ಬೆಣ್ಣೆ ನಗರಿ ಎಂದೇ ಪ್ರಸಿದ್ಧವಾದ ನಮ್ಮ ದಾವಣಗೆರೆ ಮಹಾನಗರವು ಶಿಕ್ಷಣ, ಸಾಹಿತ್ಯ, ಕಲೆ, ಪತ್ರಿಕೋದ್ಯಮ, ಕ್ರೀಡೆ ಮುಂತಾದ ಕ್ಷೇತ್ರಗಳಲ್ಲಿ ಮಹತ್ತರ ಪ್ರಗತಿಯನ್ನು ಸಾಧಿಸಿದೆ. ಲೇಖನಿ ಖಡ್ಗಕ್ಕಿಂತ ಹರಿತ ಎಂಬ ನುಡಿಯನ್ನು ದಾವಣಗೆರೆ ಜಿಲ್ಲೆಯ ಹಲವಾರು ಪತ್ರಕರ್ತರು ಸಾಬೀತು ಪಡಿಸಿ ಪತ್ರಿಕಾ ರಂಗದ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ. ಅಂತಹ ಪತ್ರಕರ್ತರ ಸಾಲಿನಲ್ಲಿ ಬಕ್ಕೇಶ್ ನಾಗನೂರು ಅವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತದೆ.
ನಡೆದಾಡುವ ಪತ್ರಕರ್ತ ಎಂದೇ ಹೆಸರಾಗಿರುವ ಬಕ್ಕೇಶ್ ನಾಗನೂರು ಅವರು, ತಮ್ಮದೇ ಆದ ಬರವಣಿಗೆ ಶೈಲಿಯ ಮೂಲಕ ಪತ್ರಿಕಾ ರಂಗವನ್ನು ಶ್ರೀಮಂತಗೊಳಿಸಿದ್ದಾರೆ. ನಾಲ್ಕು ದಶಕಗಳ ಕಾಲ ಪತ್ರಿಕಾ ರಂಗದಲ್ಲಿ ಸಾರ್ಥಕ ಸೇವೆ ಸಲ್ಲಿಸಿರುವ ಬಕ್ಕೇಶ್ ನಾಗನೂರು ಅವರು 74 ವಸಂತಗಳನ್ನು ಪೂರೈಸಿ ಇಂದು 75ನೇ ವಸಂತಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಇವರು ದಾವಣಗೆರೆಯಲ್ಲಿ ನಿವೃತ್ತ ಮುಖ್ಯೋಪಾಧ್ಯಾಯರಾದ ದಿ. ಮುರಿಗೆಪ್ಪ ನಾಗನೂರು ಮತ್ತು ದಿ. ಬಸಮ್ಮ ದಂಪತಿಗಳ ಮೂರನೇ ಮಗನಾಗಿ ದಿನಾಂಕ 19.6.1949 ರಂದು ಜನಿಸಿದರು. ಇವರು ಬಿಎ ಪದವಿವರೆಗೂ ಅಭ್ಯಾಸ ಮಾಡಿ ಸುಲಭವಾಗಿ ಸರ್ಕಾರಿ ಉದ್ಯೋಗ ಸಿಗುವ ಅವಕಾಶವಿದ್ದರೂ, ಸಮಾಜ ಸೇವೆ ಮಾಡುವ ಉದ್ದೇಶದಿಂದ ಪತ್ರಿಕಾ ರಂಗವನ್ನು ತಮ್ಮ ಸೇವಾ ಕ್ಷೇತ್ರವನ್ನಾಗಿ ಮಾಡಿಕೊಂಡರು. ಪ್ರತಿ ಯಶಸ್ವೀ ಪುರುಷನ ಹಿಂದೆ ಮಹಿಳೆಯ ಕೈ ಇರುತ್ತದೆ ಎಂಬಂತೆ ಇವರ ಪತ್ನಿ ಸರೋಜಮ್ಮನವರು ಇವರ ಸಾಮಾಜಿಕ ಕಾರ್ಯಗಳಿಗೆ ಕೈಜೋಡಿಸುತ್ತಾ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. 4 ಮಕ್ಕಳ ತಂದೆಯಾಗಿ ಮುದ್ದಿನ ಮೊಮ್ಮಕ್ಕಳ ತಾತನಾಗಿ ತುಂಬು ಸಂಸಾರವನ್ನು ನಡೆಸುತ್ತಿದ್ದಾರೆ.
ಬಕ್ಕೇಶ್ ನಾಗನೂರು ಅವರು ದಾವಣಗೆರೆಯ ನಗರವಾಣಿ ದಿನಪತ್ರಿಕೆಯಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸುವ ಮೂಲಕ ಪತ್ರಿಕಾ ರಂಗವನ್ನು ಪ್ರವೇಶ ಮಾಡಿದರು. ನಗರವಾಣಿ ಸಂಪಾದಕರಾಗಿದ್ದ ಕೇಶವಮೂರ್ತಿ ಮತ್ತು ಸಹಸಂಪಾದಕರಾಗಿದ್ದ ಹಳೇಬೀಡು ಕೃಷ್ಣಮೂರ್ತಿ ಇವರಿಬ್ಬರನ್ನು ತಮ್ಮ ಪತ್ರಿಕಾ ಕ್ಷೇತ್ರದ ಆರಂಭಕ್ಕೆ ಮೂಲ ಕಾರಣಕರ್ತರೆಂದು ಸದಾ ಸ್ಮರಿಸುತ್ತಾರೆ.
