ವಚನ ಸಾಹಿತ್ಯವೇ ಸಂಪತ್ತೆಂದು ಬದುಕಿದ ಫ.ಗು ಹಳಕಟ್ಟಿ

ವಚನ ಸಾಹಿತ್ಯವೇ ಸಂಪತ್ತೆಂದು ಬದುಕಿದ ಫ.ಗು ಹಳಕಟ್ಟಿ

ಸಾಣೇಹಳ್ಳಿಯಲ್ಲಿನ ವಚನ ಕಮ್ಮಟದಲ್ಲಿ ಸ್ಮರಿಸಿದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ 

ಸಾಣೇಹಳ್ಳಿ, ಜು. 3 –  ಸಾಹಿತಿ ಫ.ಗು. ಹಳಕಟ್ಟಿಯವರು ವಚನ ಸಾಹಿತ್ಯವೇ ಸಂಪತ್ತೆಂದು ಬದುಕಿದವರು.  ಅವರು ಅಧಿಕಾರಕ್ಕಾಗಿ   ಎಂದೂ  ಆಸೆಪಟ್ಟವರಲ್ಲ. ವಚನ ಸಾಹಿತ್ಯವನ್ನು ಉಳಿಸ ಬೇಕೆಂದು ಕನಸು ಕಂಡು, ಅದನ್ನು ನನಸು ಮಾಡಿದ ಮಹಾನ್ ವ್ಯಕ್ತಿ ಆಗಿದ್ದಾರೆ ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ  ಹೇಳಿದರು. 

ಇಲ್ಲಿನ ಶಾಮನೂರು ಶಿವಶಂಕರಪ್ಪ ಒಳಾಂಗಣ ರಂಗಮಂದಿರದಲ್ಲಿ ನಿನ್ನೆ ನಡೆದ ವಚನ  ಕಮ್ಮಟದ ಎರಡನೇಯ ದಿನದ ಕಾರ್ಯಕ್ರಮದ ಸಾನ್ನಿಧ್ಯ  ವಹಿಸಿ  ಶ್ರೀಗಳು ಮಾತನಾಡಿದರು.  

ಸಂಸ್ಕೃತಿ, ಸಾಹಿತ್ಯ, ಕಲೆ ಉಳಿಸಲಿಕ್ಕಾಗಿ ತಮ್ಮ ಪ್ರಾಣವನ್ನೇ ಪಣಕಿಟ್ಟವರನ್ನು ಸಮಾಜ ಬೇಗ ಮರೆತುಬಿಡುತ್ತೆ. ಆದರೆ  ಫ ಗು ಹಳಕಟ್ಟಿಯವರನ್ನು ಯಾರೂ ಮರೆಯಲಿಕ್ಕೆ ಸಾಧ್ಯವಿಲ್ಲ. 

ಹಿರಿಯ ತರಳಬಾಳು ಜಗದ್ಗುರು ಲಿಂ. ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿ ಗಳವರು ಹಳಕಟ್ಟಿಯವರನ್ನು ತುಂಬಾ ಸ್ಮರಿಸಿಕೊಳ್ಳುತ್ತಿದ್ದರು.   ಹಳಕಟ್ಟಿಯವರು ಇಲ್ಲದೇ ಇದ್ದರೆ ವಿಶ್ವ ಸಾಹಿತ್ಯದ ವಚನ ಜ್ಯೋತಿಯನ್ನು ಎಲ್ಲ ಕಡೆ ಬೆಳಗಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಪ್ರತಿ ಸಂದರ್ಭದಲ್ಲಿ  ಅವರು ಸ್ಮರಿಸಿಕೊಳ್ಳುತ್ತಿದ್ದರು  ಎಂದರು. 

