ಮುಡಾ ಹಗರಣ : ಸಿಎಂ ರಾಜೀನಾಮೆ, ಸಿಬಿಐ ತನಿಖೆಗೆ ಆಗ್ರಹ

ಮುಡಾ ಹಗರಣ : ಸಿಎಂ ರಾಜೀನಾಮೆ, ಸಿಬಿಐ ತನಿಖೆಗೆ ಆಗ್ರಹ

ದಾವಣಗೆರೆ, ಜು. 12 – ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವಾದ ಮುಡಾ ಹಗರಣದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಹಾಗೂ ಹಗರಣವನ್ನು ಸಿ.ಬಿ.ಐ. ತನಿಖೆಗೆ ವಹಿಸಬೇಕು ಎಂದು ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಒತ್ತಾಯಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಪತ್ನಿ ಪಾರ್ವತಮ್ಮ ಮೂಲಕ ಹಗರಣದಲ್ಲಿ ಭಾಗಿಯಾಗಿದ್ದಾರೆ. ಮುಡಾಗೆ ನೀಡಿದ 3.16 ಎಕರೆ ಜಮೀನಿಗೆ ಅಕ್ರಮವಾಗಿ 14 ನಿವೇಶನ ಪಡೆದಿದ್ದಾರೆ ಎಂದು ಆರೋಪಿಸಿದರು.

ಅಣ್ಣ ಮಲ್ಲಿಕಾರ್ಜುನ ಸ್ವಾಮಿ ಅವರು ಪಾರ್ವತಮ್ಮ ಅವರಿಗೆ ಜಮೀನು ಕೊಡುಗೆ ನೀಡಿದ್ದಾಗಿ ನಮೂದಿಸಲಾಗಿದೆ. ಆದರೆ, ಈ ಜಮೀನು 1992ರಲ್ಲೇ ಮುಡಾದ ಖರೀದಿ ಪ್ರಕ್ರಿಯೆಯಲ್ಲಿತ್ತು. ಹೀಗಿರುವಾಗ 2004ರಲ್ಲಿ ಮಲ್ಲಿಕಾರ್ಜುನ ಸ್ವಾಮಿ ಜಮೀನು ಖರೀದಿಸಲು ಹೇಗೆ ಸಾಧ್ಯ? 2009-10ರಲ್ಲಿ ಪಾರ್ವತಮ್ಮ ಅವರಿಗೆ ಜಮೀನು ಕೊಡುಗೆ ನೀಡಲಾಗಿದೆ ಎಂದು ಹೇಳಲಾಗಿದೆ. ಆದರೆ, ಆ ಸಂದರ್ಭದಲ್ಲೂ ಮುಡಾ ಹೆಸರಿನಲ್ಲಿ ಆರ್.ಟಿ.ಸಿ. ಇತ್ತು ಎಂದು ಸಿದ್ದೇಶ್ವರ ಹೇಳಿದರು.

ಅಲ್ಲದೇ, 2013ರಲ್ಲಿ ಸಿದ್ದರಾಮಯ್ಯ ಅವರು ಸಲ್ಲಿಸಿದ ಚುನಾವಣಾ ಪ್ರಮಾಣಪತ್ರದಲ್ಲಿ 3.16 ಎಕರೆ ಜಮೀನನ್ನು ಉಲ್ಲೇಖಿಸಿಲ್ಲ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಲು ಬಿಜೆಪಿ ಯೋಚಿಸುತ್ತಿದೆ ಎಂದವರು ಹೇಳಿದರು.

ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ತರಾತುರಿಯಲ್ಲಿ ಮೈಸೂರಿನಲ್ಲಿ ಮುಡಾ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ. ಮೈಸೂರು ಜಿಲ್ಲಾಧಿಕಾರಿ ವರ್ಗಾವಣೆ ಮಾಡಲಾಗಿದೆ. ಕಡತಗಳನ್ನೆಲ್ಲ ಬೆಂಗಳೂರಿಗೆ ತೆಗೆದುಕೊಂಡು ಹೋಗಿ, ಹಗರಣ ಮುಚ್ಚುವ ಪ್ರಯತ್ನ ನಡೆಸಲಾಗಿದೆ ಎಂದೂ ಸಿದ್ದೇಶ್ವರ ಆರೋಪಿಸಿದರು.

ಶಾಸಕ ಬಿ.ಪಿ. ಹರೀಶ್ ಮಾತನಾಡಿ, ತಾವು ಹಿಂದುಳಿದ ವರ್ಗದವರು ಎಂಬ ಕಾರಣಕ್ಕಾಗಿ ಬಿಜೆಪಿ ಆರೋಪ ಮಾಡುತ್ತಿದೆ ಎಂದು ಸಿದ್ದರಾಮಯ್ಯ ಹತಾಶ ಹೇಳಿಕೆ ನೀಡುತ್ತಿದ್ದಾರೆ. ಅವರು ಎಷ್ಟು ಆತಂಕಕ್ಕೆ ಗುರಿಯಾಗಿದ್ದಾರೆ ಎಂಬುದು, ಅವರ ಜಾತಿ ಅಸ್ತ್ರ ಬಳಕೆಯಿಂದಲೇ ಗೊತ್ತಾಗುತ್ತಿದೆ ಎಂದರು.

ಈ ಹಿಂದೆ ಬಿಜೆಪಿ ಆಡಳಿತವಿದ್ದಾಗ ಭೋವಿ ನಿಗಮದಲ್ಲೂ ಅವ್ಯವಹಾರ ನಡೆದಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ನನಗೆ ಗೊತ್ತಿರುವ ಪ್ರಕಾರ, ಈಗ ತನಿಖೆಯನ್ನೂ ಆರಂಭಿಸಲಾಗಿದೆ. ಯಾವುದೇ ನಿಗಮದಲ್ಲಿ ಹಗರಣ ನಡೆದಿದ್ದರೂ ತನಿಖೆಯಾಗಲಿ ಎಂದು ಹರೀಶ್ ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎನ್. ರಾಜಶೇಖರ್ ಮಾತನಾಡಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಂವಿಧಾನ ಪ್ರದರ್ಶಿಸುತ್ತಾರೆ. ಆದರೆ, ರಾಜ್ಯ ಕಾಂಗ್ರೆಸ್ ಸರ್ಕಾರ ಸಂವಿಧಾನ ಬಾಹಿರವಾಗಿ ಬಿಜೆಪಿಯ ಪ್ರತಿಭಟನೆ ಹತ್ತಿಕ್ಕಲು ಪ್ರಯತ್ನ ನಡೆಸಿದೆ. ಮುಡಾ ಹಗರಣದ ವಿರುದ್ಧ ಪ್ರತಿಭಟಿಸಲು ತೆರಳುತ್ತಿದ್ದವರನ್ನು ಬಂಧಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಎಸ್.ವಿ. ರಾಮಚಂದ್ರ, ವೀರೇಶ್ ಹನಗವಾಡಿ, ಬಿ.ಎಸ್. ಜಗದೀಶ್, ಶ್ರೀನಿವಾಸ ದಾಸಕರಿಯಪ್ಪ, ಶಿವನಹಳ್ಳಿ ರಮೇಶ್, ಕೊಂಡಜ್ಜಿ ಜಯಪ್ರಕಾಶ್, ಧನಂಜಯ ಕಡ್ಲೇಬಾಳು, ಮುರುಗೇಶ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!