ವಾಹನಗಳಿಗೆ ಹಗ್ಗ ಕಟ್ಟಿ ಎಳೆದು ತಂದು ಪ್ರತಿಭಟನೆ

ವಾಹನಗಳಿಗೆ ಹಗ್ಗ ಕಟ್ಟಿ ಎಳೆದು ತಂದು ಪ್ರತಿಭಟನೆ

ತೈಲ ಬೆಲೆ ಏರಿಕೆಗೆ ಜಿಲ್ಲಾ ಬಿಜೆಪಿ ಖಂಡನೆ

ದಾವಣಗೆರೆ, ಜು.17- ರಾಜ್ಯದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಖಂಡಿಸಿ ಜಿಲ್ಲಾ ಬಿಜೆಪಿ ವತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಆಟೋ ಹಾಗೂ ಟ್ರ್ಯಾಕ್ಟರ್‌ಗೆ ಹಗ್ಗ ಕಟ್ಟಿ ಎಳೆಯುತ್ತಾ, ಎತ್ತಿನ ಬಂಡಿಯಲ್ಲಿ ದ್ವಿಚಕ್ರವಾಹನ ಏರಿಕೊಂಡು ಜಯದೇವ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಬಿಜೆಪಿ ಮುಖಂಡರು, ಕಾರ್ಯಕರ್ತರು ನಂತರ ಉಪ ವಿಭಾಗಾಧಿಕಾರಿ ಕಚೇರಿ ಎದುರು ಬಿ.ಪಿ. ರಸ್ತೆಯಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.

ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳ ಆರ್ಥಿಕ ಹೊರೆ ನಿಭಾಯಿಸಲು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಚಿಲ್ಲರೆ ಮಾರಾಟ ತೆರಿಗೆಯನ್ನು ದಿಢೀರನೆ ಏರಿಕೆ ಮಾಡಿದ್ದು, ಇದರಿಂದ ಪೆಟ್ರೋಲ್ 3 ರೂ. ಹಾಗೂ ಡೀಸೆಲ್ 3.50ರೂ. ಹೆಚ್ಚಳವಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗಲಿದ್ದು, ಸರ್ಕಾರವು ಜನರನ್ನು ಆರ್ಥಿಕ ಸಂಕಷ್ಟಕ್ಕೆ ದೂಡುತ್ತಿದೆ ಎಂದು ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು, ಸಿದ್ಧರಾಮಯ್ಯ ಸರ್ಕಾರವು ರೈತವಿರೋಧಿ, ಜನ ವಿರೋಧಿ, ಮಹಿಳಾ ವಿರೋಧಿ ಸರ್ಕಾರವಾಗಿದೆ. ಕಳೆದೊಂದು ವರ್ಷದಿಂದಲೂ ಅಭಿವೃದ್ಧಿ ಶೂನ್ಯವಾಗಿದೆ. ಸರ್ಕಾರದ ಖಜಾನೆ  ಖಾಲಿಯಾಗಿದೆ. ಗ್ಯಾರಂಟಿ ಯೋಜನೆಗಳಿಗಾಗಿ ಜನರ ಮೇಲೆ ಬರೆ ಹಾಕುತ್ತಿದೆ ಎಂದು ಕಿಡಿಕಾರಿದರು.

ಹೆಚ್ಚಿಸಿರುವ ತೈಲ ದರವನ್ನು ಶೀಘ್ರವೇ ಪುನರ್ ಪರಿಶೀಲಿಸಬೇಕು. ದರ ಏರಿಕೆ ಕ್ರಮ ಹಿಂಪಡೆಯಬೇಕು. ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತಿರುವ ಸರ್ಕಾರವು ಸೇಡಿನ ರಾಜಕಾರಣ ಕೈ ಬಿಡಬೇಕು. ಆರ್ಥಿಕ ಸ್ಥಿತಿ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕು ಎಂದು ಒತ್ತಾಯಿಸಿದರು.