ವಚನ ಸಾಹಿತ್ಯದ ಅಧ್ಯಯನ, ಪ್ರಕಟಣೆಗಾಗಿ ಇಡೀ ಜೀವನವನ್ನೇ  ಕರ್ಪೂರದಂತೆ, ಗಂಧದಂತೆ ಸವೆಸಿಕೊಂಡರು. ವಚನ ಸಾಹಿತ್ಯದ ಪ್ರಕಟಣೆಗೆ ಅನೇಕ ಸವಾಲುಗಳನ್ನು ಎದುರಿಸಿದರು. ಅದಕ್ಕೆ ಎದೆಗುಂದದೇ ಮನೆ- ಮಾರುಗಳನ್ನು ಮಾರಿ ತಾವೇ ವಚನ ಸಾಹಿತ್ಯವನ್ನು ಮುದ್ರಿಸಿ ಪ್ರಕಟಣೆ ಮಾಡಿದರು. 

ಬಿ.ಎಂ.ಶ್ರೀ ಅವರು  ಒಮ್ಮೆ ಬಿಜಾಪುರಕ್ಕೆ ಬಂದಾಗ ಅಲ್ಲಿ ಗೋಳಗುಮ್ಮಟ ನೋಡಲಿಕ್ಕೆ ಹೋಗಬೇಕು ಎಂದು ಹಲವರು ಹೇಳಿದಾಗ, `ಆ ಗೊಮ್ಮಟ ಅಲ್ಲ; ಬೇರೆ ಇನ್ನೊಂದು ಗೋಳಗುಮ್ಮಟ ಇದೆ. ಅದೇ ಫ. ಗು. ಹಳಕಟ್ಟಿ  ಎಂಬ ವಚನ ಗುಮ್ಮಟ.’ ಅದನ್ನು ನೋಡಲಿಕ್ಕೆ ಹೋಗೋಣ ಎನ್ನುತ್ತಾರಂತೆ, ಹಳಕಟ್ಟಿಯವರು ಅಪರೂಪದ ಸಾಹಿತ್ಯ ರಕ್ಷಣೆ ಮಾಡದೇ ಹೋಗಿದ್ದರೆ ವಚನ ಸಾಹಿತ್ಯ ಉಳಿಲಿಕ್ಕೆ ಸಾಧ್ಯವಿಲ್ಲ  ಎಂದು  ಬಿ.ಎಂ.ಶ್ರೀ ಹೇಳಿದ್ದರು ಎಂದು ಸ್ವಾಮೀಜಿ ಸ್ಮರಿಸಿದರು.

‘ಪಂಚಾಚಾರಗಳ’ ಕುರಿತಂತೆ ವೀರಣ್ಣ ರಾಜೂರು ಮಾತನಾಡಿ, ಹಳಕಟ್ಟಿಯವರು ವಚನ ಸಾಹಿತ್ಯವನ್ನು ಎಲ್ಲಾ ರೀತಿಯಲ್ಲಿ ಅಧ್ಯಯನ ಮಾಡಿದ್ದಾರೆ. ವಚನಗಳನ್ನು ತಾತ್ವಿಕ ಹಿನ್ನೆಲೆಯಲ್ಲಿ ಹೇಗೆ ಪ್ರಕಟಿಸಬೇಕೆಂದು ತೋರಿಸಿಕೊಟ್ಟು ಹೋಗಿದ್ದಾರೆ ಎಂದರು.

`ಕರ್ಮ ಸಿದ್ಧಾಂತ’ ಕುರಿತು ಬಸವ ಮರುಳಸಿದ್ಧ ಸ್ವಾಮೀಜಿ ಮಾತನಾಡಿ, ಕರ್ಮ ಸಿದ್ಧಾಂತ ನಮ್ಮೆಲ್ಲರ ಬದುಕಿನಲ್ಲಿ ಹಾಸು ಹೊಕ್ಕಾಗಿದೆ. ಕರ್ಮ ಸಿದ್ಧಾಂತ ಎಂದರೆ ಹೇಗೆ ನಡೆದುಕೊಳ್ಳುತ್ತೇವೋ ಅದನ್ನು ಪಡೆದುಕೊಳ್ಳುತ್ತೇವೆ. ಕರ್ಮ ಸಿದ್ಧಾಂತ ಒಂದೊಂದು ಧರ್ಮ ದೃಷ್ಟಿಯಲ್ಲಿ ಬೇರೆ ಬೇರೆ ವ್ಯಾಖ್ಯಾನ ಪಡೆದುಕೊಳ್ಳುತ್ತದೆ ಎಂದರು.

