ಮಹಿಳೆಗೆ ಶಿಕ್ಷಣದ ಜೊತೆ ಆರ್ಥಿಕ ಸ್ವಾತಂತ್ರ್ಯವೂ ಮುಖ್ಯ

ಮಹಿಳೆಗೆ ಶಿಕ್ಷಣದ ಜೊತೆ ಆರ್ಥಿಕ ಸ್ವಾತಂತ್ರ್ಯವೂ ಮುಖ್ಯ

ಎ.ವಿ.ಕೆ. ಕಾಲೇಜು ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ಸಮಾರಂಭದಲ್ಲಿ ಎಸ್ಪಿ ಉಮಾ ಪ್ರಶಾಂತ್

ದಾವಣಗೆರೆ, ಜ.4- ಮಹಿಳೆಯರಿಗೆ ಶಿಕ್ಷಣದ ಜೊತೆ ಆರ್ಥಿಕ ಸ್ವಾತಂತ್ರ್ಯವೂ ಮುಖ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹೇಳಿದರು.

ನಗರದ ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿನಿಯರು ಉದ್ಯೋಗ ಪಡೆದರೆ ಆರ್ಥಿಕ ಸ್ವಾತಂತ್ರ್ಯ ಲಭಿಸುತ್ತದೆ. ಆಗ ಜೀವನದಲ್ಲಿ ಯಾರ ಮೇಲೂ ಅವಲಂಬಿತರಾಗದೆ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕಾಲೇಜು ಪಠ್ಯದ ಜೊತೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನೂ ಎದುರಿಸುವ ಬಗ್ಗೆ ತಿಳಿಯಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ ಅವರು,  ಕಾಲೇಜುಗಳಲ್ಲೂ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಬಗ್ಗೆ ವಿಶೇಷ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಬೇಕು ಎಂದರು.

ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿ ಮಹಿಳೆಯರು ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ ಅದು ನಗರಮಟ್ಟಕ್ಕೆ ಮಾತ್ರ ಸೀಮಿತವಾಗುತ್ತಿದೆ. ಗ್ರಾಮೀಣ ಮಟ್ಟದಲ್ಲಿ ಅನೇಕ ಕಾರಣಗಳಿಂದಾಗಿ ಮಹಿಳೆಯರು ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ನಿಮ್ಮ ಭವಿಷ್ಯ ಉಜ್ವಲವಾಗಿರಲಿ ಎಂಬ ಕಾರಣಕ್ಕಾಗಿ ಪೋಷಕರು ನಿಮಗೆ ಶಿಕ್ಷಣ ಕೊಡುತ್ತಾರೆ. ಅದರ ಮಹತ್ವ ಅರಿತು ಕಠಿಣ ಪರಿಶ್ರಮದಿಂದ ಪದವಿ ಪಡೆಯಿರಿ. ಪ್ರೀತಿ-ಪ್ರೇಮಕ್ಕೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳದಿರಿ. ಉತ್ತಮ ಮಾಹಿತಿ ತಿಳಿಯಲು ಮಾತ್ರ ಮೊಬೈಲ್ ಬಳಕೆ ಮಾಡಿರಿ ಎಂದು ಕಿವಿ ಮಾತು ಹೇಳಿದರು.

ಸಾಮಾಜಿಕ ಜಾಲ ತಾಣಗಳಲ್ಲಿ ಖಾಸಗಿ ಫೋಟೋ, ಮಾಹಿತಿ ಹಂಚಿಕೊಳ್ಳುವಾಗ ಎಚ್ಚರಿಕೆ ವಹಿಸುವಂತೆ ಹೇಳಿದ ಎಸ್ಪಿ, ನಿಮ್ಮ ಹಕ್ಕುಗಳು, ಕಾನೂನು ಹಾಗೂ ಸರ್ಕಾರದಿಂದ ದೊರೆಯಬೇಕಾದ ಸವಲತ್ತುಗಳ ಬಗ್ಗೆ ಉಪನ್ಯಾಸಕರಿಂದ ಕೇಳಿ ತಿಳಿಯಿರಿ ಎಂದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ. ರಾಘವನ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಎವಿಕೆ ಮಹಿಳಾ ಕಾಲೇಜು ಪ್ರಾಂಶುಪಾಲರಾದ ಪ್ರೊ. ಕಮಲಾ ಸೊಪ್ಪಿನ್ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಚಾಲಕ ಆರ್.ಆರ್. ಶಿವಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕ್ರೀಡಾ ಸಮಿತಿ ಸಂಯೋಜಕ ಆರ್.ಚನ್ನಬಸವನಗೌಡ, ಅಧ್ಯಾಪಕರ ಸಂಘದ ಕಾರ್ಯದರ್ಶಿ ಪ್ರಭಾವತಿ ಎಸ್.ಹೊರಡಿ, ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ.ರಣಧೀರ, ಸಾಂಸ್ಕೃತಿಕ ವೇದಿಕೆ ಸಂಯೋಜಕಿ ಡಾ.ಕವಿತ ಆರ್.ಜಿ., ಪೊಲೀಸ್ ಅಧಿಕಾರಿ ಸೌಮ್ಯ, ವಿದ್ಯಾರ್ಥಿ ಸಂಘದ ಕಾರ್ಯದರ್ಶಿಗಳಾದ ಕೆ.ಎಂ. ಲಕ್ಷ್ಮಿ, ನೂರ್ ಫಾತಿಮಾ, ನಿಸರ್ಗ ಕೆ ಉಪಸ್ಥಿತರಿದ್ದರು.

ಸಹನಾ ಎಂ. ಮತ್ತು ಸಂಗಡಿಗರು ಪ್ರಾರ್ಥಿಸಿದರು. ರಕ್ಷಾ ವಿ.ಆನಂದ ಸ್ವಾಗತಿಸಿದರು. ಸಹನಾ ಸಾವಳಗಿ, ಲಕ್ಷ್ಮಿ ಕೆ.ಎಂ. ನಿರೂಪಿಸಿದರು.

ಬಿ.ಇಂದ್ರಮ್ಮ, ಎಂ.ಪಿ. ರೇಖಾ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಕಾವ್ಯಶ್ರೀ ಡಿ.ಎಂ. ವಂದಿಸಿದರು.

error: Content is protected !!