ಹರಿಹರ ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಹಿಂದುಳಿದ ವರ್ಗದ ನಾಯಕ ಎಂದು ಬಿಂಬಿಸಿಕೊಳ್ಳುವ ಸಿದ್ಧ ರಾಮಯ್ಯ, ಎಸ್ಸಿ-ಎಸ್ಟಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿದ್ದಾರೆ. ಇದು ಅವರಿಗೆ ಮಾಡಿದ ಅನ್ಯಾಯವಲ್ಲವೇ? ಎಂದು ಪ್ರಶ್ನಿಸಿದರು.

ಜಿಲ್ಲೆಯಲ್ಲಿ ರೈತರಿಗೆ ಅನ್ಯಾಯ ವಾಗುತ್ತಿದೆ. ಹಳ್ಳಗಳನ್ನು ಮುಚ್ಚಲಾಗುತ್ತಿದೆ. ಮರಳು ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಆದರೂ ಜಿಲ್ಲಾಡಳಿತ ಕಣ್ಮುಚ್ಚಿಕುಳಿತಿದೆ ಎಂದು ಆರೋಪಿಸಿದರು.

ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್ ಮಾತನಾಡಿ, ಕಾಂಗ್ರೆಸ್ ಸರ್ಕಾರವು ಅಮಾಯಕರ ಕವಿಗೆ ಹೂ ಇಟ್ಟಿದೆ. ಇದೊಂದು ನಯ ವಂಚತಕನದ ಸರ್ಕಾರ. ಅವರು ನೀಡಿದ್ದ ಭರವಸೆಗಳು ಸುಳ್ಳಾಗಿವೆ. `ಸುಳ್ಳುರಾಮಯ್ಯ’ ನವರ ಸರ್ಕಾರ ತೊಲಗುವವರೆಗೂ ಬಿಜೆಪಿ ಹೋರಾಟ ಮುಂದುವರೆಸಲಿದೆ ಎಂದರು.

ಮಾಯಕೊಂಡ ಮಾಜಿ ಶಾಸಕ ಬಸವರಾಜ ನಾಯ್ಕ, ಪ್ರತಿಭಟನಾ ನೇತೃತ್ವ ವಹಿಸಿದ್ದ ಜಿಲ್ಲಾಧ್ಯಕ್ಷ ಎನ್. ರಾಜಶೇಖರ್ ಮಾತನಾಡಿ ಸರ್ಕಾರದ ಕ್ರಮವನ್ನು ಖಂಡಿಸಿದರು.

ಜಗಳೂರು ಮಾಜಿ ಶಾಸಕ ಎಸ್.ವಿ. ರಾಮಚಂದ್ರ, ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಬಿ.ಜಿ. ಅಜಯ್ ಕುಮಾರ್, ಲೋಕಿಕೆರೆ ನಾಗರಾಜ್, ಮಾಡಾಳು ಮಲ್ಲಿಕಾರ್ಜುನ್, ಎಸ್.ಟಿ. ವೀರೇಶ್, ಕೆ.ಎಂ. ವೀರೇಶ್, ಶಿವನಳ್ಳಿ ರಮಶ್, ಹೆಚ್.ಎನ್. ಶಿವಕುಮಾರ್, ಆರ್.ಎಲ್. ಶಿವಪ್ರಕಾಶ್, ಸತೀಶ್ ಬಿ.ಎಂ. ಕೊಳೇನಹಳ್ಳಿ, ಶ್ರೀನಿವಾಸ ದಾಸಕರಿಯಪ್ಪ, ಕೆ.ಪ್ರಸನ್ನಕುಮಾರ್,  ಶಿವನಗೌಡ ಟಿ. ಪಾಟೀಲ್, ಮುರುಗೇಶ್ ಆರಾಧ್ಯ, ಮಹೇಶ್, ಸಂಗನಗೌಡ್ರು, ಅಜಿತ್, ಶ್ಯಾಗಲೆ ದೇವೇಂದ್ರಪ್ಪ, ಬಿ.ಟಿ. ಸಿದ್ದಪ್ಪ, ಶ್ಯಾಮ್, ಧನಂಜಯ ಕಡ್ಲೇಬಾಳು, ಯಶೋಧ ಯಗ್ಗಪ್ಪ, ದಾಕ್ಷಾಯಣಮ್ಮ, ಸವಿತಾ ಕರ್ಜಗಿ ಇತರರು ಈ ಸಂದರ್ಭದಲ್ಲಿದ್ದರು.

error: Content is protected !!