ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರ: ಪ್ರತಿಭಟನೆ

ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರ: ಪ್ರತಿಭಟನೆ

ಶಾಸಕ ಹರೀಶ್ ನೇತೃತ್ವದಲ್ಲಿ ಡಿಸಿ ಕಚೇರಿ ಎದುರು ಪ್ರತಿಭಟಿಸಿದ ಬಿಜೆಪಿ ಮುಖಂಡರು

ದಾವಣಗೆರೆ, ಜೂ.28- ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಸರ್ಕಾರಿ ಹಣದ ವರ್ಗಾವಣೆಯ ಗೋಲ್‌ಮಾಲ್ ಹಾಗೂ ಚುನಾವಣಾ ವೆಚ್ಚಕ್ಕೆ ಹಣ ಬಳಕೆ ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಸೌಲಭ್ಯ ವಂಚಿತ ಎಸ್.ಟಿ. ಸಮುದಾಯಕ್ಕೆ ಸೂಕ್ತ ನ್ಯಾಯ ಒದಗಿಸಿಕೊಡುವಂತೆ ಪ್ರತಿಭಟನಾ ಕಾರರು ಇದೇ ಸಂದರ್ಭದಲ್ಲಿ ಆಗ್ರಹಿಸಿದರು.

ಹರಿಹರ ಶಾಸಕ ಬಿ.ಪಿ. ಹರೀಶ್, ಲೋಕಸಭಾ ಚುನಾವಣೆಯ ಬಿಜೆಪಿ ಪರಾಜಿತ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಕೂಡ ನಡೆಯಿತು. ಇದಲ್ಲದೇ ಪ್ರತಿಭಟನಾಕಾರರು ಡಿಸಿ ಕಚೇರಿ ಗೇಟ್ ಬಳಿ ಇದ್ದ ಬ್ಯಾರಿಕೇಡ್ ತಳ್ಳಿ ಹಾಕುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ತಕ್ಷಣ ಸ್ಥಳದಲ್ಲಿದ್ದ ಪೊಲೀಸರು ಪ್ರತಿಭಟನಾಕಾರರನ್ನು ನಿಯಂತ್ರಿಸಿ, ವಾತಾವರಣ ತಿಳಿಗೊಳಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡರು, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ಹಣ ವರ್ಗಾವಣೆಯ ಅವ್ಯವಹಾರ ನಡೆದಿದ್ದು, ಈ ಹಣವನ್ನು ಕಾಂಗ್ರೆಸ್‌ನ ಚುನಾವಣಾ ವೆಚ್ಚಕ್ಕೆ ಬಳಕೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತಪಡಿಸಿದರು.

ಅವ್ಯವಹಾರಕ್ಕೆ ಸಂಬಂಧಿಸಿದಂತೆ ನನ್ನ ಸಹಿಯನ್ನು ಪೋರ್ಜರಿ ಮಾಡಲಾಗಿದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ್ ಅವರು ಹೇಳುತ್ತಿದ್ದಾರೆ. ಈ ಬಗ್ಗೆಯೂ ಸಮಗ್ರ ತನಿಖೆ ಕೈಗೊಳ್ಳಬೇಕು. ಹಣಕಾಸು ಖಾತೆ ಹೊಂದಿರುವ ಸಿಎಂ ಸಿದ್ಧರಾಮಯ್ಯ ಇದರ ಹೊಣೆ ಹೊರಬೇಕು. ಸಚಿವ ನಾಗೇಂದ್ರ ಅವರ ರಾಜೀನಾಮೆ ಒಂದೇ ಇದಕ್ಕೆ ಪರಿಹಾರವಲ್ಲ. ಪ್ರಕರಣದ ಹಿಂದಿರುವ ಕಾಣದ ಕೈಗಳ ಬಗ್ಗೆ ತನಿಖೆ ಆಗಬೇಕೆಂದು ಒತ್ತಾಯಿಸಿದರು.

ಪರಿಶಿಷ್ಟ ಪಂಗಡದವರ ಕಲ್ಯಾಣಕ್ಕೆ ಬಿಡುಗಡೆಯಾದ ಹಣದ ಅವ್ಯವಹಾರ ನಡೆಸಿ, ಕಾಂಗ್ರೆಸ್ ಸರ್ಕಾರ ಎಸ್ಟಿ ಸಮುದಾಯಕ್ಕೆ ದ್ರೋಹ ಬಗೆದಿದೆ. ಹಿಂದುಳಿದ ವರ್ಗಗಳ ಸಮುದಾಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಮೀಸಲಿರಿಸಿದ್ದ ಸುಮಾರು 24 ಸಾವಿರ ಕೋಟಿ ರೂ.ಗಳನ್ನು ಕಾಂಗ್ರೆಸ್ ಸರ್ಕಾರ ಇತರೆ ಯೋಜನೆಗಳಿಗೆ ಬಳಸಿಕೊಂಡಿರುವುದು ಆ ಸಮುದಾಯಕ್ಕೆ ಮಾಡಿದ ಘೋರ ಅನ್ಯಾಯವಾಗಿದೆ ಎಂದು ಕಿಡಿಕಾರಿದರು. 

ಎಸ್ಟಿ ಸಮುದಾಯಕ್ಕೆ ಅನ್ಯಾಯವಾಗಿದ್ದರೂ ಸಹ ಸಂಬಂಧಿಸಿದ ಎಸ್ಟಿ ಮೀಸಲು ಕ್ಷೇತ್ರಗಳಿಂದ ಗೆದ್ದು ಬಂದ ಶಾಸಕರು ಮೌನ ವಹಿಸಿರುವುದು ಸಮುದಾಯಕ್ಕೆ ಮಾಡಿದ ದ್ರೋಹವಾಗಿದೆ ಎಂದರು.

ನಿಗಮದ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ನಡೆದ ಅವ್ಯವಹಾರದಲ್ಲಿ ಹಣಕಾಸು ಇಲಾಖೆ ಹೊಣೆ ಹೊತ್ತಿರುವ ಸಿಎಂ ಸಿದ್ದರಾಮಯ್ಯ ಅವರು ಕೂಡ ರಾಜೀನಾಮೆ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ರಾಜ್ಯದ ಬೊಕ್ಕಸ ಖಾಲಿ ಮಾಡುವುದಲ್ಲದೇ ಸರಣಿ ರೂಪದಲ್ಲಿ  ಬೆಲೆ ಏರಿಕೆ ಮಾಡಿ ಜನರ ಮೇಲೆ ಬರೆ ಎಳೆಯುತ್ತಿದ್ದಾರೆ. ಸಂಪನ್ಮೂಲಗಳನ್ನು ವೃದ್ಧಿಸಿಕೊಳ್ಳಲಾಗದೇ, ಅಭಿವೃದ್ಧಿಯತ್ತ ಹೆಜ್ಜೆ ಹಾಕದೇ ಭ್ರಷ್ಟ ಹಾಗೂ ವೈಫಲ್ಯದ ರಾಜ್ಯ ಸರ್ಕಾರ ಎಂಬ ಹಣೆಪಟ್ಟಿಯನ್ನು ಕಟ್ಟಿಕೊಂಡಿದೆ ಎಂದರು.

ಕಾಂಗ್ರೆಸ್ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಸ್ಥಾನಗಳಿಗೆ ತಿಕ್ಕಾಟ, ಸಚಿವ ಸ್ಥಾನಗಳಿಗೆ ಗುದ್ದಾಟ, ಅನುದಾನಕ್ಕಾಗಿ ಶಾಸಕರುಗಳ ಹೋರಾಟ ಲೂಟಿ ಮಾಡಲಿಕ್ಕೆಂದೇ ನಿರಂತರ ಪೈಪೋಟಿಯಲ್ಲಿ ತೊಡಗಿರುವುದಾಗಿ ಆರೋಪಿಸಿದರು.

ಹಗರಣಕ್ಕೆ ಕಾರಣರಾದವರನ್ನು ತನಿಖೆಯಿಂದ ಪತ್ತೆ ಹಚ್ಚಿ, ಕಾನೂನು ಕ್ರಮ ಕೈಗೊಳ್ಳಬೇಕು. ಎಸ್ಟಿ ಸಮುದಾಯಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಶ್ರೀನಿವಾಸ ದಾಸಕರಿಯಪ್ಪ, ಯಶೋದ ಹೆಗ್ಗಪ್ಪ, ಪಿ.ಸಿ. ಶ್ರೀನಿವಾಸ್, ಗೌತಮ್ ಜೈನ್, ವೀರೇಶ್ ಹನಗವಾಡಿ, ಶಿವಾನಂದ್, ಶಿವಪ್ರಸಾದ್, ಲೋಹಿತ್ ಮಂಗೇನಹಳ್ಳಿ, ಎನ್. ಲೋಕೇಶ್, ಗುಮ್ಮನೂರು ಶ್ರೀನಿವಾಸ್, ಆನಗೋಡು ತಿಪ್ಪಣ್ಣ, ತ್ಯಾವಣಗಿ ದೊಡ್ದೇಶ್, ರಮೇಶ್, ಸಾಲಕಟ್ಟೆ ಸಿದ್ದಪ್ಪ, ಕೃಷ್ಣಮೂರ್ತಿ, ಹೊಸಳ್ಳಿ ವೆಂಕಟೇಶ್, ಹೆಚ್.ಪಿ. ದುರುಗೇಶ್, ಕೆಂಚನಗೌಡ ಮತ್ತಿತರರು ಪಾಲ್ಗೊಂಡಿದ್ದರು.

error: Content is protected !!