`ವೈದ್ಯೋ ನಾರಾಯಣ ಹರಿ’ ಎಂಬ ಉಕ್ತಿಯಂತೆ ದೇವರ ರೂಪದಲ್ಲಿ ಭೂಮಿಯ ಮೇಲೆ ಜನರ ಸೇವೆಗೆ ಸದಾ ತಮ್ಮ ಜೀವನವನ್ನು ಮುಡುಪಾಗಿಟ್ಟಿರುವ ವೈದ್ಯರ ದಿನವನ್ನು ಆಚರಿಸುವ ಸುಸಂದರ್ಭ ನಮಗೊದಗಿದೆ, ಅಲ್ಲದೆ, ಸಮಾಜದ ಎಲ್ಲಾ ಜನರ ಪರವಾಗಿ ನಮ್ಮ ಕರ್ತವ್ಯವೂ ಹೌದು. ವೈದ್ಯರ ದಿನವು ವೈದ್ಯರು ರೋಗಿಗಳ ಕಾಳಜಿ ಮತ್ತು ಸಮಾಜದ ಬಗ್ಗೆ ಸಹಾನುಭೂತಿಯಿಂದ ದುಡಿಯುವ ಮತ್ತು ಅವರ ತ್ಯಾಗ, ದೀರ್ಘ ಗಂಟೆಗಳ ಕೆಲಸ, ಗುಣಪಡಿಸುವ ನಿರಂತರ ಅನ್ವೇಷಣೆಯಲ್ಲಿ ಅವರು ಎದುರಿಸಿದ ಸವಾಲುಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ದಿನವಾಗಿದೆ.
`ಸದಾ ಜನರ ಸೇವೆಯಲ್ಲಿ ನಿರತರಾಗಿರುವ ಎಲ್ಲಾ ವೈದ್ಯ ಸಂಕುಲಕ್ಕೂ ಕರುಣಾ ಜೀವ ಕಲ್ಯಾಣ ಟ್ರಸ್ಟಿನ ವತಿಯಿಂದ ವೈದ್ಯರ ದಿನಾಚರಣೆಯ ಶುಭಾಶಯಗಳು’ ವೈದ್ಯರೂ, ವೈದ್ಯರ ನಿರ್ಮಾತೃ ಶಿಕ್ಷಕರೂ ಆಗಿ ಜೀವನೋತ್ಸಾಹದಿ, ಬಿಳಿ ಬಿಳಿ ಬಟ್ಟೆಗಳಲ್ಲಿ ಬೆಳಗುವ, ಕಲ್ಯಾಣ ಮಿತ್ರರಾಗಿ ಜನರ ಬಾಳ ಬೆಳಗಿಸುವ ವೈದ್ಯ ಬಳಗಕ್ಕೆಲ್ಲಾ ಹೃತ್ಪೂರ್ವಕ ಪ್ರೀತಿಯ ನಮನಗಳು.
ನಮ್ಮೆಲ್ಲರ ಜೀವನ ಸುಗಮವಾಗಿ, ಸಂತೋಷವಾಗಿರಬೇಕಾದರೆ ಶಿಕ್ಷಕ, ವೈದ್ಯ ಮತ್ತು ರೈತರ ಪಾತ್ರ ಅಪಾರವಾದದ್ದು. ಒಂದು ಜೀವ ಭೂಮಿಗೆ ಆನಂದದಿ ಆಗಮಿಸಿ, ನೂರ್ಕಾಲ ಆರೋಗ್ಯ, ಆನಂದ, ಶಾಂತಿಯ ಬಾಳು ಬಾಳಿ ನಿರ್ಗಮಿಸುವವರೆಗಿನ ತಮ್ಮಂತಹ ವೈದ್ಯರ ಕೊಡುಗೆಗೆ, ಶ್ರಮಕ್ಕೆ ಕೋಟಿ ಕೋಟಿ ಕೃತಜ್ಞತೆಗಳು. ಮನುಕುಲದ ಅತ್ಯುನ್ನತ ಕೆಲಸಗಳಲ್ಲೊಂದಾದ ವೈದ್ಯ ವೃತ್ತಿ ನಿರ್ವಹಿಸುತ್ತಾ ತಮ್ಮ ವೃತ್ತಿ ಬದುಕಿನಲ್ಲಿ ಸಾಕಷ್ಟು ರೋಗಿಗಳ ದೈಹಿಕ ಮತ್ತು ಮಾನಸಿಕ ವೇದನೆಗಳನ್ನು ನಿವಾರಿಸಿ, ಸುಂದರ ಬದುಕು ನಡೆಸಲು ಸಹಕರಿಸಿ, ಉಪಕರಿಸಿದ ವೈದ್ಯರಿಗೆ ಹೃತ್ಪೂರ್ವಕ ಅಭಿನಂದನೆಗಳು.
