ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಸಂತ ಪ್ರವತ್ ವಿಜ್ಞಾನ್ ದೇವ್ ಜೀ
ದಾವಣಗೆರೆ, ಜು. 12-ಮಂತ್ರಗಳು ಕೇವಲ ಶಬ್ಧಗಳಲ್ಲ. ಮಂತ್ರೋಚ್ಛಾರದಿಂದ ವಾತಾವರಣದಲ್ಲಿ ತರಂಗ ಸೃಷ್ಠಿಯಾಗಿ, ಜೀವಿಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಸಂತ ಪ್ರವತ್ ಶ್ರೀ ವಿಜ್ಞಾನ್ ದೇವ್ ಜೀ ಮಹಾರಾಜ್ ಹೇಳಿದರು.
ನಗರದ ದಾವಣಗೆರೆ-ಹರಿಹರ ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ಇಂದು ಸಂಜೆ ನಡೆದ ಸ್ವರ್ವೇದ ಮಹಾಮಂದಿರ ಟ್ರಸ್ಟ್ ವಾರಣಾಸಿ (ಕಾಶಿ) ರಾಷ್ಟ್ರವ್ಯಾಪಿ ಸರ್ವೇದ ಸಂಕಲ್ಪ ಯಾತ್ರೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಹೋಮ, ಹವನಗಳಲ್ಲಿ ದ್ರವ್ಯಗಳು ವ್ಯರ್ಥ ಎನ್ನುವ ಭಾವನೆ ಸರಿಯಾದುದಲ್ಲ. ಹೋಮಗಳಿಗೆ ಬಳಕೆಯಾದ ದ್ರವ್ಯಗಳು ಪರೋಕ್ಷವಾಗಿ ನಮಗೆ ಚೈತನ್ಯವಾಗಿವೆ ಎಂದರು.
ಪರಮಾತ್ಮನ ಕೃಪೆಯಿಂದ ಇಷ್ಟಾರ್ಥ ಗಳೆಲ್ಲವೂ ಈಡೇರಲಿವೆ. ಅಂತಹ ಪರಮಾತ್ಮನಿಗೆ ಕೃತಜ್ಞತೆ ಸಲ್ಲಿಸಲು ಹೋಮ-ಹವನ ಮಾಡಲಾಗುತ್ತಿದೆ. ಪರ ಮಾತ್ಮ ಕೊಟ್ಟಿದ್ದು ಆತನಿಗೇ ಸಮರ್ಪಿತ ಎನ್ನುವ ಭಾವ ಇಲ್ಲಿದೆ. ಲೋಕ ಕಲ್ಯಾಣಾರ್ಥವಾಗಿ ಈ ಹೋಮ -ಹವನ ಮಾಡಲಾಗಿದೆ ಎಂದು ಹೇಳಿದರು.
ವಿಹಂಗಮ ಯೋಗ ಸಂತ ಸಮಾಜದ ಶತಮಾನೋತ್ಸವ, 2024 ರ ಡಿಸೆಂಬರ್ 6 ಮತ್ತು 7 ರಂದು 25000 ಕುಂಡಗಳ ವಿಶ್ವಶಾಂತಿ ಮಹಾಯಾಗದಿಂದ ಸ್ವರ್ವೇದ ಮಹಾಮಂದಿರ್ ಧಾಮ್ ವಾರಣಾಸಿ (ಕಾಶಿ)ಯಲ್ಲಿ ನಡೆಯಲಿದೆ. ಇದರ ಭಾಗವಾಗಿ ದಾವಣಗೆರೆಯಲ್ಲಿ ಹೋಮ-ಹವನ ಕಾರ್ಯಕ್ರಮ ಏರ್ಪಾಡಾಗಿದೆ. ಕೀರ್ತನೆ, ಭಜನೆ, ಗಾಯನ ಕಾರ್ಯಕ್ರಮಗಳು ಸಹ ಜರುಗಿದವು ಎಂದು ತಿಳಿಸಿದರು. ಕಾರ್ಯಕ್ರಮ ದಲ್ಲಿ ದಾವಣಗೆರೆ-ಹರಿಹರ ಸಹಕಾರ ಬ್ಯಾಂಕ್ ಅಧ್ಯಕ್ಷ ಎನ್.ಎ ಮುರುಗೇಶ್, ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ವಾಸುದೇವ ರಾಯ್ಕರ್, ಶ್ರೀ ಕನ್ನಿಕಾ ಪರಮೇಶ್ವರಿ ಸಹಕಾರಿ ಬ್ಯಾಂಕ್ ಅಧ್ಯಕ್ಷ ಆರ್.ಜಿ. ಶ್ರೀನಿವಾಸಮೂರ್ತಿ, ಬ್ರಾಹ್ಮಣ ಸಮಾಜದ ಮಹಿಳಾ ಘಟಕದ ಅಧ್ಯಕ್ಷರಾದ ನಳಿನಿ ಅಚ್ಯುತ್, ಹಿರಿಯ ಪತ್ರಿಕಾ ಛಾಯಾಗ್ರಾಹಕ ಹೆಚ್.ಬಿ. ಮಂಜುನಾಥ್, ಪತಂಜಲಿ ಯೋಗ ಸಂಸ್ಥೆಯ ಸತ್ಯನಾರಾಯಣ, ಕಲ್ಲೇಶಣ್ಣ, ವನಿತಾ ಸಮಾಜದ ನಾಗರತ್ನ ಜಗದೀಶ್, ಗುಂಡಿ ಪುಷ್ಪಾ, ಮಂಜುಳಾ ಮಹೇಶ್, ಅಂಜಲಿ ದೇವಿ ಮತ್ತಿತರರು ಇದ್ದರು.