ಏರುತ್ತಿರುವ ಜನಸಂಖ್ಯೆಗೆ ಹಾಕಲೇಬೇಕು ಕಡಿವಾಣ

ಏರುತ್ತಿರುವ ಜನಸಂಖ್ಯೆಗೆ ಹಾಕಲೇಬೇಕು ಕಡಿವಾಣ

ಇಂದು ವಿಶ್ವ ಜನಸಂಖ್ಯಾ ದಿನಾಚರಣೆ 

ಭಾರತ ಸ್ವಾತಂತ್ರ್ಯ ಪೂರ್ವದಲ್ಲಿ ಎದುರಿಸುತ್ತಿದ್ದ ಹತ್ತು ಹಲವು ಸಮಸ್ಯೆಗಳನ್ನು  ಇಂದಿಗೂ ಎದುರಿಸುತ್ತಿದ್ದು, ಅವುಗಳಲ್ಲಿ ಪ್ರಮುಖವಾಗಿ ಬಡತನ, ವಸತಿ, ಅನಕ್ಷರತೆ, ನಿರುದ್ಯೋಗ, ವಲಸೆ ಸಮಸ್ಯೆ ಇತ್ಯಾದಿ. ಈ ಸಮಸ್ಯೆಗಳು ಉಂಟಾಗಲು ಮೂಲ ಕಾರಣ ಏರುತ್ತಿರುವ ಜನಸಂಖ್ಯೆ. ಇದನ್ನು ನಿಯಂತ್ರಿಸದ ಹೊರತು ಯಾವುದೇ ಸಮಸ್ಯೆಗಳಿಗೆ ಪರಿಹಾರ ದೊರಕದು. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಜನಸಂಖ್ಯಾ ಏರಿಕೆಯಿಂದ ಆಗುವ ಸಮಸ್ಯೆಗಳು, ಇದರ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅರಿವು ಮೂಡಿಸಲು ಪ್ರತಿ ವರ್ಷ ಜುಲೈ 11 ರಂದು ವಿಶ್ವ ಜನಸಂಖ್ಯಾ ದಿನವನ್ನು ಸಾರ್ವತ್ರಿಕವಾಗಿ ಎಲ್ಲೆಡೆ  ಆಚರಿಸಲಾಗುವುದು. ಇದರ ಆಚರಣೆಯ ಮೂಲ  ಉದ್ದೇಶ ಕುಟುಂಬ ಯೋಜನೆಯ ಪ್ರಾಮುಖ್ಯತೆ, ಲಿಂಗ ಸಮಾನತೆ, ಬಡತನ, ತಾಯಿಯ ಆರೋಗ್ಯ ಮತ್ತು ವಿವಿಧ ಜನಸಂಖ್ಯಾ ಸಮಸ್ಯೆಗಳ ಕುರಿತು ಜನರಲ್ಲಿ ಅರಿವು ಮೂಡಿಸುವುದಾಗಿದೆ. 

1987 ಜುಲೈ 11 ರಂದು ವಿಶ್ವದ ಜನಸಂಖ್ಯೆ 5 ಬಿಲಿಯನ್ ( 500 ಕೋಟಿ) ತಲುಪಿದ್ದರ ಸವಿನೆನಪಿಗಾಗಿ ವಿಶ್ವಸಂಸ್ಥೆ ಈ ದಿನವನ್ನು ವಿಶ್ವ ಜನಸಂಖ್ಯಾ ದಿನವನ್ನಾಗಿ ಆಚರಿಸಲು ಘೋಷಿಸಿತು. ಇದರ ಮೊದಲ ಆಚರಣೆಯನ್ನು 1990 ರ ಜುಲೈ 11 ರಂದು ಮಾಡಲಾಯಿತು. ಈ ವರ್ಷದ ವಿಶ್ವ ಜನಸಂಖ್ಯಾ ದಿನದ ಆಚರಣೆಯ ಉದ್ದೇಶ “ಹೆಚ್ಚುತ್ತಿರುವ ಜಾಗತಿಕ ಜನಸಂಖ್ಯೆಯಿಂದ ಎದುರಿಸುತ್ತಿರುವ ಸವಾಲುಗಳು” (ongoing challenges posed by a growing global population) ಎಂಬುದಾಗಿದೆ.

ಪ್ರಸ್ತುತ ಅಂಕಿ-ಅಂಶಗಳನ್ನು ಗಮನಿಸಿ ದಾಗ ಭಾರತ (144 ಕೋಟಿ) ಚೀನಾ (142 ಕೋಟಿ) ಕ್ಕಿಂತ  ಜನಸಂಖ್ಯೆಯ ಪ್ರಮಾಣದಲ್ಲಿ ಮುಂದಿದೆ. ಇದುವರೆಗೆ  ಜನಸಂಖ್ಯಾ ಗಾತ್ರ ದಲ್ಲಿ ಎರಡನೇ ಸ್ಥಾನದಲ್ಲಿದ್ದ ಭಾರತ, ಕಳೆದ ವರ್ಷದಿಂದ ಮೊದಲ ಸ್ಥಾನವನ್ನು ಗಳಿಸಿ, ಇಡೀ ವಿಶ್ವದಲ್ಲಿ ಅಚ್ಚರಿ ಮೂಡಿಸಿದೆ. ವಿಶ್ವದ ಒಟ್ಟು ಜನರಲ್ಲಿ ಶೇ.18.01ರಷ್ಟು ಭಾರತೀಯರೇ ಇದ್ದಾರೆ. ನಮ್ಮ ದೇಶದಂತಹ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಇದು ಪ್ರಮುಖ ಸಮಸ್ಯೆಯಾಗಿ ಪರಿಣಮಿಸಿದೆಯಲ್ಲದೆ ಇದು  ಬಡತನ, ನಿರುದ್ಯೋಗ, ಅನಕ್ಷರತೆ, ಆಂತರಿಕ ವಲಸೆ, ಸಾರಿಗೆ ಸೌಲಭ್ಯಗಳ ಕೊರತೆ, ಆಹಾರ ಸಮಸ್ಯೆ, ವಸತಿ ಸಮಸ್ಯೆಗಳಿಗೆ ನೇರವಾಗಿ ಕಾರಣವಾಗುತ್ತದೆ. ಪ್ರಸ್ತುತ ಜನಸಂಖ್ಯಾ ಗಾತ್ರ ಅಧಿಕಗೊಳ್ಳಲು ಕುಟುಂಬ ಕಲ್ಯಾಣ ಕಾರ್ಯಕ್ರಮಗಳನ್ನು  ಸರ್ಕಾರ ಹಾಗೂ ಜನತೆ ಸರಿಯಾಗಿ ಪಾಲನೆ ಮಾಡದಿರುವುದೇ ಆಗಿದೆ. 

ಈ ಹಿನ್ನೆಲೆಯಲ್ಲಿ  ಇಂತಹ ಮೂಲಭೂತ ಸಮಸ್ಯೆಗಳನ್ನು ನಿವಾರಿಸಲು ಆಳುವ ಸರ್ಕಾರಗಳು ಕೈ ಹಾಕದಿದ್ದಲ್ಲಿ ಮುಂದೆ ಇದಕ್ಕಿಂತ ಭೀಕರ ಸಮಸ್ಯೆಗಳನ್ನು ಎದುರಿಸಬೇಕಾದೀತು. ಭಾರತೀಯರ  ಭವಿಷ್ಯ ಕೇವಲ  ಸರ್ಕಾರದ ಮೇಲಿಲ್ಲ. ಅದು  ಪ್ರತಿಯೊಬ್ಬ ನಾಗರಿಕನ ಕೈಲಿದೆ. ನಮ್ಮ ದೇಶದಲ್ಲಿ ಯುವಕರ ಸಂಖ್ಯೆ ಹೆಚ್ಚಿದ್ದು, ಅವರೆಲ್ಲರೂ ಉತ್ಪಾದನಾ ಚಟುವಟಿಕೆಯಲ್ಲಿ ತೊಡಗಿಕೊಂಡಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು  ಸಾಧ್ಯ. ಚೀನಾದಂತಹ  ರಾಷ್ಟ್ರದಲ್ಲಿ ಪ್ರತಿಯೊಬ್ಬರೂ ದುಡಿದು ತಿನ್ನಬೇಕು. ಆದರೆ ಭಾರತದಲ್ಲಿ  “ಕೂತು ಉಣ್ಣುವವನಿಗೆ ಕುಡಿಕೆ ಹೊನ್ನು ಸಾಲದು” ಎಂಬಂತೆ   ದುಡಿದು ತಿನ್ನುವವರಿಗಿಂತ ಕೂತು  ತಿನ್ನುವ ಜನರೇ   ಜಾಸ್ತಿ. ಇದರಿಂದ ದೇಶದ ಸಂಪತ್ತು ಕರಗಿ ಹೋಗುವುದರ ಜೊತೆಗೆ  ಪ್ರತಿಯೊಬ್ಬರ ಭವಿಷ್ಯ ಮಸುಕಾಗುತ್ತದೆ. ಈ ಸಮಸ್ಯೆಯಿಂದ ಹೊರಗೆ ಬರಲು ಎಲ್ಲರೂ ದುಡಿದು ತಿನ್ನಬೇಕು ಇಲ್ಲವೇ ತೀವ್ರವಾಗಿ  ಬೆಳೆಯುತ್ತಿರುವ ಜನಸಂಖ್ಯೆಗೆ ಕಡಿವಾಣ ಹಾಕಲೇಬೇಕು, ಹಾಗಾದಾಗ ಮಾತ್ರ  ದೇಶ ಅಭಿವೃದ್ಧಿ ಹೊಂದಲು ಸಾಧ್ಯ. ಈ ನಿಟ್ಟಿನಲ್ಲಿ ಜನಸಂಖ್ಯಾ ಏರಿಕೆಯ ಪ್ರಮಾಣವನ್ನು  ಆದಷ್ಟು ಮಟ್ಟಿಗೆ ನಿಯಂತ್ರಿಸಲು ಕೆಲವೊಂದು ದಿಟ್ಟ  ಕ್ರಮಗಳನ್ನು  ವೈಯಕ್ತಿಕವಾಗಿ ಹಾಗೂ ಸರ್ಕಾರದ ಮಟ್ಟದಲ್ಲಿ ತೆಗೆದುಕೊಳ್ಳುವ ಅವಶ್ಯಕತೆ ಹೆಚ್ಚಿದೆ, ಅಂದರೆ :

