ಆಹಾರ ವಲಯದಲ್ಲಿವೆ ಅವಕಾಶ

ಆಹಾರ ವಲಯದಲ್ಲಿವೆ ಅವಕಾಶ

ಆಸಕ್ತಿ ಬೆಳೆಸಿಕೊಳ್ಳುವಂತೆ ಸಂಪನ್ನ ಮುತಾಲಿಕ್ ಕರೆ

ದಾವಣಗೆರೆ, ಜು.3- ಸ್ವಾವಲಂಬಿ ಜೀವನ ಸಾಗಿಸಲು ಆಹಾರ ವಲಯದಲ್ಲಿ ಅಪಾರ ಅವಕಾಶಗ ಳದ್ದು,  ವಿದ್ಯಾರ್ಥಿಗಳು ಸದ್ಭಳಕೆ ಮಾಡಿಕೊಳ್ಳುವಂತೆ ಬಾಪೂಜಿ ವಿದ್ಯಾಸಂಸ್ಥೆ ಹಾಗೂ ಕಾಲೇಜು ಆಡಳಿತ ಮಂಡಳಿ ಸದಸ್ಯ ಸಂಪನ್ನ ಮುತಾಲಿಕ್ ಸಲಹೆ ನೀಡಿದರು.

ಎ.ಆರ್.ಜಿ.  ಕಲಾ ಮತ್ತು ವಾಣಿಜ್ಯ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದ ಸಾಂಸ್ಕೃತಿಕ ವೇದಿಕೆ, ರಾಷ್ಟ್ರೀಯ ಸೇವಾ ಯೋಜನೆ, ಎನ್.ಸಿ.ಸಿ., ಯುವ ರೆಡ್‌ಕ್ರಾಸ್ ಘಟಕ ಹಾಗೂ ಕ್ರೀಡಾ ವಿಭಾಗದ ಸಂಯುಕ್ತಾಶ್ರಯದಲ್ಲಿ ಕಾಲೇಜು ಆವರಣದಲ್ಲಿ ಬುಧವಾರ `ಎ.ಆರ್.ಜಿ. ವೈಭವ 2024′ ಅಂಗವಾಗಿ  ಹಮ್ಮಿಕೊಳ್ಳಲಾಗಿದ್ದ ಆಹಾರ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ ಹಾವಳಿ ಯಿಂದಾಗಿ ಸಾಫ್ಟ್‌ವೇರ್ ವಲಯದಲ್ಲಿ ಉದ್ಯೋಗಾವಕಾಶಗಳು ಕಡಿತಗೊಂಡಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಡಿತಗೊಳ್ಳುವ ಸಂಭವವಿದೆ. ಆದರೆ ಆಹಾರ ವಲಯದಲ್ಲಿ ಮಾತ್ರ ಎಂದಿಗೂ ಉದ್ಯೋಗಾವಕಾಶಗಳು ಇರಲಿವೆ ಎಂದರು.

ಆಹಾರ ವಲಯವು ಉತ್ಪಾದನೆ, ಸಂಸ್ಕರಣೆ, ಶೇಖರಣೆ, ಮಾರುಕಟ್ಟೆ ಹೀಗೆ ಎಲ್ಲಾ ವಿಭಾಗಗಳನ್ನೂ ಒಳಗೊಂಡಿದೆ. ವಾಣಿಜ್ಯ ವಿಭಾಗದ ವಿದ್ಯಾರ್ಥಿ ಗಳಿಗೂ ಇಲ್ಲಿ ಅವಕಾಶಗಳು ದೊರೆಯುತ್ತವೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಆಹಾರ ವಲಯದತ್ತ ಆಸಕ್ತಿ ಬೆಳೆಸಿಕೊಳ್ಳುವಂತೆ ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಹಾನಗರ ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಫಾಸ್ಟ್‌ ಫುಡ್‌ಗಳ ಹಾವಳಿಯಿಂದ ಆರೋಗ್ಯದ ಮೇಲೆ ಹೆಚ್ಚು ಪರಿಣಾಮಗಳು ಉಂಟಾಗುತ್ತಿವೆ ದೇಶೀ ಆಹಾರದತ್ತ ಗಮನ ಹರಿಸಬೇಕು. ಹೆತ್ತವರು, ಅಧ್ಯಾಪಕರಿಗೆ ಗೌರವ ನೀಡಬೇಕು. ಮಾದಕ ವ್ಯಸನಗಳಿಂದ ದೂರ ಇರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಎ.ಆರ್.ಜಿ. ಕಲಾ ಮತ್ತು ವಾಣಿಜ್ಯ ಕಾಲೇಜು ಪ್ರಾಂಶುಪಾಲ ಡಾ.ಜಿ.ಬಿ. ಬೋರಯ್ಯ ಅಧ್ಯಕ್ಷತೆ ವಹಿಸಿದ್ದರು. ಪಿಯುಸಿ ಪ್ರಾಂಶುಪಾಲ ಬೊಮ್ಮಣ್ಣ ಉಪಸ್ಥಿತರಿದ್ದರು.  ವಿದ್ಯಾರ್ಥಿಗಳಾದ ಭರತ್ ಪಿ. ನಿರೂಪಿಸಿದರು. ದೊಡ್ಡೇಶ್ ಪ್ರಾರ್ಥಿಸಿದರು. ಅನ್ನಪೂರ್ಣ ಸ್ವಾಗತಿಸಿದರು. ಸಂಧ್ಯಾ ವಂದಿಸಿದರು.

error: Content is protected !!