ಜ್ಞಾನವೇ ಯಶಸ್ಸಿನ ಮಾರ್ಗ, ಜ್ಞಾನವಿಲ್ಲದ ಜೀವನ ಅಪೂರ್ಣ

ಜ್ಞಾನವೇ ಯಶಸ್ಸಿನ ಮಾರ್ಗ, ಜ್ಞಾನವಿಲ್ಲದ ಜೀವನ ಅಪೂರ್ಣ

ಶರಣ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್. ಅರುಣ್ ಕುಮಾರ್

ದಾವಣಗೆರೆ, ಜೂ. 24 – ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ  ಜಿಲ್ಲಾ ಘಟಕದಿಂದ ಲಿಂ. ಶ್ರೀಮತಿ ಇಂದುಮತಿ ಎಂ. ಪಾಟೀಲ ದತ್ತಿ ಕಾರ್ಯಕ್ರಮ ಮತ್ತು ಶರಣ ಚಿಂತನಗೋಷ್ಠಿಯನ್ನು ನಗರದ ಬಿ.ಇ.ಎ. ಹೈಯರ್ ಪ್ರೈಮರಿ ಸ್ಕೂಲ್, ಸಿಬಿಎಸ್‍ಸಿ ಸ್ಕೂಲ್‌ನಲ್ಲಿ ಇಂದು ನಡೆಸಲಾಯಿತು. 

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್. ಅರುಣ್‍ಕುಮಾರ್ ಅವರು, `ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ’ ವಿಷಯ ಕುರಿತು ಮಾತನಾಡಿ, ಜ್ಞಾನಕ್ಕಿಂತ ಮಿಗಿಲಾದದ್ದು ಮತ್ತು ಪವಿತ್ರವಾದದ್ದು ಯಾವುದೂ ಇಲ್ಲ. ಜ್ಞಾನ ಎಂದರೆ ತಿಳಿವಳಿಕೆ, ವಿಷಯಗಳ ಗ್ರಹಣ ಮತ್ತು ಪ್ರಾಜ್ಞತೆ, ಅಜ್ಞಾನ ಎಂದರೆ ಜ್ಞಾನದ ಕೊರತೆ. ಜೀವನದಲ್ಲಿ ಜ್ಞಾನವನ್ನು ಸಂಪಾದಿಸದೇ ಇರುವವನು ಯಾವುದೇ ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯವಿಲ್ಲ. ಜ್ಞಾನವೇ ಜೀವನದ ಯಶಸ್ಸಿನ ಮಾರ್ಗವಾಗಿದೆ. ಜ್ಞಾನವಿಲ್ಲದ ಮಾನವ ಜೀವನ ಅಪೂರ್ಣ ಎಂದು ತಿಳಿಸಿದರು.

