ನೋಡಿ ಹೇಗಾಗಿದೆ..? : ಜಿಲ್ಲಾಸ್ಪತ್ರೆಯ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ತೋರಿಸುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್
ಎಂ.ಆರ್.ಐ. ಯಂತ್ರ, ಸುಸಜ್ಜಿತ ಲ್ಯಾಬ್ : ಸಚಿವ ದಿನೇಶ್
50 ಕೋಟಿ ರೂ. ಅನುದಾನ ನೀಡುವಂತೆ ಎಸ್ಸೆಸ್ಸೆಂ ಬೇಡಿಕೆ
ದಾವಣಗೆರೆ, ಜು.11- ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಹೊಸ ಬ್ಲಾಕ್ ನಿರ್ಮಾಣಕ್ಕೆ 17 ಕೋಟಿ ರೂ. ಹಾಗೂ ವಿವಿಧ ಕಾಮಗಾರಿಗಳಿಗೆ 6 ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, 2-3 ತಿಂಗಳಲ್ಲೇ ಎಂ.ಆರ್.ಐ. ಸ್ಕ್ಯಾನ್ ಯಂತ್ರ ಒದಗಿಸಲಾಗುವುದು. ಇದಕ್ಕಾಗಿ ಸದ್ಯದಲ್ಲೇ ಟೆಂಡರ್ ಕರೆಯಲಾಗುವುದು. ಇದರಿಂದ ರೋಗಿಗಳಿಗೆ ಉಚಿತ ಎಂ.ಆರ್.ಐ. ಸೌಲಭ್ಯ ಸಿಗಲಿದೆ ಎಂದರು.
ಆಸ್ಪತ್ರೆಗೆ ಇಂಟಿಗ್ರೇಟೆಡ್ ಪಬ್ಲಿಕ್ ಹೆಲ್ತ್ ಲ್ಯಾಬ್ ಸಹ ಮಂಜೂರಾಗಿದೆ. ಸಿ.ಜಿ. ಆಸ್ಪತ್ರೆಗೆ ಅಗತ್ಯ ಎಲ್ಲ ಸೌಲಭ್ಯ ಕಲ್ಪಿಸಲು ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
50 ಕೋಟಿ ರೂ.ಗೆ ಬೇಡಿಕೆ: ಜಿಲ್ಲಾಸ್ಪತ್ರೆಗೆ 50 ಕೋಟಿ ರೂ. ಅನುದಾನ, ಹೊಸ ಕಟ್ಟಡ, ಎಂ.ಆರ್.ಐ. ಸ್ಕ್ಯಾನ್, ಪ್ರಯೋಗಾಲಯ, ಸಿಬ್ಬಂದಿ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಆಗ್ರಹಿಸಿದರು.
ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು, ಇತ್ತೀಚೆಗಷ್ಟೇ ಆಸ್ಪತ್ರೆಯ ತಾರಸಿಯ ಒಂದು ಭಾಗ ಕುಸಿದಿತ್ತು. 4 ಜನ ಸ್ವಲ್ಪದರಲ್ಲೇ ಪಾರಾಗಿದ್ದರು ಎಂದು ಹೇಳಿದರು.
ಆಸ್ಪತ್ರೆಗೆ 17 ಕೋಟಿ ರೂ. ಅನುದಾನ ನೀಡುವುದಾಗಿ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಆದರೆ, ಇಷ್ಟು ಅನುದಾನ ಸಾಲದು. 50 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದಲ್ಲಿ ಸುಸಜ್ಜಿತವಾದ ಕಟ್ಟಡ ಹೊಂದಲು ಸಾಧ್ಯ ಎಂದರು.
ಇದರ ಜೊತೆಗೆ ಎಂ.ಆರ್.ಐ. ಹಾಗೂ ಸಿ.ಟಿ. ಸ್ಕ್ಯಾನ್ ರೀತಿಯ ಸೌಲಭ್ಯಗಳ ಅಗತ್ಯ ಇದೆ. ತಂತ್ರಜ್ಞರ ನೇಮಕವೂ ಆಗಬೇಕಿದೆ ಎಂದರು.
