ಭದ್ರಾ ಡ್ಯಾಂ ಗೇಟ್ ರಿಪೇರಿ ತಾತ್ಕಾಲಿಕ ಮಾತ್ರ, ಡ್ಯಾಂ ನೀರು ಯಾವುದೇ ಸಮಯದಲ್ಲಾದರೂ ಖಾಲಿಯಾಗಬಹುದು !!!

ಮಾನ್ಯರೇ, 

ನಿನ್ನೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಮುಖಂಡರಾದ ಮಾಡಾಳ್ ಮಲ್ಲಿಕಾರ್ಜುನ, ಲೋಕಿಕೆರೆ ನಾಗರಾಜ್, ಧನಂಜಯ ಕಡ್ಲೇಬಾಳ್, ಚಂದ್ರಶೇಖರ ಪೂಜಾರ್ ಮುಂತಾದವರು ಭದ್ರಾ ಡ್ಯಾಂಗೆ ಖುದ್ದು ಭೇಟಿ ನೀಡಿದ್ದರು. ಡ್ಯಾಂನ ಸ್ಲೂಯಿಸ್ ಗೇಟ್‌ನಿಂದ ನೀರು ಪೋಲಾಗುತ್ತಿರುವುದನ್ನು ಖುದ್ದು ವೀಕ್ಷಣೆ ಮಾಡಿದ್ದಾರೆ. ನೀರು ಹೊಳೆಗೆ ಹರಿಯುತ್ತಿರುವುದು ಸಂಪೂರ್ಣ ನಿಂತಿಲ್ಲ.   ಅಲ್ಲಿನ ಭದ್ರಾ ಎಕ್ಸಿಕ್ಯೂಟಿವ್ ಇಂಜಿನಿಯರ್ ರವಿಕುಮಾರ್ ಅವರೊಂದಿಗೆ ಚರ್ಚಿಸಿ ಮಾತನಾಡಿದ್ದಾರೆ. 

ಇಂಜಿನಿಯರ್ ರವಿಕುಮಾರ್‌ ಹೇಳುವ ಪ್ರಕಾರ, ಕಳೆದ ಏಪ್ರಿಲ್ ತಿಂಗಳಿ ನಲ್ಲಿಯೇ ಗೇಟ್ ಕೆಟ್ಟಿರುವ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಿ, ರಿಪೇರಿ ಮಾಡಿಸಲು 20 ಲಕ್ಷ ರೂ. ಅನುದಾನ ಬಿಡುಗಡೆ ಮಾಡುವಂತೆ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಲೋಕಸಭಾ ಚುನಾವಣೆ ನಿಮಿತ್ತ ನೀತಿ ಸಂಹಿತೆ ಇದೆ ಎಂಬ ನೆಪವೊಡ್ಡಿ ಹಣ ಬಿಡುಗಡೆ ಮಾಡಿಲ್ಲ. 

ಕಾಂಗ್ರೆಸ್ ಸರ್ಕಾರದ ದಿವ್ಯ ನಿರ್ಲಕ್ಷ್ಯ ದಿಂದಾಗಿ ಇಷ್ಟು ದಿನ ಕಾಲಹರಣ ಮಾಡ ಲಾಗಿದೆ. ಅಲ್ಲಿಂದ ಇಲ್ಲಿಯವರೆಗೆ ನೀರು ಹೊಳೆಗೆ ಹರಿದು ಪೋಲಾಗಿದೆ. ಚುನಾವಣೆ ಮುಗಿದ ನಂತರವೂ ವಸ್ತುಸ್ಥಿತಿಯ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲದಿರುವುದು ದುರ್ದೈವದ ಸಂಗತಿ. 

ಜಲಸಂಪನ್ಮೂಲ ಖಾತೆ ಹೊಂದಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ದಾವಣಗೆರೆ ಜಿಲ್ಲೆಯ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಮತ್ತು ಭದ್ರಾ ನೀರಾವರಿ ಸಲಹಾ ಸಮಿತಿ (ಐ.ಸಿ.ಸಿ) ಅಧ್ಯಕ್ಷರಾಗಿರುವ ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಗಳು ಇಂತಹ ಪ್ರಮಾದಕ್ಕೆ ನೇರ ಹೊಣೆಗಾರರಾಗುತ್ತಾರೆ.

