ಕರ್ನಾಟಕ ಮುಕ್ತ ವಿವಿ ಪರೀಕ್ಷಾಂಗ ಕುಲಸಚಿವ ಡಾ. ಹೆಚ್.ವಿಶ್ವನಾಥ್ ಅವರ ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಶ್ರೀ ಬಸವ ಪ್ರಭು ಸ್ವಾಮೀಜಿ ಅಭಿಮತ
ದಾವಣಗೆರೆ, ಜು. 7- ಶಿಕ್ಷಣ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಾ ಬಂದಿರುವ ಕರ್ನಾಟಕ ಮುಕ್ತ ವಿವಿ ಪರೀಕ್ಷಾಂಗ ಕುಲಸಚಿವ ಡಾ. ಹೆಚ್.ವಿಶ್ವನಾಥ್ ಅವರು ಎಲ್ಲರ ಆಶಯದಂತೆ ರಾಜಕೀಯ ರಂಗ ಪ್ರವೇಶ ಮಾಡುವ ಮೂಲಕ ರಾಜ್ಯಪಾಲರು, ರಾಷ್ಟ್ರಪತಿಗಳಂತಹ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸುವಂತಾಗಲಿ ಎಂದು ಚಿತ್ರದುರ್ಗ ಬೃಹನ್ಮಠದ ಉಸ್ತುವಾರಿ ಶ್ರೀ ಬಸವಪ್ರಭು ಸ್ವಾಮೀಜಿ ಶುಭ ಹಾರೈಸಿದರು.
ನಗರದ ಆರ್.ಹೆಚ್. ಧರ್ಮಶಾಲೆಯ ಸುನಂದ ರಂಗಮಂಟಪದಲ್ಲಿ ಮಾಜಿ ಸಚಿವ ಹೆಚ್.ಆಂಜನೇಯ ಹಾಗೂ ಡಾ.ಹೆಚ್. ವಿಶ್ವನಾಥ ಅಭಿಮಾನಿಗಳು ಏರ್ಪಡಿಸಿದ್ದ ಕರ್ನಾಟಕ ರಾಜ್ಯ ಮುಕ್ತ ವಿವಿ ಪರೀಕ್ಷಾಂಗ ಕುಲಸಚಿವರೂ, ಚಿಂತಕರೂ ಆದ ಡಾ. ಹೆಚ್. ವಿಶ್ವನಾಥ ಅವರ ಜನ್ಮ ದಿನಾಚರಣೆ ಹಾಗೂ ಪುಸ್ತಕ ಬಿಡುಗಡೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಕೇವಲ ಹಣ, ಆಸ್ತಿ ಗಳಿಸಿದವ ರಾಜನಾಗಲಾರ, ಬದಲಾಗಿ ಜ್ಞಾನ ಸಂಪಾದನೆ ಮಾಡಿದವ ಜಗತ್ತಿಗೆ ರಾಜನಾಗಬಲ್ಲ. ಬದುಕಿಗೆ ಜ್ಞಾನ ಸಂಪಾದನೆ ಬಹುಮುಖ್ಯ ಎಂದರು.
ಡಾ. ವಿಶ್ವನಾಥ್ ಅವರು ಒಂಭತ್ತು ಪದವಿಗಳನ್ನು ಪಡೆದಿರುವುದಲ್ಲದೇ, ಎಲ್ಲರ ವಿಶ್ವಾಸ ಗಳಿಸುವ ಪ್ರಯತ್ನ ಮಾಡಿದ್ದಾರೆ. ಅವರಲ್ಲೂ ಒಬ್ಬ ಅಂಬೇಡ್ಕರ್ ಅವರನ್ನು ಕಾಣಬಹುದು. ಶೋಷಿತರ, ದಮನಿತರ ಧ್ವನಿಯಾಗಿದ್ದಾರೆ ಎಂದು ಶ್ರೀಗಳು ಶ್ಲ್ಯಾಘಿಸಿದರು.
ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ, ಮನುಷ್ಯನಿಗೆ ಪ್ರಾಮಾಣಿಕ ಪ್ರಯತ್ನ, ನಿರ್ದಿಷ್ಟ ಗುರಿ, ಛಲ ಇದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯವಿದೆ. ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡು ಅವರ ಆಶೋತ್ತರಗಳಿಗೆ ಸ್ಪಂದಿಸಿದರೆ ಜನ ನಾಯಕನಾಗಿ ಬೆಳೆಯಲು ಸಾಧ್ಯ ಎಂದರು.
ವ್ಯಕ್ತಿಗೆ ಹೃದಯವಂತಿಕೆ ಮುಖ್ಯ. ನಾನೂ ಸಹ ಸಾಮಾಜಿಕ ಮತ್ತು ರಾಜಕೀಯ ಜೀವನದಲ್ಲಿ ಮುಂದೆ ಬರಲು ಗಾಂಧಿನಗರದ ಜನತೆಯೇ ಕಾರಣ. ಗಾಂಧಿನಗ ರದ ಜನ ಜೀವ ಕೊಟ್ಟರೆ, ಮಾಯಕೊಂಡ ಕ್ಷೇತ್ರದ ಜನತೆ ಸಂಸ್ಕಾರ ಮತ್ತು ಅಧಿಕಾರ ನೀಡಿ ನನ್ನನ್ನು ಕೈ ಹಿಡಿದಿ ದ್ದಾರೆ ಎಂದು ಅಭಿಮಾನಪೂರ್ವಕವಾಗಿ ನುಡಿದರು.
ಗಾಂಧಿನಗರದ ಯುವಜನತೆ ಓದಿನ ಕಡೆ ಹೆಚ್ಚು ಗಮನಹರಿಸಬೇಕು. ವಿದ್ಯಾವಂತರಾದರೆ ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಿದೆ. ಕೇವಲ ಕೆಲಸ ಬೇಕೆಂದು ಓದುವುದು ಬೇಡ, ವಿಚಾರವಂತರಾಗಲು ಓದು, ಬಹು ಮುಖ್ಯ. ದುಗ್ಗಪ್ಪ, ಹೆಚ್.ಆಂಜನೇಯ, ಡಾ. ವಿಶ್ವನಾಥ್ ಮತ್ತು ನಾನು ಸೇರಿದಂತೆ ಅನೇಕರು ಸಮಾಜ ಸೇವೆ, ರಾಜಕೀಯ ರಂಗ, ಶಿಕ್ಷಣ ಕ್ಷೇತ್ರದಲ್ಲಿ ಹೆಸರು ಮಾಡಿರುವುದನ್ನು ಮತ್ತು ಮಾಡುತ್ತಿರುವುದನ್ನು ಸ್ಮರಿಸಿಕೊಂಡರು.
ಯಾವಾಗಲೂ ತುಳಿದು ಬದುಕುವುದನ್ನು ಬಿಟ್ಟು ತಿಳಿದು ಬದಕಬೇಕು. ವ್ಯಕ್ತಿತ್ವಕ್ಕೆ ಬೆಲೆ ಕೊಟ್ಟು ಮೇಲೆತ್ತುವ ಕೆಲಸ ಮಾಡಬೇಕೇ ಹೊರತು, ಕಾಲೆಳೆಯುವ ಕೆಲಸವನ್ನು ಯಾರೂ ಮಾಡಬಾರದು. ಓದನ್ನು ಅಳವಡಿಸಿಕೊಂಡರೆ ಜೀವನ ಸಾರ್ಥಕವಾಗುತ್ತದೆ. ವಿಶ್ವನಾಥ್ ಅವರ ಶಿಕ್ಷಣ ಕ್ಷೇತ್ರದ ಸಾಧನೆ ಎಲ್ಲರಿಗೂ ಮಾದರಿಯಾಗಿದೆ. ಇನ್ನೂ ನೂರಾರು ವಿಶ್ವನಾಥ್ ಹುಟ್ಟಿ ಬರಲಿ ಎಂದು ಶುಭ ಹಾರೈಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇ.