ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಬೆಸ ಸೆಮಿಸ್ಟರ್ ಪರೀಕ್ಷೆ ನಡೆಸಲು ಆಗ್ರಹ

ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಬೆಸ ಸೆಮಿಸ್ಟರ್ ಪರೀಕ್ಷೆ ನಡೆಸಲು ಆಗ್ರಹ

ನಗರದಲ್ಲಿ ಎಐಡಿಎಸ್ಓ ಪ್ರತಿಭಟನೆ

ದಾವಣಗೆರೆ, ಜು. 2-  ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಬೆಸ ಸೆಮಿಸ್ಟರ್ ಪರೀಕ್ಷೆ ನಡೆಸಲು ಆಗ್ರಹಿಸಿ ದಾವಣಗೆರೆ ವಿವಿ ಆಡಳಿತ ಕಚೇರಿ ಮುಂಭಾಗ ಎಐಡಿಎಸ್‌ಓ ಪ್ರತಿಭಟನೆ ನಡೆಸಿತು.

ಇದೇ ವೇಳೆ ಎಐಡಿಎಸ್ಓ ಜಿಲ್ಲಾ ಅಧ್ಯಕ್ಷ ಪೂಜಾ ನಂದಿಹಳ್ಳಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, 2023-24ನೇ ಸಾಲಿನಲ್ಲಿ ಮೂರನೇ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವ ಎನ್‌ಇಪಿ-2020ರ ಮೊದಲ ಬ್ಯಾಚಿನ ವಿದ್ಯಾರ್ಥಿಗಳಲ್ಲಿ ಅನೇಕರು ಹಿಂದಿನ ಸೆಮಿಸ್ಟರ್ ಪರೀಕ್ಷೆಗಳಲ್ಲಿ ಅನ್ನುತ್ತೀರ್ಣಗಿದ್ದಾರೆ. ಹಠಾತ್ತಾಗಿ ಜಾರಿಗೊಳಿಸಿದ ಎನ್‌ಇಪಿ-2020ನ್ನು ಎದುರಿಸಲು ಈ ವಿದ್ಯಾರ್ಥಿಗಳು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ ಎಂದರು.

1ನೇ ಸೆಮಿಸ್ಟರ್ ಪರೀಕ್ಷೆಯಲ್ಲೇ ಅಧಿಕ ಸಂಖ್ಯೆಯ ವಿದ್ಯಾರ್ಥಿಗಳು ಉತ್ತೀರ್ಣರಾಗಿಲ್ಲ. 1, 2 ಮತ್ತು 3ನೇ ಸೆಮಿಸ್ಟರ್‌ನಲ್ಲಿ ಅನುತ್ತೀರ್ಣಗೊಂಡ ವಿಷಯಗಳಿಗೆ ಒಮ್ಮೆಲೆ 4ನೇ ಸೆಮಿಸ್ಟರ್ ನಲ್ಲಿ ಅವಕಾಶ ನೀಡಲಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೀಗಾಗಿ ಅವರ ಒಟ್ಟು ಪದವಿ ಶಿಕ್ಷಣವೇ ಒತ್ತಡ ಮತ್ತು ಗೊಂದಲದಲ್ಲಿ ಕಳೆದಿದೆ. ಈಗ ಈ ವಿದ್ಯಾರ್ಥಿಗಳು ಅಂತಿಮ ಸೆಮಿಸ್ಟರ್ ಪರೀಕ್ಷೆ ಬರೆಯಲಿದ್ದಾರೆ. 1ನೇ ಸೆಮಿಸ್ಟರ್ ಮೊದಲುಗೊಂಡು ಬೆಸ ಸೆಮಿಸ್ಟರ್ ಪರೀಕ್ಷೆಗಳಲ್ಲಿ ಹಲವರು ಅನುತ್ತೀರ್ಣರಾಗಿದ್ದು, ವಿದ್ಯಾರ್ಥಿಗಳು ತೀವ್ರ ಆತಂಕದಲ್ಲಿದ್ದಾರೆ. ಅಂತಿಮ ವರ್ಷದಲ್ಲಿರುವ ಈ ವಿದ್ಯಾರ್ಥಿಗಳಲ್ಲಿ ಹಲವರು

ತಮ್ಮ ಮುಂದಿನ ಉನ್ನತ ವ್ಯಾಸಂಗಕ್ಕಾಗಿ ಎದುರು ನೋಡುತ್ತಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಬೆಸ ಸೆಮಿಸ್ಟರ್ ಪರೀಕ್ಷೆ ಬರೆಯಲು ಅವಕಾಶ ನೀಡಬೇಕೆಂದು ಅವರು ಈ ಸಂದರ್ಭದಲ್ಲಿ ಆಗ್ರಹಿಸಿದರು. ಈ ಬೇಡಿಕೆಯೊಳ ಗೊಂಡಂತೆ ಮರು ಮೌಲ್ಯಮಾಪನದಲ್ಲಿ ಬಂದಿದ್ದ ಅಂಕದಲ್ಲಾಗಿರುವ ದೋಷಗಳನ್ನು ಸರಿಪಡಿಸುವಂತೆ ಕುಲಪತಿಗಳಿಗೆ ಮನವಿ ಸಲ್ಲಿಸಲಾಯಿತು.

ಮನವಿ ಸ್ವೀಕರಿಸಿ ಮಾತನಾಡಿದ ಕುಲಪತಿಗಳು, ಮರು ಮೌಲ್ಯಮಾಪನದ ಅಂಕಗಳಲ್ಲಿ ಆಗಿರುವ ದೋಷಗಳನ್ನು ಕೂಡಲೇ ಸರಿಪಡಿಸುವುದಾಗಿ ಹೇಳಿದರು. 6ನೇ ಸೆಮಿಸ್ಟರ್ ಪರೀಕ್ಷಾ ಶುಲ್ಕದ ದಿನಾಂಕವನ್ನು ಜುಲೈ 7ನೇ ತಾರೀಖಿನವರೆಗೂ ವಿಸ್ತರಿಸುವುದಾಗಿ ಪ್ರಕಟಿಸಿದರು. 

ರಾಜ್ಯ ಮಟ್ಟದಲ್ಲಿ ಯು ಯುಸಿಎಂಎಸ್ ಪೋರ್ಟಲ್ ಮೂಲಕವೇ ಪರೀಕ್ಷಾ ಶುಲ್ಕಗಳನ್ನು ಪಾವತಿಸಲು ಅವಕಾಶ ಇರುವುದರಿಂದ, ಈ ಕುರಿತು ರಾಜ್ಯ ಸರ್ಕಾರ ಹಾಗೂ ಶಿಕ್ಷಣ ಇಲಾಖೆಯ ಗಮನ ಸೆಳೆದು ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿಕೊಡಲು ಯತ್ನಿಸುವುದಾಗಿ ತಿಳಿಸಿದರು.

ಸಂಘಟನೆಯ ರಾಜ್ಯ ಕಚೇರಿ ಕಾರ್ಯದರ್ಶಿ ಮಹಾಂತೇಶ್ ಬೀಳೂರ್, ಜಿಲ್ಲಾ ಉಪಾಧ್ಯಕ್ಷರಾದ ಕಾವ್ಯ ಬಿ ಹಾಗೂ ಯಶವಂತ್ ನಿಖಿಲ್ ಅಬ್ಜಲ್, ನಯನ, ತನುಶ್ರೀ, ಕಾವ್ಯ, ನಿವೇದಿತಾ ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

error: Content is protected !!