9ನೇ ತರಗತಿ ಪಠ್ಯದ ಬಸವಣ್ಣ ಪಾಠದಲ್ಲಿ ಬದಲಾವಣೆ ಬೇಡ

9ನೇ ತರಗತಿ ಪಠ್ಯದ ಬಸವಣ್ಣ ಪಾಠದಲ್ಲಿ ಬದಲಾವಣೆ ಬೇಡ

ಸಾಣೇಹಳ್ಳಿಯಲ್ಲಿ ಬಸವ ಪರಂಪರೆಯ ಮಠಾಧೀಶರ ಆಗ್ರಹ- ಮುಖ್ಯಮಂತ್ರಿಗಳಿಗೆ ಪತ್ರ

ಸಾಣೇಹಳ್ಳಿ, ಜು.5- 9ನೇ ತರಗತಿಯ `ಸಮಾಜ ವಿಜ್ಞಾನ’ ಭಾಗ-1 ಪಠ್ಯದಲ್ಲಿ `ವಿಶ್ವಗುರು ಬಸವಣ್ಣನವರು – ಸಾಂಸ್ಕೃತಿಕ ನಾಯಕ’ ಎಂಬ ಶೀರ್ಷಿಕೆಯ ಅಡಿಯಲ್ಲಿರುವ ಪಾಠದಲ್ಲಿ ಯಾವುದೇ ಬದಲಾವಣೆ ಮಾಡದಿರುವಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ  ಬಸವ ಪರಂಪರೆಯ ಮಠಾ ಧೀಶರು ಮುಖ್ಯಮಂತ್ರಿಗಳನ್ನು ಒತ್ತಾಯಿಸಿರುವು ದಾಗಿ ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಸಾಣೇಹಳ್ಳಿಯಲ್ಲಿ ನಿನ್ನೆ ಮುಕ್ತಾಯಗೊಂಡ `ವಚನ ಕಮ್ಮಟ’ದಲ್ಲಿ 70ಕ್ಕೂ ಹೆಚ್ಚು ಬಸವ ಪರಂಪರೆಯ ಮಠಾಧೀಶರು ಈ ಒತ್ತಾಯ ಮಾಡಿದರು.

ಸರ್ಕಾರ ಪಠ್ಯ ರಚನಾ ಸಮಿತಿ ಪರಿಷ್ಕಾರ ಮಾಡಿರುವ ಮೇಲ್ಕಂಡ ಪಠ್ಯದ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು. ಹಿಂದಿನ ಸರ್ಕಾರದ ಪಠ್ಯ ರಚನಾ ಸಮಿತಿ ಬಸವೇಶ್ವರರ ಬಗ್ಗೆ ಮಾಡಿರುವ ದೋಷಗಳ ಬಗ್ಗೆ ಮಠಾಧೀಶರೆಲ್ಲ ಸೇರಿ ಮಾಧ್ಯಮಗಳ ಮೂಲಕ ಪ್ರತಿಭಟಿಸಿ, ಸರ್ಕಾರದ ಗಮನಕ್ಕೂ ತಂದು ಪಠ್ಯದಲ್ಲಿ ಸತ್ಯ ಸಂಗತಿಗಳನ್ನು ವಿದ್ಯಾರ್ಥಿಗಳಿಗೆ ಕೊಡಲು ಒತ್ತಾಯಿಸಿದ್ದೆವು. ಆಗ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಿ ಪರಿಷ್ಕರಿಸುವುದಾಗಿ ತಿಳಿಸಿತ್ತು. 

2024ರಲ್ಲಿ 9ನೇಯ ತರಗತಿಯ `ಸಮಾಜ ವಿಜ್ಞಾನ’ ಭಾಗ – 1 ರಲ್ಲಿ `ವಿಶ್ವಗುರು ಬಸವಣ್ಣನವರು – ಸಾಂಸ್ಕೃತಿಕ ನಾಯಕ’ ಎನ್ನುವ ಪಠ್ಯವಿದ್ದು, ಇದು ಬಸವಣ್ಣನವರಿಗೆ ನ್ಯಾಯ ಒದಗಿಸುವಂತಿದೆ. ಇದರಲ್ಲಿ ಬಸವಣ್ಣನವರು ಮತ್ತು ಅವರ ಕ್ರಾಂತಿಯ ಕುರಿತಂತೆ ವಾಸ್ತವ ಅಂಶಗಳಿವೆ. ಈ ಪಠ್ಯದಲ್ಲಿ `ವೀರಶೈವ’ ಶಬ್ದ ಇಲ್ಲವೆಂದು `ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ’ಯವರು ತಕರಾರು ಮಾಡಿರುವುದಕ್ಕೆ ಐತಿಹಾಸಿಕ ಆಧಾರವಿಲ್ಲ. 