ಭಾರತದ ಪ್ರಸಿದ್ಧ ವೈದ್ಯ ಮತ್ತು ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿ ಬಿಧನ್ ಚಂದ್ರ ರಾಯ್ ಅವರ ಗೌರವಾರ್ಥ ವೈದ್ಯರ ದಿನವನ್ನು ಪ್ರತಿವರ್ಷ ಜುಲೈ 1 ರಂದು ಆಚರಿಸಲಾಗುತ್ತದೆ. ಈ ಸುದಿನದಂದು ನಾವೆಲ್ಲರು ವೈದ್ಯ ವೃಂದ ಹಾಗೂ ಸಹಾಯಕರಿಗೆ ಕೃತಜ್ಞತೆ ಹೇಳಲೇ ಬೇಕು. `ವೈದ್ಯರು ನಿಜವಾಗಿಯೂ ಕಣ್ಣಿಗೆ ಕಾಣುವ ದೇವರೆ’. ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಸ್ಥಿತಿಗೆ ತರುವಲ್ಲಿ ವೈದ್ಯರ ಪಾತ್ರ ಗಣನೀಯವಾದುದು. ವೈದ್ಯರ ನಿಷ್ಠೆ, ಶ್ರಮ ಹಾಗೂ ನಿಸ್ವಾರ್ಥಭಾವದ ಸೇವೆ ರೋಗಿಗೆ ಮರು ಜನ್ಮವನ್ನು ನೀಡುತ್ತದೆ. `ಉತ್ತಮ ಆರೋಗ್ಯಕ್ಕಿಂತ ಉನ್ನತ ಆಸ್ತಿ ಮತ್ತೊಂದಿಲ್ಲ’ಎಂಬ ಅರಿವು ಮೂಡಿಸುವಲ್ಲಿ ವೈದ್ಯರ ಪಾತ್ರ ಅತ್ಯಮೂಲ್ಯ, ಕೊರೋನಾ ಮಹಾಮಾರಿಯನ್ನು ಎದುರಿಸುವಂತಹ ಕಷ್ಟದ ಸಮಯದಲ್ಲೂ ಮನೆ ಬಾಗಿಲಿಗೆ ಬಂದು ಕೋವಿಡ್-19 ಬಗ್ಗೆ ಜಾಗೃತಿ ಮೂಡಿಸಿದ ವೈದ್ಯರು, ನರ್ಸ್ ಗಳಿಗೆ ಹೃದಯಪೂರ್ವಕ ಕೃತಜ್ಞತೆಗಳು, ಧನ್ಯವಾದಗಳು.
`ವೈದ್ಯೋ ನಾರಾಯಣ ಹರಿ’ ಎಂಬ ಉಕ್ತಿಯಂತೆ ದೇವರ ರೂಪದಲ್ಲಿ ಭೂಮಿಯ ಮೇಲೆ ಜನರ ಸೇವೆಗೆ ಸದಾ ತಮ್ಮ ಜೀವನವನ್ನು ಮುಡುಪಾಗಿಟ್ಟಿರುವ ವೈದ್ಯರ ದಿನವನ್ನು ಆಚರಿಸುವ ಸುಸಂದರ್ಭ ನಮಗೊದಗಿದೆ, ಅಲ್ಲದೆ ಸಮಾಜದ ಎಲ್ಲಾ ಜನರ ಪರವಾಗಿ ನಮ್ಮ ಕರ್ತವ್ಯವೂ ಹೌದು. ವೈದ್ಯರ ದಿನವು ವೈದ್ಯರು ರೋಗಿಗಳ ಕಾಳಜಿ ಮತ್ತು ಸಮಾಜದ ಬಗ್ಗೆ ಸಹಾನುಭೂತಿಯಿಂದ ದುಡಿಯುವ ಮತ್ತು ಅವರ ತ್ಯಾಗ, ದೀರ್ಘ ಗಂಟೆಗಳ ಕೆಲಸ, ಗುಣಪಡಿಸುವ ನಿರಂತರ ಅನ್ವೇಷಣೆಯಲ್ಲಿ ಅವರು ಎದುರಿಸಿದ ಸವಾಲುಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ದಿನವಾಗಿದೆ.
