ಇಸ್ಲಾಮಿಕ್ ಸ್ಟೇಟ್ ಸಂಚು ಪ್ರಕರಣ : ಇನ್ನಿಬ್ಬರ ಬಂಧನ
ಬೆಂಗಳೂರು, ಜ. 5 – ಇಸ್ಲಾಮಿಕ್ ಸ್ಟೇಟ್ ಉಗ್ರವಾದಿ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ಸೇರಿದಂತೆ ಆರು ಕಡೆ ಶೋಧ ನಡೆಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್.ಐ.ಎ.) ಇಬ್ಬರನ್ನು ಬಂಧಿಸಿದೆ.
ಉಡುಪಿಯ ಬ್ರಹ್ಮಾವರದ ವರಂಬಲ್ಲಿ ಎಂಬಲ್ಲಿಂದ ರೆಶಾನ್ ತಾಜುದ್ದೀನ್ ಶೇಖ್ ಹಾಗೂ ಶಿವಮೊಗ್ಗದ ಟಿಪ್ಪು ಸುಲ್ತಾನ್ ನಗರದಿಂದ ಹುಜೇರ್ ಫರ್ಹಾನ್ ಬೇಗ್ ಎಂಬುವವರನ್ನು ಬಂಧಿಸಲಾಗಿದೆ.
ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಸಿಲುಕಿರುವ ಮೊಹಮ್ಮದ್ ಶಾರೀಕ್‌ಗೂ, ಐಸಿಸ್ ಉಗ್ರ ವಾದಿ ಸಂಘಟನೆ ಪ್ರಕರಣಕ್ಕೂ ನಿಕಟ ಸಂಪರ್ಕವಿದೆ.
ದಕ್ಷಿಣ ಕನ್ನಡ, ಶಿವಮೊಗ್ಗ, ದಾವಣಗೆರೆ ಹಾಗೂ ಬೆಂಗಳೂರು ಜಿಲ್ಲೆಗಳಲ್ಲಿ ಗುರುವಾರ ಎನ್.ಐ.ಎ. ಅಧಿಕಾರಿಗಳು ಶೋಧ ನಡೆಸಿದ್ದರು.
ನಿಷೇಧಿತ ಐ.ಎಸ್. ಉಗ್ರವಾದಿ ಸಂಘಟನೆಯ ಚಟುವಟಿಕೆಗಳಲ್ಲಿ ತೊಡಗಿಕೊಂಡು ಸಂಚು ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆಸಲಾಗಿತ್ತು.
ಈ ಹಿಂದೆ ಬಂಧಿತರಾದ ಮೊಹಮ್ಮದ್ ಶಾರೀಕ್ ಹಾಗೂ ಮಾಜ್ ಮುನೀರ್ ವಿಚಾರಣೆ ವೇಳೆ ದೊರೆತ ಸುಳಿವಿನ ಆಧಾರದ ಮೇಲೆ ದಾಳಿ ನಡೆಸಲಾಗಿದೆ.
ಮಾಜ್ ಮುನೀರ್ ತನ್ನ ನಿಕಟವರ್ತಿಗಳಾದ ರೆಶಾನ್ ತಾಜುದ್ದೀನ್ ಹಾಗೂ ಹುಜೇರ್ ಫರ್ಹಾನ್ ಬೇಗ್ ಇವರನ್ನು ತೀವ್ರವಾದಕ್ಕೆ ಸೆಳೆದಿದ್ದ ಎಂಬುದು ಎನ್.ಐ.ಎ.ಗೆ ಪತ್ತೆಯಾಗಿದೆ. ಉಭಯರು ಕ್ರಿಪ್ಟೋ ಮೂಲಕ ಐ.ಎಸ್. ಸಂಘಟನೆಗೆ ಸೇರಿದ ವ್ಯಕ್ತಿಯೋರ್ವನಿಂದ ಹಣ ಪಡೆದು ಉಗ್ರವಾದಿ ಚಟುವಟಿಕೆಯಲ್ಲಿ ತೊಡಗಿದ್ದರು ಎಂದು ಆರೋಪಿಸಲಾಗಿದೆ.
ತಮ್ಮ ದೊಡ್ಡ ಮಟ್ಟದ ಹಿಂಸಾಕೃತ್ಯ ಹಾಗೂ ವಿನಾಶಕಾರಿ ಯೋಜನೆಗಳ ಭಾಗವಾಗಿ, ಲಿಕ್ಕರ್ ಶಾಪ್‌ಗಳು, ಗೋದಾಮುಗಳು ಮತ್ತು ಟ್ರಾನ್ಸ್‌ಫಾರ್ಮರ್‌ಗಳಂತಹ ಕಟ್ಟಡಗಳು ಹಾಗೂ ವಾಹನಗಳನ್ನು ಗುರಿಯಾಗಿಸುವ ಮತ್ತು ಬೆಂಕಿ ಹಚ್ಚುವ ಕೆಲಸಗಳಲ್ಲಿ ಕೂಡ ಅವರು ಭಾಗಿಯಾಗಿದ್ದರು ಎಂದು ಎನ್.ಐ.ಎ. ತಿಳಿಸಿದೆ. ಆರೋಪಿಗಳು ಮತ್ತು ಶಂಕಿತರ ಮನೆಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡಿದ ವೇಳೆ ಅನೇಕ ಡಿಜಿಟಲ್ ಉಪಕರಣಗಳು ಹಾಗೂ ಪ್ರಚೋದನಾಕಾರಿ ದಾಖಲೆಗಳನ್ನು ವಶಪಡಿಸಿಕೊಂಡಿರುವುದಾಗಿ ಎನ್.ಐ. ಎ. ಹೇಳಿದೆ.