ಪಂ. ಅಭಿವೃದ್ಧಿ ಅಧಿಕಾರಿಗಳಿಗೆ ಜಿ.ಪಂ. ಸಿಇಓ ಸುರೇಶ್ ಬಿ.ಇಟ್ನಾಳ್ ಸೂಚನೆ
ದಾವಣಗೆರೆ, ಜು.1- ಜಿಲ್ಲೆಯ ಎಲ್ಲಾ ಗ್ರಾಮಗಳ ವ್ಯಾಪ್ತಿಯಲ್ಲಿ ಪೂರೈಕೆಯಾಗುವ ನೀರಿನಲ್ಲಿ ಕಲುಷಿತ ನೀರು ಪೂರೈಕೆಯಾಗದಂತೆ ನೋಡಿಕೊಳ್ಳಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಜಿ.ಪಂ. ಸಿಇಓ ಸುರೇಶ್ ಬಿ.ಇಟ್ನಾಳ್ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಇವರ ಸಹಯೋಗದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಫೀಲ್ಡ್ ಟೆಸ್ಟ್ ಕಿಟ್ ಎಚ್2ಎಸ್ ವೈಲ್ಸ್ ಉಪಯೋಗಿಸಿ ನೀರಿನ ಪರೀಕ್ಷೆಗಳನ್ನು ಕೈಗೊಳ್ಳುವ ಬಗ್ಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಕಲುಷಿತ ನೀರಿನ ಸೇವನೆಯಿಂದ ಸಾರ್ವಜನಿಕರ ಅನಾರೋಗ್ಯಕ್ಕೆ ಕಾರಣವಾಗುತ್ತಿರುವ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿರುವುದರಿಂದ ಕುಡಿಯುವ ನೀರಿನ ಪರೀಕ್ಷೆ, ಕಲುಷಿತಕ್ಕೆ ಕಾರಣಗಳು, ಇದರ ದುಷ್ಪರಿಣಾಮಗಳು ಹಾಗೂ ನೀರು ಕಲುಷಿತವಾಗದಂತೆ ನಿರ್ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ವಿವರವಾಗಿ ಪರಿಶೀಲನೆ ನಡೆಸಬೇಕಾಗಿ ಸೂಚಿಸಿದರು.
ಪೈಪ್ಲೈನ್ ನೆಟ್ವರ್ಕ್ನಲ್ಲಿ ಎಲ್ಲಿಯಾದರು ಸೋರಿಕೆಯಾಗಿದೆ ಎಂದು ಕಂಡು ಬಂದರೆ ಅದನ್ನು ಪ್ಲಗ್ ಮಾಡಿ ಸೋರಿಕೆಯಾಗದಂತೆ ಕ್ರಮವಹಿಸ ಬೇಕು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಜಲ ಜೀವನ್ ಮಿಷನ್ ಯೋಜನೆಯಡಿ ಪ್ರತಿ ಗ್ರಾಮದ ನೀರಿನ ಮೂಲಗಳ ಶುದ್ಧತೆಯ ಕುರಿತು ವರ್ಷದಲ್ಲಿ ಕನಿಷ್ಠ ನಾಲ್ಕು ಬಾರಿ ಕಡ್ಡಾಯವಾಗಿ ಪರೀಕ್ಷೆ ನಡೆಸಬೇಕು.
ಈ ರೀತಿ ಪರೀಕ್ಷೆ ನಡೆಸಲು ಪ್ರತಿ ಗ್ರಾಮ ಪಂಚಾಯಿತಿಗೆ ಎಫ್.ಟಿ.ಕೆ ಫೀಲ್ಡ್ ಟೆಸ್ಟ್ ಕಿಟ್ ನೀಡಲಾಗಿದ್ದು, ಎಲ್ಲಾ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಲ್ಯಾಬ್ಗಳಲ್ಲಿ ನೀರು ಸಂಗ್ರಹಗಾರರಿಂದ ನೀರು ಸಂಗ್ರಹಿಸಿ ನೀರಿನ ಮೂಲಗಳ ಪರೀಕ್ಷೆ ನಡೆಸಿ ವರದಿಯನ್ನು ಗ್ರಾಮ ಪಂಚಾಯಿತಿಗಳಿಗೆ ನೀಡಲು ತಿಳಿಸಿದರು.