ಜ್ಞಾನವು ನಮ್ಮಲ್ಲಿನ ಹಣ ಆಸ್ತಿಗಿಂತಲೂ ಮುಖ್ಯವಾದ ಸಂಪತ್ತಾಗಿದೆ, ಅದು ಎಂದಿಗೂ ಖಾಲಿಯಾಗದ ಭಂಡಾರ ಜ್ಞಾನವನ್ನು ಸಂಪಾದಿಸುವಾಗ ಆದಷ್ಟು ಹೆಚ್ಚಿಸಿಕೊಳ್ಳಬೇಕೆಂ ದು ತಿಳಿಸಿದರು. ಜ್ಞಾನದ ಕೊರತೆಯಿಂದಾಗಿ ವ್ಯಕ್ತಿಯು ಜೀವನದಲ್ಲಿ ಮೋಸ ಹೋಗುವ ಹಾಗೂ ನಷ್ಟವನ್ನು ಅನುಭವಿಸುವ ಸಾಧ್ಯತೆಯಿ ರುತ್ತದೆ.  ಬುದ್ಧಿವಂತ ವ್ಯಕ್ತಿಯು ತನ್ನ ಜ್ಞಾನವನ್ನು ಸರಿಯಾದ ಮಾರ್ಗದಲ್ಲಿ ಬಳಸಿಕೊಂಡರೆ ಅದು ಜೀವನಕ್ಕೆ ಸಹಕಾರಿಯಾಗುತ್ತದೆಂದು ತಿಳಿಸಿದರು. ವಿದ್ಯಾರ್ಥಿಗಳು ಸುಜ್ಞಾನವನ್ನು ಬೆಳೆಸಿಕೊಳ್ಳುವುದರ ಮೂಲಕ ಎಲ್ಲಾ ಮೌಢ್ಯ ಮತ್ತು ಅಂಧಕಾರಗಳನ್ನು ತೊಡೆದು ಹಾಕಿ ಸಮಾಜದ ಉತ್ತಮ ಆಸ್ತಿಗಳಾಗಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಬಾಪೂಜಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಪ್ರಾಚಾರ್ಯರಾದ ಡಾ. ನೀತು ನೆರವೇರಿಸಿ ದರು.  ವಿದ್ಯಾರ್ಥಿಗಳು ಶರಣರ ವಚನಗಳ ಮೌಲ್ಯ ವನ್ನು ಅನುಸರಿಸಿ ಉತ್ತಮ ಪ್ರಜೆಗಳಾಗಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ ಮಾತನಾಡಿ, ಶರಣ ಸಾಹಿತ್ಯ ಪರಿಷತ್ತು ಮಕ್ಕಳಲ್ಲಿ ವಚನ ಸಾಹಿತ್ಯ ಮತ್ತು ವಚನಕಾರರ ಜೀವನ ದರ್ಶನಗಳನ್ನು ಪರಿಚಯ ಮಾಡಿಸುವ ಮಹತ್ಕಾರ್ಯವನ್ನು ಮಾಡುತ್ತಿದ್ದು, ಆ ನಿಟ್ಟಿನಲ್ಲಿ ಹತ್ತು ಹಲವು ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಮಕ್ಕಳಲ್ಲಿ ಶರಣರ ಜೀವನದ ಕುರಿತು ಪ್ರಬಂಧ ಸ್ಪರ್ಧೆ ಹಾಗೂ ಚರ್ಚಾ ಸ್ಪರ್ಧೆಗಳನ್ನು ನಡೆಸಿಕೊಂಡು ಬರುತ್ತಿದೆ ಎಂದು ತಿಳಿಸಿದರು. 

ಬಿಇಎ ಹೈಯರಿ ಪ್ರೈಮರಿ ಸ್ಕೂಲ್‍ನ ಪ್ರಾಚಾರ್ಯ ಸತೀಶ್ ಹೆಚ್.ಎಸ್. ಅವರು ಪ್ರಬಂಧ ಸ್ಪರ್ಧೆಯಾದವರಿಗೆ ಬಹುಮಾನ ವಿತರಿಸಿದರು.

ಜಿಲ್ಲಾ ಶರಣ ಸಾಹಿತ್ಯ  ಪರಿಷತ್ತಿನ ಖಜಾಂಚಿ ಆರ್. ಸಿದ್ಧೇಶಪ್ಪ ದತ್ತಿ ದಾನಿಗಳ ಪರಿಚಯ ಮಾಡಿಕೊಟ್ಟರು. ದತ್ತಿ ದಾನಿಗಳಾದ ಸಿ. ಶಂಕರ್ ಅಕ್ಕಿಹಾಳ ಅವರನ್ನು ಗೌರವಿಸಲಾಯಿತು. 

ಕದಳಿ ವೇದಿಕೆಯ ತಾಲ್ಲೂಕು ಅಧ್ಯಕ್ಷರಾದ ಶ್ರೀಮತಿ ಮಮತಾ ನಾಗರಾಜ್, ಶರಣ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯ ಎನ್.ಟಿ. ಸಣ್ಣ ಮಂಜುನಾಥ್ ಮತ್ತು ಬುಳ್ಳಾಪುರದ ಮಲ್ಲಿಕಾರ್ಜುನ ಸ್ವಾಮಿ ವೇದಿಕೆಯಲ್ಲಿದ್ದರು. ಸಹ ಶಿಕ್ಷಕಿ ಡಾ. ಆರ್. ಗೀತಾ ವಂದಿಸಿ ದರು. ಕಾರ್ಯದರ್ಶಿ ಬಿ.ಟಿ. ಪ್ರಕಾಶ್ ಅವರಿಂದ ವಚನ ಮಂಗಲ ನೆರವೇರಿತು. ಸಹ ಶಿಕ್ಷಕ ಬಸವರಾಜ್  ಕಾರ್ಯಕ್ರಮ ನಿರೂಪಿಸಿದರು.

error: Content is protected !!