ಎಸ್.ಎಸ್.ಮಲ್ಲಿಕಾರ್ಜುನ್ ಅವರು ಪತ್ನಿ ಚುನಾವಣೆಯಲ್ಲಿ ಮತ್ತು ಮಧು ಬಂಗಾರಪ್ಪ ಅವರು ಅಕ್ಕನ ಚುನಾವಣೆಯಲ್ಲಿ ಬ್ಯೂಸಿ. ಹೀಗಾಗಿ ಕಳೆದ ಹಂಗಾಮಿನಲ್ಲಿ ಭೀಕರ ಬರದಿಂದ ತತ್ತರಿಸಿರುವ ರೈತರ ಗೋಳು ಕೇಳುವವರಿಲ್ಲ. 

ನಿನ್ನೆ ಡ್ಯಾಂಗೆ ಭೇಟಿ ನೀಡಿದ್ದ ಮುಖಂಡರು ಹೇಳುವ ಪ್ರಕಾರ, ಗೇಟ್ ರಿಪೇರಿ ಮಾಡಿರುವುದು ತಾತ್ಕಾಲಿಕ ವ್ಯವಸ್ಥೆ ಮಾತ್ರ. ಯಾವ ಸಮಯದಲ್ಲಾದರೂ ಗೇಟ್‌ನಿಂದ ನೀರು ಹರಿದು ಹೋಗಿ ಡ್ಯಾಂ ಖಾಲಿಯಾಗಬಹುದು. ಎಲ್ಲಾ ಕಡೆ ಮಳೆ ಚೆನ್ನಾಗಿ ಆಗುತ್ತಿದೆ. ಮಳೆ ಅಬ್ಬರಿಸುತ್ತಿದೆ. ಬತ್ತಿ ಬರಿದಾಗಿದ್ದ ಜಲಪಾತಗಳು ತುಂಬಿ ಭೋರ್ಗರೆಯುತ್ತಿವೆ ಎಂಬ ಸಂತಸ ತರುವ ಸುದ್ದಿಗಳನ್ನು ಟಿವಿ, ಯೂಟ್ಯೂಬ್‌ಗಳಲ್ಲಿ ನೋಡಿ ನೋಡಿ ರೈತರು ಸಾಕಾಗಿ ಹೋಗಿದ್ದಾರೆ. ಆದರೆ, ನಮ್ಮ ಭದ್ರಾ ಡ್ಯಾಂಗೆ ನೀರು ಹರ್ಷ ತರುವ ರೀತಿಯಲ್ಲಿ ಬರುತ್ತಿಲ್ಲ. ಶೃಂಗೇರಿ, ಒಳನಾಡು, ಕುದುರೆಮುಖ ಪ್ರದೇಶದಲ್ಲಿ ಮಳೆ ಚೆನ್ನಾಗಿ ಆಗುತ್ತಿದೆ ಎಂದು ಟಿವಿಗಳಲ್ಲಿ ನೋಡಿದ್ದೇವೆ. ಆದರೆ, ಡ್ಯಾಂಗೆ ಒಳಹರಿವಿನ ಪ್ರಮಾಣ ಹೇಳಿಕೊಳ್ಳುವಂತಹ ರೀತಿಯಲ್ಲಿ ಇಲ್ಲ. ಹಿಂದೆಲ್ಲಾ ಶೃಂಗೇರಿ, ಒಳನಾಡು, ಕುದುರೆಮುಖ ಪ್ರದೇಶದಲ್ಲಿ ಚೆನ್ನಾಗಿ ಮಳೆಯಾದರೆ ಭದ್ರಾ ಡ್ಯಾಂಗೆ ಪ್ರತಿ ದಿನ 50 – 60 ಸಾವಿರ ಕ್ಯೂಸೆಕ್ ನೀರು ಬರುತ್ತಿತ್ತು. ಈಗ ನೋಡಿದ್ರೆ ನಿತ್ಯ 7-8 ಸಾವಿರ ಕ್ಯೂಸೆಕ್ ನೀರು ಬರುತ್ತಿದೆ. ಇದರಲ್ಲಿ ಏನೋ ಇದೆ ಎಂಬ ಸಂಶಯ ರೈತರಲ್ಲಿ ಬರುತ್ತಿದೆ.  

– ಬಿ.ಎಂ.ಸತೀಶ್ ಕೊಳೇನಹಳ್ಳಿ, ದಾವಣಗೆರೆ.

error: Content is protected !!