ಮಳೆ ನೀರು ಶುದ್ಧ, ಸಂಗ್ರಹಿಸುವುದೂ ಸುಲಭ

ಮಳೆ ನೀರು ಶುದ್ಧ, ಸಂಗ್ರಹಿಸುವುದೂ ಸುಲಭ

ಮಳೆ ನೀರು ಕೊಯ್ಲು ಸಲಹೆಗಾರ ವಿಜಯರಾಜ್ ಸಿಸೋದ್ಯಾ

ದಾವಣಗೆರೆ, ಜು.26- ಮುಂದಿನ ಪೀಳಿಗೆಗೆ ನೀರು ಸಂಗ್ರಹಿಸಿಟ್ಟುಕೊಡದೆ ಕೋಟ್ಯಂತರ ರೂಪಾಯಿ ಆಸ್ತಿ, ಬಂಗಲೆ ನಿರ್ಮಿಸಿದರೂ ಪ್ರಯೋಜನವಿಲ್ಲ ಎಂದು ಮಳೆ ನೀರು ಕೊಯ್ಲು ಸಲಹೆಗಾರ ವಿಜಯರಾಜ್ ಸಿಸೋದ್ಯಾ ಹೇಳಿದರು.

ಪ್ರೇರಣಾ ಯುವ ಸಂಸ್ಥೆ, ಭಾರತ ವಿಕಾಸ ಪರಿಷದ್, ರೋಟರಿ ಕ್ಲಬ್ ಸಂಯುಕ್ತಾಶ್ರಯದಲ್ಲಿ ಬುಧವಾರ ನಗರದ ಜಿಲ್ಲಾ ಸ್ಕೌಟ್ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಳೆ ನೀರು ಕೊಯ್ಲು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮಳೆ ನೀರು ಅತಿ ಶುದ್ಧವಾದ, ಕುಡಿಯಲು ಯೋಗ್ಯವಾದ ನೀರು. ಇದನ್ನು ಅತಿ ಸುಲಭದ ರೀತಿಯಲ್ಲಿ ಸಂಗ್ರಹಿಸಿಟ್ಟುಕೊಳ್ಳಬಹುದು. ಇದೊಂದು ಸಾಮಾಜಿಕ ಜವಾಬ್ದಾರಿಯಾಗಬೇಕು ಎಂದು ಹೇಳಿದರು.

ಕೋವಿಡ್ ಸಮಯದಲ್ಲಿ ನಮಗೆಲ್ಲಾ ಆಕ್ಸಿಜನ್ ಮಹತ್ವ ತಿಳಿದಿದೆ. ಅದೇ ರೀತಿ ಈ ಬಾರಿಯ ಬೇಸಿಗೆಯಲ್ಲಿ ನೀರಿನ ಅಭಾವವನ್ನು ಕಂಡಿದ್ದೇವೆ. ವಿಶ್ವದಲ್ಲಿ ನೀರಿನ ಸಮಸ್ಯೆ ಎದುರಿಸುವ ದೇಶಗಳ ಪೈಕಿ ಭಾರತ ಐದನೇ ಸ್ಥಾನದಲ್ಲಿದೆ. ಇನ್ನಾದರೂ ಎಚ್ಚೆತ್ತುಕೊಂಡು ಮಳೆ ನೀರು ಸಂಗ್ರಹಿಸಲು ಮುಂದಾಗಬೇಕು. ಈ ಕಾರ್ಯ ಚಳವಳಿ ರೂಪದಲ್ಲಿ ನಡೆಯಬೇಕಿದೆ ಎಂದರು.

ವೇದ, ಪುರಾಣಗಳಲ್ಲಿ ನೀರಿಗೆ ದೇವರ ಸ್ಥಾನ ನೀಡಿದ್ದೇವೆ. ಆದರೆ ಅದು ಆಚರಣೆಗಷ್ಟೇ ಸೀಮಿತವಾಗಿದೆ.  ನೀರಿನ ಸಂಗ್ರಹಣೆ ವಿಷಯದಲ್ಲಿ ಪೂರ್ವಜರು ಅತಿ ಬುದ್ದಿವಂತರಾಗಿದ್ದರು. ಕೆರೆ-ಕಟ್ಟೆಗಳನ್ನು ಕಟ್ಟಿ ನೀರು ಸಂಗ್ರಹಿಸುತ್ತಿದ್ದರು. ಆದರೆ ಇಂದು ನಾವೇ ಅತಿ ಬುದ್ಧಿವಂತರು ಎಂದುಕೊಂಡು ಬೋರ್‌ಗಳ ಮೊರೆ ಹೋಗಿದ್ದೇವೆ. ಆದರೆ ಈಗ ಬೋರ್‌ಗಳೂ ಶಾಶ್ವತವಲ್ಲ ಎಂಬ ಸತ್ಯ ತಿಳಿಯುತ್ತಿದೆ ಎಂದರು.

ಕೇವಲ 20 ರಿಂದ 22 ಸಾವಿರ ರೂ. ಖರ್ಚಿನಲ್ಲಿ ಮನೆಯ ಮೇಲಿನ ಛಾವಣಿಯಲ್ಲಿ ಬಿದ್ದ ನೀರನ್ನು ಸಂಗ್ರಹ ಮಾಡಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಹೆಚ್ಚಾದ ನೀರನ್ನು ಬೋರ್‌ವೆಲ್‌ ರಿಚಾರ್ಜ್  ಮಾಡಲು ಬಳಸಿಕೊಳ್ಳಬಹುದು. ಇದರಿಂದ ಸುಲಭ ರೀತಿಯಲ್ಲಿ ನಮಗೆ ನೀರು ದೊರೆಯುತ್ತದೆ. ಅಲ್ಲದೇ ನೀರು ಕೆಳ ಭಾಗಕ್ಕೆ ನುಗ್ಗಿ ಹಾನಿಯಾಗುವುದೂ ತಪ್ಪುತ್ತದೆ ಎಂದು ಹೇಳಿದರು.

