ದಾವಣಗೆರೆ, ಜು. 1 – ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಎಲ್ಲಾ ರೀತಿಯ ಮೂಲ ಸೌಕರ್ಯ ಕಲ್ಪಿಸಲು ಸಮಗ್ರ ಯೋಜನೆಯೊಂದನ್ನು ರೂಪಿಸುವಂತೆ ದಾವಣಗೆರೆ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಣಾಧಿಕಾರಿ ಸುರೇಶ ಹಿಟ್ನಾಳ್ ಅವರೊಂದಿಗೆ ತಮ್ಮ ಗೃಹ ಕಚೇರಿ ಸಭೆಯಲ್ಲಿ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಸೂಚಿಸಿದರು.
ಚುನಾವಣಾ ಪ್ರಚಾರದ ವೇಳೆ ಅನೇಕ ಗ್ರಾಮಗಳು ಮೂಲ ಸೌಕರ್ಯದಿಂದ ವಂಚಿತ ವಾಗಿರುವುದು ಕಂಡು ಬಂದಿದ್ದು, ಇಂತಹ ಗ್ರಾಮಗಳನ್ನು ಗುರುತಿಸಿ ಮೊದಲು ಮೂಲ ಸೌಕರ್ಯ ಕಲ್ಪಿಸುವಂತೆ ಅವರು ತಿಳಿಸಿದರು.
ಕೆಲವು ಗ್ರಾಮಗಳಲ್ಲಿ ಮೂಲ ಸೌಕರ್ಯ ಇದ್ದರೂ ಸಹ ಸ್ವಚ್ಛತೆ ಇಲ್ಲದಿರವುದು ಹಾಗೂ ಯಾವುದೇ ಮೂಲ ಸೌಕರ್ಯ ಇಲ್ಲದೇ ಇರುವ ಗ್ರಾಮಗಳಿಗೆ ಮೂಲ ಸೌಕರ್ಯ ಕಲ್ಪಿಸುವುದರ ಜೊತೆಗೆ ಜನರಿಗೆ ರೋಗರುಜಿನ ಹರಡದಂತೆ ಸ್ವಚ್ಛತೆ ಕಾಪಾಡಿಕೊಳ್ಳುವ ಜಾಗೃತೆ ಮೂಡಿಸಬೇಕೆಂದು ತಿಳಿಸಿದರು.
ಮೂಲ ಸೌಕರ್ಯ ವಂಚಿತ ಕೆಲವು ಗ್ರಾಮಗಳನ್ನು ಹೆಸರಿಸಿದ ಸಂಸದರು `ಗ್ರಾಮ ರಾಜ್ಯ ಸ್ವರಾಜ್ಯ’ ಎಂಬ ಧ್ಯೆಯ ವಾಕ್ಯವನ್ನು ಸಂಪೂರ್ಣ ಪರಿಪಾಲಿಸಬೇಕಾಗಿದ್ದು, ಈ ನಿಟ್ಟಿನಲ್ಲಿ ಮೂಲಸೌಕರ್ಯ ವಂಚಿತ ಗ್ರಾಮಗಳನ್ನು ಗುರುತಿಸಿ ಯೋಜನೆ ರೂಪಿಸುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಉಪಸ್ಥಿತರಿದ್ದರು.