ ಜಾಗೃತಿ ಮೂಡಿಸಲು ನಮ್ಮದೊಂದು ಸಣ್ಣ ಪ್ರಯತ್ನ.

ಡೆಂಘಿ ಜ್ವರವು ಒಂದು ವೈರಾಣುವಿನಿಂದ ಉಂಟಾಗುವ ಕಾಯಿಲೆಯಾಗಿದೆ.  ಡೆಂಘಿ ವೈರಸ್ ಫ್ಲಾವಿರಿಡೆ ಕುಟುಂಬದ ಫ್ಲಾವಿ ವೈರಸ್ ಕುಲದ ಸದಸ್ಯ. ಈ ಡೆಂಘಿ ಜ್ವರವು ಸೊಳ್ಳೆಗಳಿಂದ ಹರಡುತ್ತದೆ. ಎಡಿಎಸ್ ಈಜಿಪ್ಟೈ ಸೊಳ್ಳೆಯಿಂದ, ಮುಖ್ಯವಾಗಿ ಮಳೆಗಾಲದಲ್ಲಿ ಸಂಭವಿಸುತ್ತದೆ. ಸೋಂಕಿತ ಸೊಳ್ಳೆ ಕಡಿತದ ನಂತರ ಡೆಂಘಿ ವೈರಸ್ ಚರ್ಮದ ದೇಹವನ್ನು ಪ್ರವೇಶಿಸುತ್ತದೆ. ಇದರ ನಂತರ ದೇಹದಲ್ಲಿ ಮಕ್ಕಳ ರೋಗ-ನಿರೋಧಕ ಶಕ್ತಿಯು ಡೆಂಘಿ ವೈರಾಣುವಿನ ಜೊತೆ ಹೋರಾಡುವ ಸಂದರ್ಭದಲ್ಲಿ ಪ್ರತಿರಕ್ಷಣಾ ಪ್ರಕ್ರಿಯೆಯಗಳು ಅನಾರೋಗ್ಯದ ರೀತಿಯಲ್ಲಿ ಕಾಣಿಸುತ್ತದೆ.

ಡೆಂಘಿ ಜ್ವರದ ಲಕ್ಷಣಗಳು 

ಡೆಂಘಿ ವೈರಸ್ ಸೋಂಕಿಗೆ ಒಳಗಾದ ಮಕ್ಕಳು ಶೇ.80 ರಷ್ಟು ಲಕ್ಷಣ ರಹಿತರಾಗಿರುತ್ತಾರೆ ಅಥವಾ ಜ್ವರದಂತಹ ಸೌಮ್ಯ ಲಕ್ಷಣಗಳನ್ನು ಮಾತ್ರ ಹೊಂದಿರುತ್ತಾರೆ. ಇನ್ನೂ ಶೇ.5-10 ರಷ್ಟು ತೀವ್ರವಾದ ಸೋಂಕಿಗೆ ಒಳಗಾಗುತ್ತಾರೆ ಮತ್ತು ಶೇ.1 ರಷ್ಟು ಜೀವಕ್ಕೆ ಅಪಾಯಕಾರಿಯಾಗಿದೆ.

ಡೆಂಘಿ ಜ್ವರವನ್ನು ಮೂರು ಹಂತಗಳಾಗಿ ವಿಂಗಡಿಸಲಾಗಿದೆ.

1. ಜ್ವರದ ಹಂತ

2. ನಿರ್ಣಾಯಕ ಹಂತ ಮತ್ತು

3. ಚೇತರಿಕೆಯ ಹಂತ

ಜ್ವರದ ಹಂತದಲ್ಲಿ ಮೊದಲ 1-3 ದಿನಗಳಲ್ಲಿ ತೀವ್ರವಾದ ಜ್ವರ ಅತಿಯಾದ ತಲೆನೋವು (ಮುಖ್ಯವಾಗಿ ಕಣ್ಣುಗಳ ಹಿಂಭಾಗದಲ್ಲಿ ಆಲಸ್ಯ, ಸುಸ್ತು, ಮೈ-ಕೈ ನೋವು, ಬೆನ್ನು ನೋವು, ವಾಂತಿ ಮತ್ತು ಹೊಟ್ಟೆ ನೋವು ಉಂಟಾಗುತ್ತದೆ. ಜ್ವರದ ಆರಂಭಿಕ ಹಂತದಲ್ಲಿ ಕೆಂಪಾದ ದದ್ದುಗಳು ಕಾಣಿಸಿಕೊಳ್ಳುತ್ತವೆ. ದೇಹ ಮತ್ತು ಮುಖ ಭಾಗವು ಕೆಂಪಾಗಿ ಕಾಣಿಸುತ್ತದೆ.

ಡೆಂಘಿ ನಿರ್ಣಾಯಕ ಹಂತದಲ್ಲಿ 4-7 ದಿನಗಳು ರಕ್ತನಾಳಗಳಿಂದ ಪ್ಲಾಸ್ಮಾ ಸೋರಿಕೆಯಿಂದಾಗಿ, ಎದೆ ಮತ್ತು ಕಿಬ್ಬೊಟ್ಟೆಯಲ್ಲಿ ನೀರಿನಾಂಶ ಶೇಖರಣೆಯಾಗುತ್ತದೆ. ಇದರಿಂದಾಗಿ ರಕ್ತದೊತ್ತಡ ಕಡಿಮೆಯಾಗಿ ಪ್ರಮುಖ ಅಂಗಗಳಿಗೆ ರಸ್ತ ಸಂಚಾರ ವ್ಯತ್ಯವಾಗುತ್ತದೆ. ಈ ಹಂತದಲ್ಲಿ ಪ್ಲೇಟ್‌ಲೆಟ್‌ ಕಣಗಳು ಕಡಿಮೆಯಾಗುತ್ತವೆ.