ಕಷ್ಟದಲ್ಲಿ ಕೈ ಹಿಡಿಯುವವರು ಎದುರು ನಿಂತಾಗ ಅವರಲ್ಲಿ ಜನರು ದೇವರನ್ನು ಕಾಣುತ್ತಾರೆ. ವೈದ್ಯರನ್ನು ರೋಗಿಗಳು ಅದೇ ರೀತಿ ನೋಡುತ್ತಾರೆ. ನಂಬಿ ಬಂದ ರೋಗಿಗಳನ್ನು ಆರೈಕೆ ಮಾಡುವ ವೈದ್ಯರು ವಿಶ್ವ ಭಾವೈಕ್ಯತೆಯ ಪ್ರತೀಕ. ಓರ್ವ ಆದರ್ಶ ವೈದ್ಯ ತನ್ನ ಕುಟುಂಬದ ನೋವು, ನಲಿವುಗಳನ್ನು ಬದಿಗಿರಿಸಿ ತನ್ನ ಮುಂದೆ ಮಲಗಿದ ರೋಗಿಯ ಪ್ರಾಣವನ್ನು ಉಳಿಸಿಕೊಳ್ಳಲು ಅದೆಷ್ಟೋ ಹರಸಾಹಸ ಪಡುತ್ತಾನೆ. ವೈದ್ಯರು ರೋಗಿಯ ಬಗ್ಗೆ ಒಂದಿಷ್ಟೂ ಅಸಹ್ಯಪಟ್ಟುಕೊಳ್ಳದೇ ಹೆತ್ತ ತಾಯಿಯಂತೆ ಆರೈಕೆ ಮಾಡುವ ಅವರು ಮಾನವೀಯತೆಯ ಪ್ರತಿರೂಪ. ಅದಕ್ಕಾಗಿ ಅವರನ್ನು ಜನಜೀವನದ ಸೂಪರ್ ಹೀರೋಗಳು ಎಂದು ಕರೆಯಲಾಗುತ್ತದೆ. ವೈದ್ಯರಾಗುವುದು ತುಂಬಾ ಸುಲಭದ ಕೆಲಸವಲ್ಲ. ಅದಕ್ಕಾಗಿ 14 ವರ್ಷ ಸತತ ವಿದ್ಯಾತುರಾಣರಾಗಿ ಸುಖ ಮತ್ತು ನಿದ್ರೆ ಇಲ್ಲದೆ ಕಷ್ಟಪಟ್ಟಿರುತ್ತಾರೆ. ವೈದ್ಯರು ಸರಿಸಮಾರು ಶೇ 64 ರಷ್ಟು ಅಧಿಕಾವಧಿ ಕೆಲಸ ಮಾಡುತ್ತಾರೆ ಎಂಬ ಅಂಶ ವರದಿಯಾಗಿದೆ. ಇದು ವೈದ್ಯರ ಅಸಾಧಾರಣ ಪ್ರಯತ್ನ. ಸಮಾಜಕ್ಕೆ ಅವರ ಕಾಯಕದ ಕೊಡುಗೆ.
ಎಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ರೋಗಿಯ ಸೇವೆಗೆ ಅಣಿಯಾಗುವ ಇವರ ವೃತ್ತಿ ವೃತ್ತಿಯೇ ಅಲ್ಲ. ಅದು ಮಾನವೀಯ ಧರ್ಮ. ರಾತ್ರಿ, ಹಗಲು ಎನ್ನದೇ ತಮ್ಮ ಆರೋಗ್ಯದ ಕಡೆಗೆ ಒಂದಿಷ್ಟು ಗಮನ ನೀಡದೇ ತಮ್ಮ ಬಂಧು ಬಳಗದ ಪ್ರೀತಿಯ ಪರಿಸರವನ್ನು ಮರೆತು ಸೇವೆಗೈಯ್ಯುವ ಇವರ ಕ್ರಿಯಾಶೀಲತೆಯ ಕಾಯಕ ಅಭಿಮಾನ ಮೂಡಿಸು ತ್ತದೆ. ತಮ್ಮ ಅದೆಷ್ಟೋ ಕಷ್ಟಗಳನ್ನೆಲ್ಲ ಮರೆತು ರೋಗಿ ಯೊಂದಿಗೆ ನಗು ಮುಖದಿಂದ ಮಾತನಾಡುತ್ತಾ, ಭರವಸೆಯ ಮಾತುಗಳಿಂದ ರೋಗಿಯಲ್ಲಿ ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತಾರೆ. ಪ್ರೀತಿ ತುಂಬಿದ ಮಾತುಗಳಿಂದ ರೋಗಿಗಳಲ್ಲಿ ಆಪ್ತ ಸಂಜೀವಿನಿಯಂತೆ, ಸ್ನೇಹಿತನಂತೆ ಕಂಡು ಬರುತ್ತಾರೆ. ಹೀಗಾಗಿ ಇಡೀ ಸಮಾಜ ವೈದ್ಯಲೋಕವನ್ನು ಗೌರವಿಸಿ, ನಮಿಸುತ್ತದೆ. ಅವರ ನಿಸ್ವಾರ್ಥ ಸೇವೆಗೆ ತಲೆದೂಗುತ್ತದೆ.
ದಾವಣಗೆರೆಯ ಹಲವಾರು ವೈದ್ಯರು ಕರುಣಾ ಟ್ರಸ್ಟಿನ ಅನೇಕ ಸಮಾಜಮುಖಿ ಕಾರ್ಯಗಳಲ್ಲಿಯೂ ಸಹ ತಮ್ಮನ್ನು ತೊಡಗಿಸಿಕೊಳ್ಳು ವುದರ ಜೊತೆಗೆ ಧನ ಸಹಾಯವಿತ್ತು ಸಹಕರಿಸುತ್ತಿದ್ದಾರೆ. ಇನ್ನುಳಿದ ವೈದ್ಯರೂ ಸಹ ಕರುಣೆ, ಮೈತ್ರಿ, ಪ್ರೀತಿಯಿಂದ ಸಮಾಜದ ಕಾರ್ಯಗಳಿಗೆ ನೆರವಾಗಲು ಕರುಣಾ ಟ್ರಸ್ಟ್ ವಿನಂತಿಸುತ್ತದೆ. ಅಲ್ಲದೆ ತಮ್ಮ ಹತ್ತಿರ ಚಿಕಿತ್ಸೆಗಾಗಿ ಬರುವ ಬಡವರಿಗೆ, ನಿರ್ಗತಿಕರಿಗೆ ಔದಾರ್ಯದಿಂದ ರಿಯಾಯಿತಿ ದರದಲ್ಲಿ ಸಾಧ್ಯವಾದರೆ ಉಚಿತವಾಗಿ ಚಿಕಿತ್ಸೆ ನೀಡಬೇಕಾಗಿ ತಮ್ಮಲ್ಲಿ ಕಳಕಳಿಯ ವಿನಂತಿ.
ವೈದ್ಯರಿಗೆ `ಪರಮಾನಂದ, ಪರಮ ಶಾಂತಿ, ಪರಮ ಆರೋಗ್ಯ, ಪರಮ ಸಾರ್ಥಕ್ಯವನ್ನು’ ಕೊಟ್ಟು ಕಾಪಾಡಲಿ ಎಂದು ವೈದ್ಯ ದೇವರುಗಳಾದ ಅಶ್ವಿನಿ, ಹಿಪೋಕ್ರೆಟಸ್, ಬಿ.ಸಿ.ರಾಯ್ ರಲ್ಲಿ ಪ್ರಾರ್ಥಿಸುತ್ತೇವೆ.
– ಶಿವನಕೆರೆ ಬಸವಲಿಂಗಪ್ಪ, ದಾವಣಗೆರೆ.