ದಾವಣಗೆರೆ, ಜು. 11- ನಗರದ ಎಸ್.ಎಸ್. ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಸೆಂಟರ್‌ನಲ್ಲಿ ನೂತನ ಕ್ಯಾಥ್‌ಲ್ಯಾಬ್ ಅನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿದರು.
ಇದೇ ವೇಳೆ ಮಾತನಾಡಿದ ಅವರು, ದಾವಣಗೆರೆಯಲ್ಲಿ ಎಸ್.ಎಸ್. ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಕೇಂದ್ರವನ್ನು ಪ್ರಾರಂಭಿಸಿರುವುದು ಉತ್ತಮ ಗುಣಮಟ್ಟದ ಆರೋಗ್ಯ ಸೇವೆಯನ್ನು ಎಲ್ಲರಿಗೂ ತಲುಪಿ ಸುವ ಧ್ಯೇಯದಲ್ಲಿ ಮಹತ್ವದ ಹೆಜ್ಜೆಯನ್ನು ಪ್ರತಿನಿಧಿಸುತ್ತದೆ ಎಂದು ಶ್ಲ್ಯಾಘಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ನೂತನ ಕ್ಯಾಥ್‌ಲ್ಯಾಬ್ ಕಾರ್ಯವಿಧಾನದ ಬಗ್ಗೆ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮಾಹಿತಿ ನೀಡಿದರು.
ಹೊಸ ಕ್ಯಾಥ್‌ಲ್ಯಾಬ್ ಅತ್ಯುನ್ನತ ಆರೈಕೆ ಮತ್ತು ಕನಿಷ್ವ ರೇಡಿಯೇಷನ್ ಹೊಂದಿದೆ. ನಿಖರ ಮತ್ತು ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡುವುದಲ್ಲದೇ, ಹೃದಯದ ತುರ್ತು ಚಿಕಿತ್ಸೆಯನ್ನು ತಕ್ಷಣ ನಿರ್ವಹಣೆ ಮಾಡುತ್ತದೆ ಎಂದರು.
ನಮ್ಮ ಆಸ್ಪತ್ರೆಯಲ್ಲಿ ಎರಡನೇ ಸುಧಾರಿತ ಕ್ಯಾಥ್‌ಲ್ಯಾಬ್ ಅನ್ನು ಅನಾವರಣಗೊಳಿಸಲು ನಾವು ಅತ್ಯಂತ ಸಂತೋಷಗೊಂಡಿದ್ದೇವೆ. ಈ ವಿಸ್ತರಣೆಯು ನಾವು ಸೇವೆ ಸಲ್ಲಿಸುತ್ತಿರುವ ಸಮುದಾಯಗಳಿಗೆ ಉತ್ತಮ ಗುಣಮಟ್ಟದ, ಸಮಗ್ರ ಹೃದಯ ಆರೈಕೆಯನ್ನು ತರುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ಹೆಸರಾಂತ ತಜ್ಞರ ತಂಡವನ್ನು ಒಂದೇ ಸೂರಿನಡಿ ನೀಡುವ ಮೂಲಕ, ದಾವಣಗೆರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ರೋಗಿಗಳಿಗೆ ತಡೆ ರಹಿತ ಮತ್ತು ಪರಿಣಾಮಕಾರಿ ಚಿಕಿತ್ಸಾ ನೀಡುವ ಗುರಿ ಹೊಂದಿರುವುದಾಗಿ ತಿಳಿಸಿದರು.
ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ, ದಾವಣಗೆರೆ ಜಿಲ್ಲೆ ಸೇರಿದಂತೆ ಸುತ್ತಮುತ್ತಲಿನ ಜನರ ಆರೋಗ್ಯದ ದೃಷ್ಟಿ ಯಿಂದ ದೂರದ ನಗರಗಳಿಗೆ ಹೆಚ್ಚಿನ ಚಿಕಿತ್ಸೆಗೆ ಹೋಗುವ ಬದಲು ಉತ್ತಮ ಹಾಗೂ ಅತ್ಯಾಧುನಿಕ ವಿಶ್ವ ದರ್ಜೆಯ ಆರೋಗ್ಯ ಸೇವೆಗಳು ನಮ್ಮಲ್ಲಿಯೇ ಸಿಗುವಂತಾಗಬೇಕು ಎಂಬುದು ನಮ್ಮ ಆಶಯ ಎಂದರು.
ನಾರಾಯಣ ಹೆಲ್ತ್‌ನ ನಿರ್ದೇಶಕ ಡಾ. ವಿಜಯಸಿಂಗ್ ಮಾತನಾಡಿ, ನೂತನ ಕ್ಯಾಥ್‌ಲ್ಯಾಬ್ ಸೌಲಭ್ಯವು ದಾವಣಗೆರೆ ಜನತೆಗೆ ಅತ್ಯಾಧುನಿಕ ಹೃದಯ ರೋಗ ಚಿಕಿತ್ಸೆ ನೀಡಲು ನಮ್ಮ ಸಮರ್ಪಣಾ ಮನೋಭಾವನೆಯನ್ನು ಖಚಿತಪಡಿಸುತ್ತದೆ ಎಂದರು.
ಹೃದಯ ರೋಗವು ರೋಗಿಗಳು ಮತ್ತು ಅವರ ಕುಟುಂಬಗಳಿಗೆ ಅಪಾರ ಹೊರೆಯಾಗಿದೆ. ಈ ನಿಟ್ಟಿನಲ್ಲಿ ನಾರಾಯಣ ಹೆಲ್ತ್ ಸಮೂಹವು ಆಧುನಿಕ ರೋಗ ನಿರ್ಣಯದ ಸಾಧನಗಳು ಮತ್ತು ಹೆಚ್ಚು ನುರಿತ ಸೂಪರ್ ಸ್ಪೆಷಾಲಿಟಿ ವೈದ್ಯರ ತಂಡದೊಂದಿಗೆ ನಾವು ಹೃದ್ರೋಗದ ಹೊರೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕರುಗಳಾದ ಕೆ.ಎಸ್. ಬಸವಂತಪ್ಪ, ಜಗಳೂರು ದೇವೇಂದ್ರಪ್ಪ, ಜಿಲ್ಲಾಧಿಕಾರಿ ಡಾ.ಜಿ.ಎಂ. ಗಂಗಾಧರಸ್ವಾಮಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ್, ಪಾಲಿಕೆ ಸದಸ್ಯರಾದ ಗಡಿಗುಡಾಳ್ ಮಂಜುನಾಥ, ಕೆ. ಚಮನ್ ಸಾಬ್, ಪಾಮೇನಹಳ್ಳಿ ನಾಗರಾಜ್, ಎಸ್.ಎಸ್. ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆಡಳಿತ ಮಂಡಳಿ ಸದಸ್ಯರು, ವೈದ್ಯರು, ಸಿಬ್ಬಂದಿ ಇದ್ದರು.