ಹಿಂದಿನ ಜನ್ಮದ ಪುಣ್ಯ, ಪಾಪಗಳು ಮುಕ್ತವಾಗ ಬೇಕು ಎನ್ನುವ ಕಾರಣಕ್ಕಾಗಿ ಕರ್ಮಠಗಳನ್ನು ಆಚರಣೆ ಮಾಡಬೇಕೆಂದು ವೈದಿಕರು ತಿಳಿಸಿದರು. ಕರ್ಮ ಎಂದರೆ ಉದ್ದೇಶ ಎಂದು ಬುದ್ಧ ವ್ಯಾಖ್ಯಾನ ಮಾಡುವರು.  ಶರಣರು ಕರ್ಮ ಸಿದ್ಧಾಂತವನ್ನು ಒಪ್ಪಿ ಕರ್ಮಠಗಳನ್ನು ತಿರಸ್ಕಾರ ಮಾಡುವರು. ಕರ್ಮ ಸಿದ್ಧಾಂತಗಳಲ್ಲಿ ಯಾವ್ಯಾವ ತತ್ವಗಳು ಇರಬೇಕೆಂದು ತಿಳಿಸಿದರು. 

ಕರ್ಮದಿಂದ ಮುಕ್ತವಾಗಲಿಕ್ಕೆ ಶರಣರು ಸರಳವಾದ ಮಾರ್ಗವನ್ನು ಹೇಳಿದರು. ಕರುಣೆ, ವಿನಯ, ಸಮತೆ, ಪಾದೋದಕ ಅಳವಡಿಸಿಕೊಂಡರೆ ಎಲ್ಲ ಕಷ್ಟಗಳಿಂದ ಮುಕ್ತವಾಗೋದಕ್ಕೆ ಸಾಧ್ಯ. ಶರಣ ಕರ್ಮ ಸಿದ್ಧಾಂತ ವೈದಿಕ ಕರ್ಮ ಸಿದ್ಧಾಂತಗಳಿಗಿಂತ ಭಿನ್ನವಾಗಿರುವಂಥದ್ದು ಎಂದರು. 

ಈ ಸಂದರ್ಭದಲ್ಲಿ ಪಂಡಿತಾರಾಧ್ಯ ಶಿವಾ ಚಾರ್ಯ ಸ್ವಾಮೀಜಿಯವರ ‘ಅರಿವಿನ ಪರಿಧಿ’ ಕೃತಿಯನ್ನು  ಲೋಕಾರ್ಪಣೆಗೊಳಿಸಲಾಯಿತು. ಈ ಕಾರ್ಯಕ್ರಮದಲ್ಲಿ ಬಸವರಾಜ ಸಾದರ ಸ್ವಾಗತಿಸಿ, ಕಾರ್ಯಕ್ರಮ ನಡೆಸಿಕೊಟ್ಟರು. ಶಿಬಿರದ ಸಂಚಾಲಕ ಮೋಟಗಿ ಮಠದ ಶ್ರೀ ಚೆನ್ನಬಸವ ಸ್ವಾಮೀಜಿ ಹಾಗೂ 70 ಜನ ಯುವ ಮಠಾಧೀಶರು ಹಾಗೂ ಮರಿ ದೇವರುಗಳು ಉಪಸ್ಥಿತರಿದ್ದರು.

ಜಡೆ ಸಂಸ್ಥಾನ ಮಠದ ಶ್ರೀ ಜಡೆ ಸ್ವಾಮೀಜಿ  ಶಿಬಿರಾರ್ಥಿಗಳಿಗೆ ಯೋಗಾಸನ ನಡೆಸಿಕೊಟ್ಟರು. ಶಿವಮೊಗ್ಗ ಬಸವ ಕೇಂದ್ರದ ಮರುಳಸಿದ್ಧ ಸ್ವಾಮೀಜಿ   ಸಾಮೂಹಿಕ ಇಷ್ಟಲಿಂಗ ಪೂಜೆ ನೆರವೇರಿಸಿದರು.

error: Content is protected !!