ನಗರವಾಣಿಯಲ್ಲಿ ತಮ್ಮ ವರದಿಗಳ ಮೂಲಕ ಹೆಸರು ಗಳಿಸಿದ ಬಕ್ಕೇಶ್ ನಾಗನೂರು ಅವರು ನಂತರ `ಜನತಾವಾಣಿ’ ದಿನಪತ್ರಿಕೆಯಲ್ಲಿ ತಮ್ಮ ಸೇವೆಯನ್ನು ಮುಂದುವರೆಸಿದರು. ಜನತಾವಾಣಿ ಸಂಪಾದಕರಾಗಿದ್ದ ಎಚ್. ಎನ್. ಷಡಕ್ಷರಪ್ಪ ಅವರ ಮಾರ್ಗದರ್ಶನದಲ್ಲಿ ತಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಂಡರು. ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ, ಕ್ರೀಡೆ ಮುಂತಾದ ಕ್ಷೇತ್ರಗಳ ವರದಿಯನ್ನು ನಿಷ್ಪಕ್ಷಪಾತವಾಗಿ ವರದಿ ಮಾಡುವ ಮೂಲಕ ಅಪಾರ ಸಂಖ್ಯೆಯ ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕ್ರಾಂತಿದೂತ, ಜನ ಮಿಡಿತ, ಇಂದಿನ ಸುದ್ದಿ, ಲೋಕ ಪ್ರಭ, ಜಲಕ್ರಾಂತಿ ಮುಂತಾದ ದಿನಪತ್ರಿಕೆಗಳಲ್ಲಿಯೂ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು, ಜನತಾವಾಣಿಯಲ್ಲಿ 25 ವರ್ಷಗಳ ಸುದೀರ್ಘ ವರದಿಗಾರರಾಗಿ ಸೇವೆ ಸಲ್ಲಿಸಿದ್ದು, ಅವರ ಸೇವೆಗೆ ಗರಿ ಮೂಡಿಸಿದಂತಾಗಿದೆ.
ಜನತಾ ವಾಣಿಯ ಈಗಿನ ಸಂಪಾದಕರಾದ ಎಂ.ಎಸ್. ವಿಕಾಸ್ ಅವರು ಬಕ್ಕೇಶ್ ನಾಗನೂರು ಅವರಿಗೆ 70ನೇ ವಯಸ್ಸಿನವರೆಗೂ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಅವರಿಗೆ ಕೃತಜ್ಞತೆ ಸಲ್ಲಿಸುತ್ತಾರೆ. 2020 ರಲ್ಲಿ ಜನತಾವಾಣಿ ವರದಿಗಾರರ ಹುದ್ದೆಯಿಂದ ನಿವೃತ್ತರಾದರೂ ಪತ್ರಿಕಾ ರಂಗದಿಂದ ನಿವೃತ್ತಿಯಾಗಿಲ್ಲ. ಈಗಲೂ ಇವರಿಂದ ಅನೇಕ ಅಭಿಮಾನಿಗಳು ಲೇಖನಗಳನ್ನು ಬರೆಸಿಕೊಳ್ಳುವ ಮೂಲಕ ಅವರಿಗೆ ತಮ್ಮ ಪ್ರೀತಿ -ವಿಶ್ವಾಸವನ್ನು ತೋರಿಸುತ್ತಿದ್ದಾರೆ. ಇವರ ಸಾರ್ಥಕ ಸೇವೆಯನ್ನು ಪರಿಗಣಿಸಿ ದಾವಣಗೆರೆ ಜಿಲ್ಲಾ ಆಡಳಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಅಲ್ಲದೇ, ಹಲವಾರು ಸಂಘ-ಸಂಸ್ಥೆಗಳು ಇವರಿಗೆ ಪ್ರಶಸ್ತಿ ಪ್ರದಾನವನ್ನು ಮಾಡಿವೆ. ನಗರ ಸಭೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಕೂಟ, ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿ ಮುಂತಾದ ಅನೇಕ ಸಂಘಟನೆಗಳು, ವಿವಿಧ ಮಠಗಳು ಇವರನ್ನು ಸನ್ಮಾನಿಸಿವೆ.
ಇವರು ಸರ್ಕಾರಿ ಮೋತಿ ವೀರಪ್ಪ ಪ್ರೌಢಶಾಲೆಯಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾಗಿ, ವಿಶ್ವ ವೀರಶೈವ ಲಿಂಗಾಯತ ಏಕೀಕರಣ ಪರಿಷತ್ ಉಪಾಧ್ಯಕ್ಷರಾಗಿ, ಜಿಲ್ಲಾ ವರದಿಗಾರರ ಕೂಟದ ಉಪಾಧ್ಯಕ್ಷರಾಗಿ, ಅನೇಕ ಸಂಘ – ಸಂಸ್ಥೆಗಳ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಸರಳ ಸಜ್ಜನಿಕೆಯ ಸಾಕಾರ ಮೂರ್ತಿಗಳಾಗಿರುವ ಇವರು ತುಂಬು ಕುಟುಂಬದಲ್ಲಿ ಸಮಾಜಮುಖಿಯಾಗಿ ನೆಮ್ಮದಿಯ ಜೀವನವನ್ನು ಸಾಗಿಸುತ್ತಿದ್ದಾರೆ. ಅವರ ಸಮಾಜಮುಖಿ ಬರವಣಿಗೆಗಳು ಸಮಾಜದಲ್ಲಿ ಮಹತ್ತರ ಪ್ರಗತಿಯನ್ನು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಬಕ್ಕೇಶ್ ನಾಗನೂರು ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಾ ಅವರು ಆರೋಗ್ಯವಂತರಾಗಿ ನೂರ್ಕಾಲ ಬಾಳಲಿ ಎಂದು ಆಶಿಸೋಣ.
– ಸೌಭಾಗ್ಯ ಹಿರೇಮಠ,
ಉಪನ್ಯಾಸಕರು, ಹರಿಹರ.