ತೀವ್ರವಾದ ಡೆಂಘಿ ಜ್ವರದಲ್ಲಿ ಅತಿಯಾದ ಹೊಟ್ಟೆನೋವು, ನಿರಂತರ ವಾಂತಿ, ತ್ವರಿತ ಉಸಿರಾಟ, ಒಸಡುಗಳು ಅಥವಾ ಮೂಗಿನಲ್ಲಿ ರಸ್ತಸ್ರಾವ, ಆಯಾಸ, ಮಲಮೂತ್ರದಲ್ಲಿ ರಕ್ತ ಕಾಣಿಸುವುದು, ತಣ್ಣನೆಯ ಕೈ – ಕಾಲುಗಳು, ಕಡಿಮೆ ಮೂತ್ರ ಉಂಟಾಗುತ್ತದೆ.

ಇನ್ನು ಕೆಲವು ಮಕ್ಕಳಲ್ಲಿ ಆಂತರಿಕಲ ರಕ್ತಸ್ರಾವ, ಅಂಗಾಂಗ ವೈಫಲ್ಯ ಮತ್ತು ಸಾವಿಗೆ ಕಾರಣವಾಗಬಹುದು.

ಚೇತರಿಕೆಯ ಹಂತ 8-10 ದಿನಗಳವರೆಗೆ ಈ ಅವಧಿಯಲ್ಲಿ ಮೈ ಕಡಿತ (ತುರಿಕೆ), ಹಸಿವು ಹಿಂದಿರುವುದು ಮತ್ತು ನಿಧಾನವಾದ ಹೃದಯ ಬಡಿತದೊಂದಿಗೆ ಇರುತ್ತದೆ. ಪ್ಲೇಟ್‌ಲೆಟ್‌
ರಕ್ತ ಕಣಗಳು ಜಾಸ್ತಿಯಾಗುತ್ತವೆ.

ಡೆಂಘಿ ಜ್ವರವನ್ನು ತಡೆಗಟ್ಟುವುದು ಹೇಗೆ ?

– ಡೆಂಘಿ ಹರಡುವ ಸೊಳ್ಳೆಗಳು ಹಗಲಿನಲ್ಲಿ ಸಕ್ರಿಯವಾಗಿರುತ್ತವೆ.

– ಸೊಳ್ಳೆ ಕಡಿತದಿಂದ ಮಕ್ಕಳನ್ನು ರಕ್ಷಿಸಬೇಕು.

ಹೇಗೆಂದರೆ,

– ದೇಹವನ್ನು ಸಾಧ್ಯವಾದಷ್ಟು ಮುಚ್ಚುವ ಬಟ್ಟೆಗಳನ್ನು ಹಾಕಬೇಕು.

– ಮನೆಯ ಕಿಟಕಿ, ಬಾಗಿಲುಗಳಿಗೆ ಸೊಳ್ಳೆ ಪರದೆಗಳನ್ನು ಹಾಕಬೇಕು.

– ಕೀಟ ನಿವಾರಕಗಳನ್ನು ಬಳಸಬೇಕು.

– ಸೊಳ್ಳೆಗಳ ಸಂತಾನೋತ್ಪತ್ತಿಯನ್ನು ತಡೆಯಬೇಕು.

– ಪರಿಸರ ನಿರ್ವಹಣೆ, ಒಳಾಂಗಣ ಮತ್ತು ಹೊರಾಂಗಣದಲ್ಲಿ ನೀರು ಸಂಗ್ರಹಿಸುಬಹುದಾದ ಬಕೆಟ್‌ಗಳನ್ನು, ತೆಂಗಿನ ಕಾಯಿ ಚಿಪ್ಪಗಳು, ಕಸದ ಬುಟ್ಟೆಗಳು ಹಾಗೂ ಹಳೆಯ ಟೈರ್‌ಗಳನ್ನು ವಿಲೇವಾರಿ ಮಾಡಬೇಕು.

ಮಕ್ಕಳಲ್ಲಿ ಡೆಂಘಿ ಲಕ್ಷಣಗಳು ಕಂಡು ಬಂದರೆ,

– ಸಾಕಷ್ಟು ನೀರು ಹಾಗೂ ದ್ರವಗಳನ್ನು ನೀಡಬೇಕು.

– ಜ್ವರದ ಔಷಧಿಯನ್ನು ನೀಡಬೇಕು.

– ತೀವ್ರವಾದ ರೋಗ ಲಕ್ಷಣಗಳು ಕಂಡುಬಂದರೆ ಸಾಧ್ಯವಾದಷ್ಟು ಬೇವ ವೈದ್ಯರನ್ನು ಸಂಪರ್ಕಿಸಬೇಕು.

– ಡಾ. ಮುಗನಗೌಡ

ಪ್ರೊಫೆಸರ್, ಮುಖ್ಯಸ್ಥರು ಮಕ್ಕಳ ವಿಭಾಗ 

ಬಾಪೂಜಿ ಮಕ್ಕಳ ಆರೋಗ್ಯ

ಜೆಜೆಎಂ ವೈದ್ಯಕೀಯ ಕಾಲೇಜು, ದಾವಣಗೆರೆ

– ಡಾ. ಉಷಾದೇವಿ

ಸ್ನಾತಕೊತ್ತರ ವಿದ್ಯಾರ್ಥಿ

ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ

 

error: Content is protected !!