* ಮಹಿಳೆಯರನ್ನು ಸಬಲೀಕರಣಗೊಳಿಸುವುದು

* ಶಾಸನ ಸಭೆಗಳಲ್ಲಿ ಜನಸಂಖ್ಯಾ ನಿಯಂತ್ರಣ ಮಸೂದೆ ಯನ್ನು ಮಂಡಿಸುವುದು.                      

* ಪ್ರತಿ ವಿದ್ಯಾವಂತ ಯುವಕ-ಯುವತಿಯರು ಜನಸಂಖ್ಯಾ ಏರಿಕೆಯಿಂದ ಉಂಟಾಗುವ ಸಮಸ್ಯೆಗಳನ್ನು ತಮ್ಮ ನೆರೆ ಹೊರೆಯವರಿಗೆ ತಿಳಿಸುವುದು.

* ಸರ್ಕಾರಗಳು ಮಾಧ್ಯಮಗಳ ಮೂಲಕ ಚಿಕ್ಕ  ಕುಟುಂಬದ ಅಗತ್ಯತೆಯ ಬಗ್ಗೆ ಅರಿವು ಮೂಡಿಸುವುದು.

* ಬಾಲ್ಯ ವಿವಾಹಗಳನ್ನು ತಡೆಗಟ್ಟುವುದು.

* ಕುಟುಂಬಕ್ಕೆ ಒಂದೇ ಮಗು ಎಂಬ ನೀತಿಯನ್ನು ಜಾರಿಗೆ ತಂದು ಇದನ್ನು ಪಾಲಿಸುವ  ಕುಟುಂಬಗಳಿಗೆ ಆಕರ್ಷಕ ಬಹುಮಾನಗಳನ್ನು ನೀಡುವುದು.

* ಕುಟುಂಬ ಯೋಜನೆಯ ನಿಯಮ ಪಾಲಿಸದವರಿಗೆ ಸರ್ಕಾರದಿಂದ ದೊರಕುವ ಎಲ್ಲಾ ಸೌಲಭ್ಯಗಳನ್ನು ನಿಲ್ಲಿಸುವುದು.

* ಚುನಾವಣೆಗಳಲ್ಲಿ ಸ್ಪರ್ಧಿಸ ಬಯಸುವವರಿಗೆ ಕುಟುಂಬದ ಗಾತ್ರದ ಮೇಲೆ ಮಿತಿ ಹೇರುವುದು.

* ಕುಟುಂಬ ಕಲ್ಯಾಣ ಯೋಜನೆಗಳನ್ನು ಪ್ರತಿ ಕುಟುಂಬದವರು ತಪ್ಪದೇ ಅಳವಡಿಸಿಕೊಳ್ಳಲು ಸೂಚಿಸುವುದು.

* ಜನಸಂಖ್ಯಾ ಏರಿಕೆಯನ್ನು ತಡೆಗಟ್ಟಲು  ಸಾರ್ವಜನಿಕವಾಗಿ ಚರ್ಚೆ, ಉಪನ್ಯಾಸ, ವಿಚಾರ ಸಂಕಿರಣಗಳನ್ನು  ಏರ್ಪಡಿಸುವುದು.             

* ಪ್ರೌಢಶಾಲಾ ಹಂತದಲ್ಲಿ ಜನಸಂಖ್ಯಾ ಶಿಕ್ಷಣ ಕುರಿತ ವಿಷಯ ಬೋಧನೆಗೆ ಆದ್ಯತೆ ಕಲ್ಪಿಸುವುದು.

ಇಂತಹ ಹಲವು ಕ್ರಮಗಳನ್ನು  ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತಂದಿದ್ದೇ ಆದಲ್ಲಿ ತಕ್ಕಮಟ್ಟಿಗಾದರೂ ಜನಸಂಖ್ಯಾ ಏರಿಕೆಗೆ ಕಡಿವಾಣ ಹಾಕಬಹುದು. ಈ ಮೂಲಕ  ಪ್ರತಿಯೊಬ್ಬರ  ಮನೆ ಮನಗಳಲ್ಲಿ ಸಂತೋಷ ಮೂಡಿಸುವ ಪ್ರಯತ್ನ ಮಾಡಬಹುದು ಹಾಗೂ ದೇಶದ  ಅಭಿವೃದ್ಧಿಗೆ  ಪೂರಕವಾಗಿ ಸ್ಪಂದಿಸಬಹುದು.     

– ಡಾ. ಶಿವಯ್ಯ ಎಸ್, ವಿಶ್ರಾಂತ ಪ್ರಾಧ್ಯಾಪಕರು, ದಾವಣಗೆರೆ.   [email protected]

error: Content is protected !!