ಜನರ ವಿಶ್ವಾಸ ಸ್ಮರಿಸಿದ ವೆಂಕಟೇಶ್ ಸಹಕಾರ ಬಯಸಿದ ಗಂಗಾಧರ ಸ್ವಾಮಿ

ಜನರ ವಿಶ್ವಾಸ ಸ್ಮರಿಸಿದ ವೆಂಕಟೇಶ್ ಸಹಕಾರ ಬಯಸಿದ ಗಂಗಾಧರ ಸ್ವಾಮಿ

ನಿಕಟಪೂರ್ವ ಜಿಲ್ಲಾಧಿಕಾರಿಗೆ ಬೀಳ್ಕೊಡುಗೆ, ನೂತನ ಜಿಲ್ಲಾಧಿಕಾರಿಗೆ ಸ್ವಾಗತ

ದಾವಣಗೆರೆ, ಜು. 10 – ಕಳೆದೊಂದು ವರ್ಷದಿಂದ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ್ದ ಎಂ.ವಿ. ವೆಂಕಟೇಶ್ ಅವರಿಗೆ  ಬೀಳ್ಕೊಡುಗೆ ಮತ್ತು ನೂತನವಾಗಿ ಜಿಲ್ಲಾಧಿಕಾರಿಯಾಗಿ ಆಗಮಿಸಿರುವ ಜಿ. ಎಂ.ಗಂಗಾಧರಸ್ವಾಮಿ ಅವರಿಗೆ ಸ್ವಾಗತ ಕೋರುವ ಕಾರ್ಯಕ್ರಮವನ್ನು ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ನೆರವೇರಿಸಲಾಯಿತು. ವಿವಿಧ ಇಲಾಖೆ, ಸಂಘ -ಸಂಸ್ಥೆಗಳ ಸಹಯೋಗ ದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. 

ಈ ವೇಳೆ ಮಾತನಾಡಿದ ನಿಕಟ ಪೂರ್ವ ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್ ಅವರು, ಅಧಿಕಾರಿಗ ಳೊಂದಿಗೆ ತಂಡದ ರೀತಿಯಲ್ಲಿ ಕೆಲಸ ಮಾಡಿದ್ದರಿಂದ ಅನೇಕ ವರ್ಷಗಳಿಂದ ಬಗೆಹರಿಯದೇ ಇದ್ದ ಮತ್ತು ಜಟಿಲವಾದ ಸಮಸ್ಯೆಗಳನ್ನು ಇತ್ಯರ್ಥ ಮಾಡಲಾಯಿತು. ಇದಕ್ಕೆ ಬೇಕಾದ ಎಲ್ಲಾ ಸಹಕಾರ ಜನಪ್ರತಿನಿಧಿಗಳಿಂದ ಸಿಕ್ಕಿದ್ದರಿಂದ ಅಲ್ಪ ಅವಧಿಯಲ್ಲಿ ಗುರುತರವಾದ ಕೆಲಸ ಮಾಡಲು ಸಾಧ್ಯವಾಗಿತು ಎಂದರು.

ಜಿಲ್ಲಾಧಿಕಾರಿಯಾಗಿ ಕೆಲಸ ಮಾಡುವಾಗ ಜನಪ್ರತಿನಿಧಿಗಳು, ಅಧಿಕಾರಿಗಳು, ಸಾರ್ವಜನಿಕರು, ರೈತರು, ಸಂಘ, ಸಂಸ್ಥೆಯವರ ವಿಶ್ವಾಸ ಪಡೆದಾಗ ನಾವು ಮಾಡುವ ಕೆಲಸ ಸಂಪೂರ್ಣವಾಗಿ ಯಶಸ್ವಿಯಾಗಲು ಸಾಧ್ಯ ಎಂದರು.

ಜಿಲ್ಲೆಯಲ್ಲಿ ಕೈಗೊಂಡ ಜನಸ್ಪಂದನ ಕಾರ್ಯಕ್ರಮದಲ್ಲಿ ಅನೇಕ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಇತ್ಯರ್ಥ ಮಾಡಿ ಜನಮಾನಸದಲ್ಲಿ ಉಳಿಯುವಂತೆ ಮಾಡಲಾಗಿದೆ ಎಂದರು.

ಎಲ್ಲಾ ಇಲಾಖೆ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದ್ದರಿಂದ ದಾವಣಗೆರೆ ಜಿಲ್ಲೆ ಹಲವು ವಿಷಯಗಳಲ್ಲಿ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ. ಲ್ಯಾಂಡ್‍ಬೀಟ್, ಪಹಣಿಗೆ ಆಧಾರ್ ಜೋಡಣೆ ಸೇರಿದಂತೆ ರಾಜ್ಯದಲ್ಲಿ ಗುರುತಿಸಿಕೊಂಡ ಜಿಲ್ಲೆಯಾಗಿದೆ ಎಂದರು. 

ನೂತನ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲರ ಸಹಕಾರ, ಎಲ್ಲರೊಟ್ಟಿಗೆ ಸೇರಿ ಜಿಲ್ಲೆಯ ಅಭಿವೃದ್ದಿ ಮಾಡೋಣ. ಬಂದ ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಿಯೇ ಅಧಿಕಾರಿ ವರ್ಗ ಇರುವುದು. ನಾವೆಲ್ಲರೂ ತಂಡವಾಗಿ ಕೆಲಸ ಮಾಡೋಣ ಎಂದರು. 

ಅನೇಕ ಹಿಂದಿನ ಜಿಲ್ಲಾಧಿಕಾರಿಗಳ ತಮ್ಮ ಸೇವಾ ಅವಧಿಯಲ್ಲಿ ಮಾಡಿದ ಕೆಲಸಗಳು, ಆಡಳಿತಾತ್ಮಕ ಅನುಭವಗಳ ಸಂಗ್ರಹವನ್ನು ಪುಸ್ತಕದ ರೂಪದಲ್ಲಿ ತಂದಿದ್ದಾರೆ. ಅಂತಹ ಪುಸ್ತಕಗಳನ್ನು ಓದುವ ಮೂಲಕ ಜನರ ಸೇವೆಯನ್ನು ಯಾವ ರೀತಿ ಹೊಸ ಉದ್ದೇಶದಿಂದ ಕೆಲಸ ಮಾಡಬಹುದೆಂದು ಎಲ್ಲರ ಒಗ್ಗಟ್ಟಿನಿಂದ ಕೆಲಸ ಮಾಡೋಣ ಎಂದರು. ಆಡಳಿತಾತ್ಮಕ ವಿಷಯಗಳಲ್ಲಿ ಕಠಿಣತೆಯು ಇರುತ್ತದೆ, ಕೆಲಸ ಮಾಡಿ ದವರ ಮೇಲೆ ಸರಳತೆಯು ಇರುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು. 

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್, ನ್ಯಾಯಮೂರ್ತಿ ಸುಭಾಷ್ ಬಿ.ಆಡಿ, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಹೆಚ್ಚುವರಿ ರಕ್ಷಣಾಧಿಕಾರಿ ವಿಜಯಕುಮಾರ್ ಎಂ.ಸಂತೋಷ್, ಪಾಲಿಕೆ ಆಯುಕ್ತರಾದ ರೇಣುಕಾ, ಉಪವಿಭಾಗಾಧಿಕಾರಿ ದುರ್ಗಶ್ರೀ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!