ಎಂ. ಮಂಜುನಾಥ ಮಾತನಾಡಿ, ನಾವು ಪಡೆದಿರುವ ವಿದ್ಯೆಯೇ ನಮ್ಮನ್ನು ಗೌರವಕ್ಕೆ ಪಾತ್ರರಾಗುವಂತೆ ಮಾಡುತ್ತದೆ. ವಿಶ್ವನಾಥ್ ಅವರು ನಿರಂತರ ಅಧ್ಯಯನ ಶೀಲರು, ಇನ್ನೂ ಓದಿ ಸಾಧನೆ ಮಾಡಬೇಕೆಂಬ ತುಡಿತ, ಹಂಬಲ ಇರುವುದರಿಂದಲೇ ಕರ್ನಾಟಕ ಮುಕ್ತ ವಿವಿ ಪರೀಕ್ಷಾಂಗ ಕುಲಸಚಿವರಾಗಲು ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಮಾತನಾಡಿ, ವಿಶ್ವನಾಥ ಅವರು ಅನೇಕ ಸಾಹಿತ್ಯ ಕೃತಿಗಳನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಅಪ್ರತಿಮ ಕೊಡುಗೆ ನೀಡಿದ್ದಾರೆ. ಜನಮುಖಿ, ಜನಪರ ಕಾರ್ಯಗಳನ್ನು ಮಾಡುತ್ತಾ ಬಂದಿರುವ ಅವರಿಗೆ ಶಿಕ್ಷಣ ಕ್ಷೇತ್ರದಲ್ಲಿ ಉನ್ನತ ಹುದ್ದೆಗಳು ಲಭಿಸಲಿ ಎಂದ ಅವರು, ಉಪಕುಲಪತಿಯಾಗುವ ಯೋಗ ಕೂಡ ಒಲಿದು ಬರಲಿ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಮಾತನಾಡಿ, ಕಷ್ಟಪಟ್ಟು ಜೀವನದಲ್ಲಿ ಮುಂದೆ ಬಂದಿರುವ ವಿಶ್ವನಾಥ ಯುವ ಜನಾಂಗಕ್ಕೆ ಮಾದರಿ. ಯುವಕರು ಅವರ ಮಾರ್ಗ ದರ್ಶನದಲ್ಲಿ ಮುನ್ನಡೆಯುವಂತಾಗಲಿ ಎಂದು ಹೇಳಿದರು.
ಹಿರಿಯ ಸಾಹಿತಿ ಹಳೇಬೀಡು ರಾಮಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಹೆಚ್. ವಿಶ್ವನಾಥ್ ಬಾಬೂ ಜಗಜೀವನರಾಂ ಅವರ ಕುರಿತು ಮಾತನಾಡಿದರು. ಶ್ರೀಮತಿ ಶೈಲಜಾ ವಿಶ್ವನಾಥ್, ಪಾಲಿಕೆ ಮಾಜಿ ಸದಸ್ಯ ಎಸ್.ಮಲ್ಲಿಕಾರ್ಜುನ್, ಗುರುನಾಥ್ ಮತ್ತಿತರರು ಉಪಸ್ಥಿತರಿದ್ದರು.
ಇದೇ ವೇಳೆ ಡಾ. ವಿಶ್ವನಾಥ್ ರಚಿಸಿರುವ `ನವಭಾರತ ನಿರ್ಮಾಪಕ ಡಾ.ಬಾಬು ಜಗಜೀವನರಾಂ’ ಹಾಗೂ `ಸಾಹಿತ್ಯಾನುಭವ’ ಕೃತಿಗಳು ಲೋಕಾರ್ಪಣೆ ಗೊಂಡವು. ಬಸವ ಕಲಾ ಲೋಕದ ಕಲಾವಿದರು ಪ್ರಾರ್ಥಿಸಿದರು. ಪಿ.ಕೆ. ಖಾದರ್ ನಿರೂಪಿಸಿದರು. ಎಸ್. ಮಲ್ಲಿಕಾರ್ಜುನ್ ಸ್ವಾಗತಿಸಿದರು. ಅಭಿಮಾನಿ ಬಳಗದ ಜೆ. ಈಶ್ವರ್ ಸಿಂಗ್ ಕವಿತಾಳ ಮತ್ತು ಇತರರು ಉಪಸ್ಥಿತರಿದ್ದರು.