ದಾವಣಗೆರೆ, ಜೂ. 18- ರಾಜ್ಯದಲ್ಲಿ ಚುನಾವಣೆ ಮುಕ್ತಾಯಗೊಳ್ಳುತ್ತಿದ್ದಂತೆಯೇ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ಹೆಚ್ಚಳ ಮಾಡಿ ಲೀಟರ್ಗೆ ಮೂರು ರೂ. ಗಳ ಏರಿಕೆಗೆ ಕಾರಣವಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಖಂಡಿಸಿ ಎಸ್ಯುಸಿಐ (ಕಮ್ಯುನಿಸ್ಟ್) ಪಕ್ಷವು ನಗರದಲ್ಲಿ ಪ್ರತಿಭಟನೆ ನಡೆಸಿತು.
ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ದ್ವಿಚಕ್ರ ವಾಹನಗಳನ್ನು ತಳ್ಳುತ್ತಾ ನಂತರ ಉಪವಿಭಾಗಾಧಿಕಾರಿ ಕಚೇರಿಯವರೆಗೆ ತೆರಳಿದ ಪ್ರತಿಭಟನಾಕಾರರು, ಇಂಧನಗಳ ತೆರಿಗೆ ಏರಿಕೆಯಿಂದಾಗಿ ರಾಜ್ಯದ ಖಜಾನೆಗೆ ಆರ್ಥಿಕವಾಗಿ 3500 ಕೋಟಿ ಹೆಚ್ಚುವರಿ ತೆರಿಗೆ ವಸೂಲಿಯಾಗಲಿದೆ ಎನ್ನುವ ಕಾರಣಕ್ಕಾಗಿ ಬೆಲೆ ಏರಿಕೆ ಮಾಡಲಾಗಿದೆ. ಇದರಿಂದ ಸಾರಿಗೆ, ಸರಕು ಸಾಗಾಣಿಕೆ ವೆಚ್ಚ ಕೂಡ ಏರಿಕೆಯಾಗಿ ಜನರ ಜೀವನದ ಮೇಲೆ ಸರಣಿ ಪರಿಣಾಮ ಉಂಟಾಗಲಿದೆ ಎಂದು ವಿವರಿಸಿದರು.
ಇದಲ್ಲದೇ ತರಕಾರಿ, ದವಸ-ಧಾನ್ಯಗಳ ಬೆಲೆಯೇರಿಕೆಯಿಂದ ಕಂಗಾಲಾದ ಜನರಿಗೆ ಇದು ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಈಗಾಗಲೇ ಪ್ರತಿ ಲೀಟರ್ ಬೆಲೆಯಲ್ಲಿ ಅರ್ಧದಷ್ಟು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಧಿಸಿರುವ ತೆರಿಗೆಯೇ ಇದೆ.
ಲೋಕಸಭಾ ಚುನಾವಣೆಗೆ ಸ್ವಲ್ಪ ಮುಂಚೆ ಕೇಂದ್ರ ಬಿಜೆಪಿ ಸರ್ಕಾರವು ಮತದಾರರನ್ನು ಓಲೈಸಲು ಎರಡು ರೂ. ಕಡಿತ ಮಾಡಿತ್ತು. ರಷ್ಯಾ-ಉಕ್ರೇನ್ ಯುದ್ಧದ ಲಾಭ ಪಡೆದು ಭಾರತ ಸರ್ಕಾರವು ಜಾಗತಿಕ ದರಕ್ಕಿಂತ ಸುಮಾರು ಶೇ. 35 ರಷ್ಟು ಕಡಿಮೆಗೆ ಕಚ್ಚಾ ತೈಲವನ್ನು ಖರೀದಿ ಮಾಡಿದರೂ ಅದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲಿಲ್ಲ. ಲಕ್ಷಾಂತರ ಕೋಟಿ ರೂಪಾಯಿಗಳನ್ನು ಭಾರತದ ತೈಲ ಕಂಪನಿಗಳು ಕೊಳ್ಳೆ ಹೊಡೆದಿವೆ. ಈ ಸಾರ್ವಜನಿಕ ತೆಿರಿಗೆಯನ್ನು ಮೋದಿ ಸರ್ಕಾರವು ಕಾರ್ಪೊರೇಟ್ ಬಂಡವಾಳಶಾಹಿಗಳ ಅನುಕೂಲಕ್ಕೆ ಬಳಸಿಕೊಂಡಿದೆ ಎಂದು ಕಿಡಿಕಾರಿದರು.
ಇನ್ನೊಂದೆಡೆ ಒಂದು ದೇಶ- ಒಂದು ತೆರಿಗೆ ಘೋಷಣೆಯೊಂದಿಗೆ ಬಂದ ಜಿಎಸ್ಟಿಯನ್ನು ಅತ್ಯಂತ ಮಹತ್ವದ ಪೆಟ್ರೋಲಿಯಂ ಉತ್ಪನ್ನಗಳಿಗೆ ಅನ್ವಯ ಮಾಡಿಲ್ಲ. ಹಾಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮಗಿಷ್ಟ ಬಂದಂತೆ ತೆರಿಗೆಗಳನ್ನು ಹೇರುತ್ತಿವೆ. ಅದೇ ದಾರಿಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರವೂ ಸಹ ಜನ ವಿರೋಧಿ ತೀರ್ಮಾನ ಕೈಗೊಂಡಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಜನತೆಗೆ ಹಲವು ಗ್ಯಾರಂಟಿಗಳನ್ನು ನೀಡಿ ಜನರ ಜೀವನ ಉತ್ತಮ ಮಾಡುವುದಾಗಿ ಹೇಳಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ಕ್ರಮ
ರಾಜ್ಯದ ಜನತೆ ತಮಗೆ ಮಾಡಿದ ವಂಚನೆ ಎಂದು ಭಾವಿಸಿದ್ದಾರೆ. ಕಾರಣ ಜನರ ಮೇಲಿನ ಬೆಲೆ ಏರಿಕೆಯ ಹೊಡೆತವನ್ನು ತಕ್ಷಣವೇ ವಾಪಾಸ್ ಪಡೆಯಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಡಾ.ಟಿ.ಎಸ್. ಸುನೀತ್ ಕುಮಾರ್, ಟಿ.ವಿ.ಎಸ್. ರಾಜು, ಮಧು ತೊಗಲೇರಿ, ಮಂಜುನಾಥ್ ಕುಕ್ಕುವಾಡ, ಮಂಜುನಾಥ ಕೈದಾಳೆ, ಅಣಬೇರು ತಿಪ್ಪೇಸ್ವಾಮಿ, ಕೆ. ಭಾರತಿ, ಸ್ಮಿತಾ, ಮಂಜುನಾಥ ರೆಡ್ಡಿ, ಹರಿಪ್ರಸಾದ್, ಪರಶುರಾಮ್, ಮಹಾಂತೇಶ್, ಪೂಜಾ, ಕಾವ್ಯ, ನಾಗಜ್ಯೋತಿ, ಮತ್ತಿತರರಿದ್ದರು.