ತಾಯಿಯಿಂದಲೇ ಮಗುವಿಗೆ ಆರೋಗ್ಯ ಭಾಗ್ಯ

ತಾಯಿಯಿಂದಲೇ ಮಗುವಿಗೆ ಆರೋಗ್ಯ ಭಾಗ್ಯ

ವಿಶ್ವ ಜನಸಂಖ್ಯಾ ದಿನಾಚರಣೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌

ದಾವಣಗೆರೆ, ಜು. 10 – ಆರೋಗ್ಯವಂತ ತಾಯಿಯಿಂದ ಮಗುವಿಗೂ ಆರೋಗ್ಯ ಸಿಗುತ್ತದೆ. ಹೀಗಾಗಿ ತಾಯಂದಿರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆರೋಗ್ಯ ಸಂಘಗಳ ವತಿಯಿಂದ ನಗರದ ಬಿ.ಐ.ಇ.ಟಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜನನದ ಮೊದಲ ಎರಡು ವರ್ಷಗಳು ಮಗುವಿನ ಆರೋಗ್ಯದ ಮೇಲೆ ಜೀವನವಿಡೀ ಹೆಚ್ಚಿನ ಪರಿಣಾಮ ಬೀರುತ್ತವೆ. ಹೀಗಾಗಿ ಆರೋಗ್ಯವಂತ ಜೀವನಕ್ಕಾಗಿ, ತಾಯಿಯ ಆರೋಗ್ಯಕ್ಕೆ ಒತ್ತು ನೀಡಬೇಕಿದೆ ಎಂದು ಸಚಿವರು ಹೇಳಿದರು. ಪ್ರತಿ ಮಗುವೂ ದೇಶಕ್ಕೆ ಆಸ್ತಿ ಆಗುವಂತಿರಬೇಕೇ ಹೊರತು ಹೊರೆಯಾಗಬಾರದು. ಪ್ರತಿಯೊಂದು ಮಗುವೂ ಆಸ್ತಿಯಾದಾಗ ಮಾತ್ರ ಭಾರತ ವಿಶ್ವ ಗುರು ಆಗಲು ಸಾಧ್ಯ ಎಂದು ಸಚಿವರು ತಿಳಿಸಿದರು.

ಹೆಣ್ಣು ಜನಿಸಿದರೆ ಹೊರೆ ಎಂಬ ಭಾವನೆ ಹಲವರಲ್ಲಿದೆ. ಇದರಿಂದಾಗಿ ಹೆಣ್ಣು ಭ್ರೂಣ ಹತ್ಯೆ ಘಟನೆಗಳು ನಡೆಯುತ್ತಿವೆ ಹಾಗೂ ಲಿಂಗಾನುಪಾತದಲ್ಲಿ ವ್ಯತ್ಯಾಸವಾಗಿದೆ. ಹೆಣ್ಣು ಮಕ್ಕಳೂ ಗಂಡಿಗಿಂತ ಯಾವುದೇ ರೀತಿಯಲ್ಲೂ ಕಡಿಮೆ ಇಲ್ಲ ಎಂಬುದನ್ನು ಮನಗಾಣಬೇಕಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮಾತನಾಡಿ, ಜನಸಂಖ್ಯಾ ಸ್ಫೋಟದಿಂದ ಮೂಲಭೂತ ಸೌಲಭ್ಯಗಳ ಸಮಸ್ಯೆ ಉಲ್ಬಣಿಸುತ್ತದೆ. ಭಾರತದಲ್ಲಿ ಪ್ರತಿ ಚದುರ ಕಿ.ಮೀ. ಪ್ರದೇಶದಲ್ಲಿರುವ ಜನರ ಪ್ರಮಾಣ ಈಗಾಗಲೇ ಅತಿಯಾಗಿ ಹೆಚ್ಚಾಗಿದೆ. ಜನಸಂಖ್ಯಾ ನಿಯಂತ್ರಣಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು.

ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ, 1951ರಲ್ಲಿ 36 ಕೋಟಿ ಇದ್ದ ಜನಸಂಖ್ಯೆ ಈಗ 140 ಕೋಟಿಗೆ ತಲುಪಿದೆ. ಜನಸಂಖ್ಯಾ ಹೆಚ್ಚಳ ತಡೆಯಲು ಸರ್ಕಾರಗಳು ನಿರಂತರವಾಗಿ ಯೋಜನೆಗಳನ್ನು ರೂಪಿಸುತ್ತಾ ಬಂದಿವೆ. ಈ ಯೋಜನೆಗಳಿಗೆ ಜನರೂ ಸ್ಪಂದಿಸಬೇಕು ಎಂದು ಹೇಳಿದರು.

ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ, ಶಿಕ್ಷಣದಿಂದ ಮಾತ್ರ ಜನಸಂಖ್ಯಾ ನಿಯಂತ್ರಣ ಸಾಧ್ಯ. ಧರ್ಮಗಳ ನಡುವೆ ಶಿಕ್ಷಣ ಹೆಚ್ಚಿಸಿಕೊಳ್ಳುವ ಬಗ್ಗೆ ಸ್ಪರ್ಧೆ ಇರಬೇಕೇ ಹೊರತು, ನಮ್ಮ ಧರ್ಮೀಯರ ಸಂಖ್ಯೆ ಹೆಚ್ಚಿಸಿಕೊಳ್ಳಬೇಕು ಎಂಬ ಸ್ಪರ್ಧೆ ಬೇಡ ಎಂದರು.

ಶಾಸಕ ದೇವೇಂದ್ರಪ್ಪ ಮಾತನಾಡಿ, ಜನಸಂಖ್ಯ ಹೀಗೆಯೇ ಬೆಳೆಯುತ್ತಾ ಹೋದರೆ ಮನುಷ್ಯ ಮನುಷ್ಯನಾಗಿ ಬದುಕಲು ಸಾಧ್ಯವಾಗದು. ಕುಟುಂಬಗಳು ಮಿತವಾಗಿದ್ದಾಗ ಮಾತ್ರ ಮಕ್ಕಳ ಬಗ್ಗೆ ಅಗತ್ಯ ಕಾಳಜಿ ವಹಿಸಲು ಸಾಧ್ಯ ಎಂದರು.

ಮಾಜಿ ಪ್ರಾಂಶುಪಾಲ ಜಿ.ಎನ್. ಮಲ್ಲಿಕಾರ್ಜುನಪ್ಪ ಉಪನ್ಯಾಸ ನೀಡಿ, ದೇಶ ಬೆಳವಣಿಗೆ ಕಾಣಲು ಉತ್ತಮ ಆರೋಗ್ಯ, ಶಿಕ್ಷಣ ಹಾಗೂ ಆಡಳಿತ ಅಗತ್ಯ ಎಂದರು.

ವೇದಿಕೆಯ ಮೇಲೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಜಿಲ್ಲಾ ಪಂಚಾಯ್ತಿ ಸಿಇಒ ಸುರೇಶ್ ಇಟ್ನಾಳ್, ಮಾಜಿ ಶಾಸಕ ಎಸ್. ರಾಮಪ್ಪ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಬಿ.ಆರ್. ಚಂದ್ರಿಕ, ನವೀನ್ ಭಟ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಷಣ್ಮುಖಪ್ಪ, ಪಾಲಿಕೆ ಸದಸ್ಯರಾದ ಎ. ನಾಗರಾಜ್, ಗಡಿಗುಡಾಳ್ ಮಂಜುನಾಥ್, ಚಮನ್ ಸಾಬ್, ಮುಖಂಡರಾದ ಡಿ. ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!