ದಾವಣಗೆರೆಯಲ್ಲಿ ವರ್ಷಕ್ಕೆ ಸರಾಸರಿ 750 ಮಿ.ಮೀ. ಮಲೆ ಬೀಳುತ್ತದೆ ಎಂದಾದರೆ, ನಗರದ 1200 ಚದರ ಅಡಿಯ ಮೇಲ್ಛಾವಣಿಯಲ್ಲಿ 85 ಸಾವಿರ ಲೀಟರ್ ಶುದ್ಧ ನೀರು ಸಂಗ್ರಹಿಸಬಹುದು. ಅದರೆ ನಾವು ಅಷ್ಟು ನೀರನ್ನು ಚರಂಡಿಗೆ ಬಿಟ್ಟು, ನದಿಗಳಿಂದ ನೀರು ಪಡೆಯುತ್ತಿದ್ದೇವೆ. ಕೃಷಿ ಭೂಮಿಯಲ್ಲಿ ಪ್ರತಿ ಎಕರೆಗೆ 30 ಲಕ್ಷ ಲೀಟರ್ ನೀರು ಸಂಗ್ರಹ ಮಾಡಬಹುದು ಎಂದರು.

ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ ಮಾತನಾಡಿ, ಪಾಲಿಕೆಯಿಂದ ಕಟ್ಟಡ ಕಟ್ಟಲು ಪರವಾನಗಿ ನೀಡುವಾಗ ಮಳೆ ನೀರು ಕೊಯ್ಲು ಅಳವಡಿಕೆಯ ಷರತ್ತು ವಿಧಿಸುತ್ತೇವೆ. ಆದರೆ ಅದು ಕಾರ್ಯ ರೂಪಕ್ಕೆ ಬರುವುದಿಲ್ಲ. ಮುಂದಿನ ದಿನಗಳಲ್ಲಿ ಅದನ್ನು ಕಡ್ಡಾಯ ಮಾಡುವುದಾಗಿ ಹೇಳಿದರು.

ದಾವಣಗೆರೆ  ನಗರ ವ್ಯಾಪ್ತಿಯ ನಾಲ್ಕು ಕಡೆ ಕೆರೆಗಳನ್ನು ನಿರ್ಮಿಸುವ ಚಿಂತನೆ ಇದೆ. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆದಿದೆ. ಅರಸನಕಟ್ಟೆ, ಆವರಗೆರೆ, ಹರಿಹರ, ರಾಜನಹಳ್ಳಿ ಬಳಿ ಕೆರೆಗಳನ್ನು ನಿರ್ಮಿಸಲು ಕ್ರಿಯಾಯೋಜನೆ ರೂಪಿಸಲಾಗುತ್ತಿದೆ ಎಂದರು.

ಯುವ ಪ್ರೇರಣಾ ಯುವ ಸಂಸ್ಥೆ ಅಧ್ಯಕ್ಷರೂ, ಮಹಾನಗರ ಪಾಲಿಕೆ ಮಾಜಿ ಮಹಾಪೌರರೂ ಆದ ಎಸ್.ಟಿ. ವೀರೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಬಾರಿ ಮಳೆಗಾಲ ಆರಂಭವಾಗಿ ಎರಡು ತಿಂಗಳು ಕಳೆದರೂ ಜನರಿಗೆ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ನಗರದಲ್ಲಿ ನೀರಿನ ಅಭಾವ ಹೆಚ್ಚಾಗಿದೆ. ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಕುಸಿದಿದೆ ಈ ಸಂದರ್ಭದಲ್ಲಿ ಮಳೆ ನೀರು ಕೊಯ್ಲು ಅತ್ಯಗತ್ಯವಾಗಿದೆ ಎಂದರು.

ಪರಿವರ್ತನಾ ವೇದಿಕೆ ಅಧ್ಯಕ್ಷರಾದ ಡಾ.ಶಾಂತಾಭಟ್ ಅಧ್ಯಕ್ಷತೆ ವಹಿಸಿದ್ದರು. ಭಾರತ ವಿಕಾಸ ಪರಿಷದ್ ಅಧ್ಯಕ್ಷ ಎ.ಎಸ್. ವಿಜಯಕುಮಾರ್, ಕಾರ್ಯದರ್ಶಿ ಎಂ.ಆರ್. ಮಧುಕರ್, ರೋಟರಿ ಕ್ಲಬ್ ಅಧ್ಯಕ್ಷರಾದ ಕುಸಮ ವಿಜಯಾನಂದ್, ಕಾರ್ಯದರ್ಶಿ ಸುನಿತಾ ಮೃತ್ಯುಂಜಯ ಉಪಸ್ಥಿತರಿದ್ದರು. ಮಹೇಶ್ ಶೆಟ್ಟಿ ಪ್ರಾರ್ಥಿಸಿದರು. ವಿಜಯೇಂದ್ರ ಸ್ವಾಗತಿಸಿದರು.

error: Content is protected !!