ನಾಡಪ್ರಭು ಕೆಂಪೇಗೌಡ ಅವರ 515 ನೇ ಜಯಂತ್ಯುತ್ಸವ ಆಚರಣೆ
ದಾವಣಗೆರೆ, ಜೂ. 27 – ಸರ್ವಜಾತಿ ಸಮನ್ವಯ, ಸರ್ವಧರ್ಮ ಪಾಲಕರು, ವಿಶಾಲ ನೀರಾವರಿ ಯೋಜನೆಗಳು ಹಾಗೂ ಬೃಹತ್ ಬೆಂಗಳೂರು ನಿರ್ಮಾಣದಂತಹ ಕಾರ್ಯಗಳಿಂದ ಕೆಂಪೇಗೌಡರು ನಾಡಪ್ರಭು ಎಂಬ ಪ್ರಖ್ಯಾತಿ ಪಡೆದಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಒಕ್ಕಲಿಗರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ನಗರದ ಕುವೆಂಪು ಕನ್ನಡ ಭವನದಲ್ಲಿ ಇಂದು ಆಯೋಜಿಸಲಾಗಿದ್ದ ನಾಡಪ್ರಭು ಕೆಂಪೇಗೌಡ ಅವರ 515 ನೇ ಜಯಂತ್ಯೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೆಂಪೇಗೌಡರು ನಾಡು ಕಂಡ ಅಪ್ರತಿಮ ಆಡಳಿತಗಾರ. ದೂರದೃಷ್ಟಿಯಿಂದ ರಾಜ್ಯ ಹಾಗೂ ದೇಶಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ವಿದೇಶಗಳಿಗೆ ಹೋದರೆ ನಮ್ಮವರನ್ನು ಯಾರೂ ಗುರುತಿಸುವುದಿಲ್ಲ. ಆದರೆ ನಾವು ಬೆಂಗಳೂರಿನಿಂದ ಬಂದಿದ್ದೇವೆ ಎಂದರೆ ಕೂಡಲೇ ನಮ್ಮನ್ನು ಗುರುತಿಸುತ್ತಾರೆ ಎಂದು ಹೇಳಿದರು.
ಕೆಂಪೇಗೌಡರು 1510ರಲ್ಲಿ ಇಸವಿಯಲ್ಲಿ ಜನನ ಹೊಂದಿ 35 ವರ್ಷಗಳ ಕಾಲ ರಾಜ್ಯಭಾರ ಮಾಡಿದ್ದರು. ಶಾಂತಿ ಹಾಗೂ ಸುಸ್ಥಿರ ಬದುಕಿಗೆ ಅಡಿಪಾಯ ಹಾಕಿಕೊಟ್ಟಿದ್ದರು ಎಂದು ಹೇಳಿದರು.
ಹಿರಿಯ ಪತ್ರಕರ್ತ ಬಿ.ಎನ್. ಮಲ್ಲೇಶ್ ಮಾತನಾಡಿ, ವಿಜಯನಗರ ಸಾಮ್ರಾಜ್ಯದ ಸಮಯದಲ್ಲಿ ಬೆಂಗಳೂರಿಗೆ ದೊಡ್ಡ ಕೊಡುಗೆ ಗಳನ್ನು ನೀಡಿ ರಾಜಧಾನಿಯಾಗಿ ಮಾಡಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ. ಕೆಂಪೇಗೌಡರು ತಮ್ಮ ಕಾಲಾವಧಿಯಲ್ಲಿ ಸರ್ವಜಾತಿಗೆ ಪ್ರಾಮುಖ್ಯತೆ ನೀಡಿದ್ದು, ಜಾತಿ ಮತ್ತು ಕುಲಕಸುಬುಗಳಿಗೆ ಸಂಬಂಧಿಸಿದಂತೆ ಶಟ್ಟಿಪೇಟೆ, ಗೌಡಪೇಟೆ, ಅಕ್ಕಿಪೇಟೆ ಮತ್ತು ಬಳೆಪೇಟೆ ಸೇರಿದಂತೆ ಸುಮಾರು 52 ಪೇಟೆಗಳನ್ನು ಕಟ್ಟಿದ್ದಾರೆ ಎಂದರು.
ಸಿದ್ದಗಂಗಾ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿದರು. ನಾಡಪ್ರಭು ಕೆಂಪೇಗೌಡರ ಕುರಿತು ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ್ ಎಂ.ಸಂತೋಷ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕೃಷ್ಣನಾಯ್ಕ, ಪಾಲಿಕೆ ಉಪಮೇಯರ್ ಯಶೋಧ ಹೆಗ್ಗಪ್ಪ, ಡಿಡಿಪಿಐ ಕೊಟ್ರೇಶ್, ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕ ಚಂದ್ರಶೇಖರ್ ಸುಂಕದ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ವಾಮದೇವಪ್ಪ, ಜಿಲ್ಲಾ ಒಕ್ಕಲಿಗ ಸಮಾಜದ ಅಧ್ಯಕ್ಷ ಅಶೋಕ ಗೌಡ್ರು, ದೂಡಾ ಆಯುಕ್ತ ಬಸವನಗೌಡ ಕೋಟೂರು, ತಹಶೀಲ್ದಾರ್ ಅಶ್ವತ್ಥ್ ಮತ್ತಿತರರು ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು.