ಬೆಂಗಳೂರು, ಜ.5 – ವೀರಶೈವ ಲಿಂಗಾಯತ ಸಮುದಾಯಕ್ಕೆ 2ಡಿ ಎಂಬ ಹೊಸ ವರ್ಗ ರೂಪಿಸಿ, ಮೀಸಲಾತಿ ಕಲ್ಪಿಸುವುದಾಗಿ ರಾಜ್ಯ ಬಿಜೆಪಿ ಸರ್ಕಾರ ತೆಗೆದುಕೊಂಡಿರುವ ನಿರ್ಧಾರವನ್ನು ತಿರಸ್ಕರಿಸಿರುವುದಾಗಿ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಸಮುದಾಯದ ಮುಖಂಡರ ಜೊತೆ ಸಭೆ ನಡೆಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿ ರುವ ಅವರು, 2ಎ ಮೀಸಲಾತಿ ಕಲ್ಪಿಸುವ ಬಗ್ಗೆ 24 ಗಂಟೆಗಳೊಳಗೆ ಮುಖ್ಯಮಂತ್ರಿ ಬೊಮ್ಮಾಯಿ ಸ್ಪಷ್ಟನೆ ನೀಡಬೇಕು. ಇಲ್ಲವಾದರೆ ಹೋರಾಟ ನಡೆಸ ಲಾಗುವುದು ಎಂದು ಹೇಳಿದರು.
ಬೊಮ್ಮಾಯಿ ಮಾತಿಗೆ ಗೌರವ ಕೊಟ್ಟು ಹೋರಾಟವನ್ನು ತಾತ್ಕಾಲಿಕ ಸ್ಥಗಿತ ಮಾಡಿದ್ದೆವು. ಜನವರಿ 12 ರೊಳಗೆ ಗೆಜೆಟ್ ಅಧಿಸೂಚನೆ ಹೊರಡಿಸಬೇಕು. ಇಲ್ಲ ವಾದರೆ, ಜ. 13 ರಂದು ಶಿಗ್ಗಾಂವಿ ಯಲ್ಲಿ 30 ಸಾವಿರ ಜನ ಸೇರಿಸಿ ಹೋರಾಟ ಮಾಡುತ್ತೇವೆ. ಈ ಜನ ಶಕ್ತಿಯೇ 2023ರ ಚುನಾವಣೆಯಲ್ಲಿ ಗಂಭೀರವಾದ ಪರಿಣಾಮ ಬೀರಲಿದೆ ಎಂದು ಹೇಳಿದರು. ಮೀಸಲಾತಿ ಕೊಡಲಾಗುವುದೋ ಇಲ್ಲವೋ ಅಂತ ಸ್ಪಷ್ಟಪಡಿಸಬೇಕು. 2ಎಗೆ ಸರಿ ಸಮಾನವಾದ ಶಿಕ್ಷಣ, ಉದ್ಯೋಗದಲ್ಲಿ ಮತ್ತೊಂದು ಗ್ರೂಪ್ ಮಾಡಿ ಮೀಸಲಾತಿ ಕೊಡುತ್ತೇವೆ ಎಂದು ತಿಳಿಸಲಾಗಿತ್ತು. ಎಲ್ಲವೂ ಗೊಂದಲ ಇರೋ ಕಾರಣ ಸಂಪುಟ ಸಭೆ ನಿರ್ಣಯವನ್ನು ತಿರಸ್ಕಾರ ಮಾಡುತ್ತಿದ್ದೇವೆ ಎಂದು ಸ್ವಾಮೀಜಿ ಹೇಳಿದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಬೊಮ್ಮಾಯಿ, ಕಾನೂನು ಹಾಗೂ ಸಂವಿಧಾನದ ಚೌಕಟ್ಟಿನಲ್ಲಿ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಮೀಸಲಾತಿ ಬಗ್ಗೆ ನನಗೆ ಬದ್ಧತೆ ಇದೆ ಎಂದಿದ್ದಾರೆ. ಈಗಾಗಲೇ ಒಂದು ಹಂತದ ನಿರ್ಧಾರ ತೆಗೆದುಕೊಂಡು ಸರಿಯಾದ ದಿಕ್ಕಿನಲ್ಲಿ ಹೆಜ್ಜೆ ಇಟ್ಟಿದ್ದೇವೆ. ಅಂತಿಮ ವರದಿ ಬಂದ ನಂತರ ಪಂಚಮಸಾಲಿ ಸೇರಿದಂತೆ ಇತರೆ ಸಮುದಾಯಗಳಿಗೂ ನ್ಯಾಯ ಸಿಗಲಿದೆ ಎಂದು ಹೇಳಿದರು.