ವರ್ಗ, ವರ್ಣ, ಲಿಂಗ ಭೇದಗಳನ್ನು ಅಳಿಸಿ `ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ’ ಚಲನಶೀಲ ವ್ಯವಸ್ಥೆಯನ್ನು ನಿರ್ಮಿಸಲು ಬಸವಣ್ಣನವರು 900 ವರ್ಷಗಳ ಹಿಂದೆ ಕ್ರಾಂತಿ ಮಾಡಿದ್ದು ಜಗತ್ತಿನ ಇತಿಹಾಸದಲ್ಲೇ ದಾಖಲಾಗಿದೆ. ಲಿಂಗ ತತ್ವದ ಮೂಲಕವೇ ಲಿಂಗಾಯತ ಧರ್ಮವನ್ನು ಸ್ಥಾಪಿಸಿದ ಬಸವಣ್ಣನವರು ಶ್ರಮಿಕ ವರ್ಗದ ಎಲ್ಲ ಕಾಯಕಜೀವಿಗಳನ್ನು ಒಗ್ಗೂಡಿಸಿ ಸ್ವಾತಂತ್ರ್ಯ, ಸಮಾನತೆ, ಸಹೋದರತೆ ಮತ್ತು ನ್ಯಾಯ ಎಂಬ ಸಮಾಜವಾದಿ ಪರಿಕಲ್ಪನೆಗಳ ಹಿನ್ನೆಲೆಯಲ್ಲಿ ಹೊಸ ಸಮಾಜವನ್ನು ನಿರ್ಮಿಸಿದ್ದು ವಚನಗಳಲ್ಲೇ ಸ್ಪಷ್ಟವಾಗಿ ಉಲ್ಲೇಖವಾಗಿದೆ.

ಇಂಥ ಐತಿಹಾಸಿಕ ಕ್ರಾಂತಿ ಪುರುಷ ಬಸವಣ್ಣನವರನ್ನು ವಿಶ್ವಗುರು ಎಂದು ಜಗತ್ತೇ ಗೌರವಿಸುತ್ತಿದೆ. ಅವರ ಕ್ರಾಂತಿಯ ಸ್ಮರಣೆ ಮತ್ತು ನವಸಮಾಜ ನಿರ್ಮಾಣದ ಪರಿಕಲ್ಪನೆಯನ್ನು ವರ್ತಮಾನದಲ್ಲೂ ಜಾರಿಗೆ ತರುವ ಉದ್ದೇಶದಿಂದ ತಮ್ಮ ಸರ್ಕಾರವು ಬಸವಣ್ಣನವರನ್ನು `ಸಾಂಸ್ಕೃತಿಕ ನಾಯಕ’ ಎಂದು ಘೋಷಿಸಿದ್ದು ಸ್ವಾಗತಾರ್ಹ.

ಪ್ರಸ್ತುತ ಪಠ್ಯದಲ್ಲಿ ಯಾವ ಕಾರಣಕ್ಕೂ `ವೀರಶೈವ’ ಪದ ಸೇರಬಾರದು. ಹಾಗೆ ಸೇರಿದರೆ ಅದು ಬಸವಣ್ಣನವರ ತತ್ವಗಳಿಗೆ ಮಸಿ ಬಳಿದು, ಸತ್ಯಕ್ಕೆ ಅಪಚಾರ ಮಾಡಿದಂತೆ. ಹಾಗಾಗಿ ಪ್ರಸ್ತುತ ಪಠ್ಯವನ್ನೇ ಮುಂದುವರಿಸಲು ಬಸವ ಪರಂಪರೆಯ ಮಠಾಧೀಶರೆಲ್ಲರೂ ಹಕ್ಕೊತ್ತಾಯ ಮಾಡುತ್ತಿದ್ದೇವೆ. ಬಸವಣ್ಣನವರನ್ನು ಲಿಂಗಾಯತ ಧರ್ಮದ ಧರ್ಮಗುರು ಎಂದು ಐತಿಹಾಸಿಕ ಆಧಾರಗಳು ಖಚಿತವಾಗಿ ಹೇಳುತ್ತಿರುವಾಗ, ಆ ಸತ್ಯವನ್ನು ಮರೆಮಾಚಿ ಸುಳ್ಳನ್ನು ಪಠ್ಯಗಳಲ್ಲಿ ಸೇರ್ಪಡಿಸುವುದು ಸುಸಂಬದ್ಧವಲ್ಲ. ನಾಡಿನ ಶರಣ ಕ್ರಾಂತಿಯ ಇತಿಹಾಸವನ್ನು ಆಳವಾಗಿ ಅರಿತಿರುವ ಮುಖ್ಯಮಂತ್ತಿ ಸಿದ್ದರಾಮಯ್ಯನವರು  ಸುಳ್ಳು ವದಂತಿಗಳಿಗೆ ಮಾನ್ಯತೆ ಮಾಡದೆ, ಯಾರ ಒತ್ತಾಯಕ್ಕೂ ಮಣಿಯದೇ ಈಗಿರುವ ಪಠ್ಯವನ್ನೇ ಮುಂದುವರಿಸಬೇಕೆಂದು  ವಚನ ಕಮ್ಮಟದಲ್ಲಿ ಪಾಲ್ಗೊಂಡಿರುವ ವಿವಿಧ ಮಠಾಧೀಶರು ಮುಖ್ಯಮಂತ್ರಿಗಳಿಗೆ  ಬರೆದಿರುವ ಪತ್ರಕ್ಕೆ ಸಹಿ ಮಾಡಿ, ಒತ್ತಾಯಿಸಿರುವುದಾಗಿ   ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

error: Content is protected !!