ಮಳೆಗಾಲ ಆರಂಭವಾಗಿರುವುದರಿಂದ ಸಾಂಕ್ರಾಮಿಕ ರೋಗ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮವಾಗಿ ಈ ಸಮೀಕ್ಷೆ ನಡೆಸಲಾಗುತ್ತಿದೆ. ಆಶಾ ಕಾರ್ಯಕರ್ತೆಯರ ಜೊತೆ ಮನೆ ಮನೆಗೆ ತೆರಳಿ ಸಮೀಕ್ಷೆ ಸಮಯದಲ್ಲಿ ನಿಂತ ನೀರಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಾಣಗಳಾದ ಹೂವಿನ ಕುಂಡ, ಹಳೆ ಟೈರ್, ಹಳೆ ಎಣ್ಣೆಯ ಡ್ರಮ್ಗಳಲ್ಲಿ ಕಂಡು ಬಂದ ಲಾರ್ವಾ ತಾಣಗಳನ್ನು ತಕ್ಷಣ ನಾಶಕ್ಕೆ ಟೇಮಿಪಾಸ್ ದ್ರಾವಣವನ್ನು ಹಾಕಿ ಸೊಳ್ಳೆಗಳಿಂದ ಹರಡುವ ರೋಗ ತಡೆಯಬೇಕೆಂದರು.
ಅನೇಕ ಜಿಲ್ಲೆಗಳ ಗ್ರಾಮಗಳಲ್ಲಿ ಕಲುಷಿತ ನೀರು ಸೇವನೆಯಿಂದ ಸಾರ್ವಜನಿಕರು ಅನಾರೋಗ್ಯಕ್ಕೆ ತುತ್ತಾಗುತ್ತಿರುವ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ನೀರಿನ ಪರೀಕ್ಷೆ ಮಾಡಿದ ನಂತರ ನೀರು ಕಲುಷಿತವಾಗಿದ್ದಲ್ಲಿ ಮತ್ತು ಕುಡಿಯಲು, ಬಳಸಲು ಯೋಗ್ಯವಲ್ಲದ ನೀರು ಬಳಸದಂತೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕ್ರಮ ವಹಿಸಬೇಕಾಗಿರುತ್ತದೆ. ಒಂದು ವೇಳೆ ಕಲುಷಿತ ನೀರಿನಿಂದ ಸಮಸ್ಯೆ ಬಂದರೆ ಪಿಡಿಓ ಮತ್ತು ಸಹಾಯಕ ಇಂಜಿನಿಯರ್ ಮೇಲೆ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ನೀರಿನ ಬಾವಿ, ಕೆರೆ, ನದಿ, ನಳ, ನೀರು, ಟ್ಯಾಂಕ್ಗಳ ನೀರಿನ ಗುಣಮಟ್ಟದ ಬಗ್ಗೆ ಗ್ರಾಮ ಪಂಚಾಯತಿಗಳಲ್ಲಿ ಎಫ್.ಟಿ.ಕೆ ಟೆಸ್ಟ್ ಮೂಲಕ ಪರೀಕ್ಷಿಸಿ ನಂತರವೇ ಬಳಸಲು `ಶುದ್ಧ ನೀರಿನ ಬಳಕೆ ನಿಮ್ಮ ಆದ್ಯತೆಯಾಗಲಿ` ಎಂಬ ಶೀರ್ಷಿಕೆಯ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕೃಷ್ಣನಾಯ್ಕ, ಮುಖ್ಯಯೋಜನಾಧಿಕಾರಿ ಮಲ್ಲನಾಯ್ಕ, ಕಾರ್ಯನಿರ್ವಹಣಾಧಿಕಾರಿ ಉತ್ತಮ್, ರಾಘವೇಂದ್ರ ಹೊನ್ನಳ್ಳಿ, ಗ್ರಾಮೀಣ ನೀರು ಸರಬರಾಜು ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಸೋಮ್ಲನಾಯಕ್, ಜಿಲ್ಲಾ ಯೋಜನಾ ವ್ಯವಸ್ಥಾಪಕ ಜಗದೀಶ್ ಬಿ.ಟಿ, ಪ್ರಯೋಗಾಲಯ ಸಿಬ್ಬಂದಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.