ಹಿಂದಿನವರು ಮಾತನಾಡಿದ್ರು ಮಾಡಲಿಲ್ಲ: ಎಸ್ಸೆಸ್ಸೆಂ
ಹಿಂದೆ ಅಧಿಕಾರದಲ್ಲಿದ್ದವರು ಬರೀ ಮಾತನಾಡಿದರೇ ಹೊರತು ಜಿಲ್ಲಾಸ್ಪತ್ರೆಯನ್ನು ಅಭಿವೃದ್ಧಿ ಮಾಡಲಿಲ್ಲ. ಕೋವಿಡ್ ಸಂದರ್ಭದಲ್ಲಂತೂ ಲೂಟಿ ಹೊಡೆದರು ಎಂದು ಜಿಲ್ಲಾ ಉಸ್ತುವಾರಿ ಸಚಿವ
ಎಸ್.ಎಸ್. ಮಲ್ಲಿಕಾರ್ಜುನ್ ಕಿಡಿಕಾರಿದರು.
ಬೆಂಗಳೂರಿನ ಜಯದೇವ ಆಸ್ಪತ್ರೆಯ ಮಾದರಿಯಲ್ಲಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಸೂಪರ್ ಸ್ಪೆಷಾಲಿಟಿ ಬ್ಲಾಕ್ ನಿರ್ಮಿಸಲು ಆರೋಗ್ಯ ಸಚಿವರು ಸಮ್ಮತಿ ನೀಡಿದ್ದಾರೆ. ಇದರಿಂದ ಕಾರ್ಡಿಯಾ, ನ್ಯೂರೋಲಜಿ ಅಂತಹ ಸಮಸ್ಯೆಗಳಿಗೆ ಅನುಕೂಲವಾಗಲಿದೆ ಎಂದು ಸಚಿವರು ಹೇಳಿದರು.
ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ಪೂರೈಸಲಾಗುವ ಔಷಧಗಳ ಗುಣಮಟ್ಟ ನಿರೀಕ್ಷೆಯ ಮಟ್ಟದಲ್ಲಿ ಇಲ್ಲ. ಈ ಬಗ್ಗೆ ನಿರಂತರ ನಿಗಾ ಹಾಗೂ ಹಠಾತ್ ಭೇಟಿ ಕ್ರಮದ ಅಗತ್ಯವಿದೆ.
– ಡಾ.ಪ್ರಭಾ ಮಲ್ಲಿಕಾರ್ಜುನ್, ಸಂಸದೆ
ಚಾಮರಾಜನಗರದಲ್ಲಿರುವ ಹಳೆಯ ಹೆರಿಗೆ ಆಸ್ಪತ್ರೆಯಲ್ಲೂ ಮೂಲಭೂತ ಸೌಲಭ್ಯಗಳ ಕೊರತೆ ಇದೆ. ಇಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ದಾಖಲಾಗುತ್ತಿದ್ದಾರೆ. ಇಲ್ಲಿಯೂ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಕೋವಿಡ್ ವೇಳೆ ಹಿಂದಿನ ಜಿಲ್ಲಾಧಿಕಾರಿ ಭ್ರಷ್ಟಾಚಾರ : ಕೊರೊನಾ ಸಮಯದಲ್ಲಿ ಒದಗಿಸಲಾದ ಯಾವುದೇ ಐ.ಸಿ.ಯು.ಗಳು ಕೆಲಸ ಮಾಡುತ್ತಿಲ್ಲ. ಕೊರೊನಾ ಸಮಯದಲ್ಲಿ ಡುಪ್ಲಿಕೇಟ್ ಬಿಲ್ ಮಾಡಿ ವಂಚಿಸಲಾಗಿದೆ. ಕೊರೊನಾ ಸಂದರ್ಭದಲ್ಲಿ ಶೇ.90ರಷ್ಟು ಭ್ರಷ್ಟಾಚಾರವಾಗಿದೆ ಎಂದು ಶಾಸಕ ಕೆ.ಎಸ್. ಬಸವಂತಪ್ಪ ಆರೋಪಿಸಿದರು.
