ಹಿರಿಯ ಸಾಹಿತಿಯ ಸಾಹಿತ್ಯ ಲೋಕದ ಸಾಧನೆ ಸದಾ ಸ್ಮರಿಸಿ : ಬಿ. ವಾಮದೇವಪ್ಪ
ದಾವಣಗೆರೆ, ಜೂ.24- ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಹೆಸರಾಂತ ಹಿರಿಯ ಸಾಹಿತಿ, ವಿಮರ್ಶಕಿ ನಾಡೋಜ ಡಾ. ಕಮಲಾ ಹಂಪನಾ ಅವರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನುಡಿ ನಮನ ಸಲ್ಲಿಸಲಾಯಿತು.
ನಗರದ ಕುವೆಂಪು ಕನ್ನಡ ಭವನದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಜಿಲ್ಲೆಯ ಸಾಹಿತಿಗಳು, ಕಸಾಪ ಸದಸ್ಯರು, ಒಡನಾಡಿಗಳು ಕಮಲಾ ಹಂಪನಾ ಅವರೊಂದಿಗೆ ಕಳೆದ ದಿನಗಳು, ಅವರು ಸಾಹಿತ್ಯಕ್ಕೆ ನೀಡಿದ ಕೊಡುಗೆ ಹಾಗೂ ಸರಳತೆ ಯನ್ನು ಸ್ಮರಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಮಾತನಾಡಿ, ದಾವಣಗೆರೆಗೆ ಕಮಲಾ ಅವರ ಅವಿನಾಭಾವ ಸಂಬಂಧವಿದೆ.
ಸಾಹಿತ್ಯ ಕ್ಷೇತ್ರಕ್ಕೆ ಹೆಚ್ಚು ಕೃತಿಗಳನ್ನು ನೀಡಿದ ಈ ಹಿರಿಯ ಸಾಹಿತಿಯ ಸಾಹಿತ್ಯ ಲೋಕದ ಸಾಧನೆಯನ್ನು ಸದಾ ಸ್ಮರಿಸುತ್ತೇನೆ ಎಂದು ತಿಳಿಸಿದರು.
ವಿಶ್ರಾಂತ ಪ್ರಾಧ್ಯಾಪಕ ಸುಭಾಸ್ಚಂದ್ರ ಬೋಸ್ ಮಾತನಾಡಿ, ಕಮಲಾ ಅವರು ಹಿಂದು, ಹಂಪನಾ ಜೈನ ಧರ್ಮದವರಾಗಿದ್ದು, ಜಾತಿಯನ್ನು ಮೀರಿ ಸಮಾಜಕ್ಕೆ ಜಾತ್ಯಾತೀತ ಸಂದೇಶ ನೀಡಿದ್ದಾರೆ. ಕಮಲಾ ಅವರಿಗೆ ಪ್ರೇಮ ಪತ್ರ ಬರೆಯುವ ಹವ್ಯಾಸವಿತ್ತು ಎಂದು ಹೇಳಿದರು.
ಕಮಲಾ ದಂಪತಿ ಸಮಾಜಕ್ಕೆ ಆದರ್ಶವಾದ ಕೊಡುಗೆ ನೀಡಿದ್ದಾರೆ. ಜೈನ ಸಾಹಿತ್ಯದಲ್ಲೂ ಸಂಶೋಧನೆ ಮಾಡಿದ್ದಾರೆ ಎಂದು ಅವರ ಸಾಹಿತ್ಯ ವಿಶಾಲತೆಯ ಬಗ್ಗೆ ಕೊಂಡಾಡಿದರು.
ನರಳಾಟಕ್ಕೆ ತುತ್ತಾಗದೆ, ಶತಮಾನದ ಅಂಚಿನಲ್ಲಿ ವಯೋ ಸಹಜ ಪುಣ್ಯದ ಸಾವು ಪಡೆದಿದ್ದಾರೆ ಎಂದು ನುಡಿ ನಮನ ಸಲ್ಲಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ ಮಾತನಾಡಿ, ಕಮಲಾ ಅವರು ಹಿರಿಯ ಮಹಿಳಾ ಲೇಖಕಿಯಾಗಿದ್ದರು ಮತ್ತು ಅವರು ಪ್ರಾಥಮಿಕ ಶಿಕ್ಷಣವನ್ನು ಚಳ್ಳಕೆರೆಯಲ್ಲಿ ಮುಗಿಸಿದ್ದರು ಎಂದು ತಿಳಿಸಿದ ಅವರು ಸೇವಾವಧಿಯಲ್ಲಿ ಕಮಲಾ ಹಂಪನಾ ಅವರ ಜೊತೆ ಕಳೆದ ದಿನಗಳನ್ನು ನೆನಪಿಸಿಕೊಂಡರು.
ತಾಲ್ಲೂಕು ಕಸಾಪ ಅಧ್ಯಕ್ಷ ಸುಮತಿ ಜಯಪ್ಪ, ಸದಸ್ಯೆ ಎಸ್.ಎಂ. ಮಲ್ಲಮ್ಮ, ಸತ್ಯಭಾಮ ಮಂಜುನಾಥ್, ಸಿರಿಗೆರೆ ನಾಗರಾಜ್ ಮತ್ತು ಜಿಗಳಿ ಪ್ರಕಾಶ್ ನುಡಿ ನಮನ ಸಲ್ಲಿಸಿದರು.
ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಬಿ. ದಿಳ್ಯೆಪ್ಪ, ಕೋಶಾಧ್ಯಕ್ಷ ರಾಘವೇಂದ್ರ ನಾಯರಿ, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಕೆ. ಶಿವಶಂಕರ್, ಬೇತೂರು ಷಡಾಕ್ಷರಪ್ಪ, ಅಂಗಡಿ ರೇವಣಸಿದ್ದಪ್ಪ, ದಾಗಿನಕಟ್ಟೆ ಪರಮೇಶ್ವರಪ್ಪ, ಜಗದೀಶ್ ಕೂಲಂಬಿ, ಡಾ. ಮಂಜುನಾಥ್ ಸೇರಿದಂತೆ ಇತರರು ಇದ್ದರು.