ಜಿಲ್ಲಾಸ್ಪತ್ರೆಯಲ್ಲಿ ನರರೋಗ ತಜ್ಞರಿದ್ದಾರೆ. ಆದರೆ, ಎಂ.ಆರ್.ಐ. ಸ್ಕ್ಯಾನಿಂಗ್ ಯಂತ್ರವಿಲ್ಲ. ಚಿತ್ರದುರ್ಗದ ಆಸ್ಪತ್ರೆಯಲ್ಲಿ ತಜ್ಞ ವೈದ್ಯರೇ ಇಲ್ಲ. ಅಲ್ಲಿಗೆ ಎಂ.ಆರ್.ಐ. ಸ್ಕ್ಯಾನ್ ಯಂತ್ರ ಒದಗಿಸಲಾಗಿದೆ ಎಂದು ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು.
ಖಾಸಗಿಯಲ್ಲಿ ಸ್ಕ್ಯಾನಿಂಗ್ ಮಾಡಿಸಿಕೊಳ್ಳಬೇ ಕಾದರೆ 15 ಸಾವಿರ ರೂ.ಗಳ ಖರ್ಚಾಗುತ್ತದೆ. ಹೀಗಾಗಿ ದಾವಣಗೆರೆಯ ರೋಗಿಗಳು ಸ್ಕ್ಯಾನಿಂಗ್ ಮಾಡಿಸಿಕೊಳ್ಳಲು 5 ಸಾವಿರ ರೂ. ಖರ್ಚು ಮಾಡಿಕೊಂಡು ವಾಹನದಲ್ಲಿ ಚಿತ್ರದುರ್ಗಕ್ಕೆ ಹೋಗುವ ಪರಿಸ್ಥಿತಿ ಇದೆ. ಸ್ಕ್ಯಾನಿಂಗ್‌ಗಾಗಿ ಮೂರು ದಿನಗಳವರೆಗೆ ಕಾಯಬೇಕಿದೆ ಎಂದರು.
ಆಸ್ಪತ್ರೆಯ ಐ.ಸಿ.ಯು.ಗಳಲ್ಲಿ ಸಿಬ್ಬಂದಿಯ ತೀವ್ರ ಕೊರತೆ ಇದೆ. ಎಂಟು ಐ.ಸಿ.ಯು. ಬೆಡ್‌ಗಳಿಗೆ ಕೇವಲ ಒಬ್ಬರು ನರ್ಸ್ ಇದ್ದಾರೆ. ಐ.ಸಿ.ಯು. ರೋಗಿಗಳಿಗೆ ನಿರಂತರ ನಿಗಾ ಅವಶ್ಯಕತೆ ಇರುವುದರಿಂದ, ಪ್ರತಿ 8 ಬೆಡ್‌ಗಳಿಗೆ ಕನಿಷ್ಠ ಮೂವರು ನರ್ಸ್‌ಗಳ ಅಗತ್ಯವಿದೆ ಎಂದರು.
ಎಕ್ಸ್‌ರೇ ಯಂತ್ರಗಳು ಓಬಿರಾಯನ ಕಾಲದವಾಗಿವೆ. ಆಧುನಿಕ ಎಕ್ಸ್‌ರೇ ಯಂತ್ರಗಳ ಬೇಕಿದೆ. ಸೆಂಟ್ರಲ್ ಲ್ಯಾಬ್ ಅಗತ್ಯವಿದೆ. ಆಸ್ಪತ್ರೆಗೆ ಸುತ್ತಲಿನ 4-5 ಜಿಲ್ಲೆಗಳಿಂದ ರೋಗಿಗಳು ಬರುತ್ತಿದ್ದಾರೆ. ಆದರೆ, ಆಸ್ಪತ್ರೆಯೇ ದುಸ್ಥಿತಿಯಲ್ಲಿದೆ. ಕಟ್ಟಡ ಅವ್ಯವಸ್ಥೆಯ ಆಗರವಾಗಿದೆ. ಆಧುನಿಕ ಕಟ್ಟಡಕ್ಕೆ 50 ಕೋಟಿ ರೂ.ಗಳ ಅನುದಾನ ಬೇಕಿದೆ ಎಂದರು.