ಯಡಿಯೂರಪ್ಪ ವಿರುದ್ಧ ದ್ವೇಷದ ರಾಜಕಾರಣ : ಜಿ.ಎಂ.ಸಿದ್ದೇಶ್ವರ ಖಂಡನೆ

ಯಡಿಯೂರಪ್ಪ ವಿರುದ್ಧ ದ್ವೇಷದ ರಾಜಕಾರಣ : ಜಿ.ಎಂ.ಸಿದ್ದೇಶ್ವರ ಖಂಡನೆ

ದಾವಣಗೆರೆ, ಜೂ.16- ಪ್ರೋಕ್ಸೋ ಪ್ರಕರಣದ ನೆಪ ದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ರಾಜ್ಯದ ಕಾಂಗ್ರೆಸ್ ಸರ್ಕಾರ ಕುತಂತ್ರ ನಡೆಸಿದೆ ಎಂದು ಲೋಕಸಭೆ ಮಾಜಿ ಸದಸ್ಯ ಜಿ.ಎಂ. ಸಿದ್ದೇಶ್ವರ ಆರೋಪಿಸಿದ್ದಾರೆ.

ನಿನ್ನೆ ಇಲ್ಲಿ ತಮ್ಮನ್ನು ಭೇಟಿಯಾದ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು, 82 ವರ್ಷ ಇಳಿ ವಯಸ್ಸಿನಲ್ಲಿರುವ ಯಡಿಯೂರಪ್ಪ ಅವರ ವಿರುದ್ಧ ಕಾಂಗ್ರೆಸ್ ಸರ್ಕಾರದ ವರ್ತನೆಯನ್ನು ಗಮನಿಸುತ್ತಾ ಹೊರಟರೆ, ಮೇಲ್ನೋಟಕ್ಕೆ ದ್ವೇಷದ ರಾಜಕಾರಣ ಮಾಡುತ್ತಿರುವುದು ಸಾಬೀತಾಗುತ್ತದೆ ಎಂದು ಹೇಳಿದರು.

ಯಡಿಯೂರಪ್ಪ ಅವರನ್ನು ಜೈಲಿಗೆ ಕಳುಹಿಸಬೇಕು ಎಂದು ಕಾಂಗ್ರೆಸ್ ಸರ್ಕಾರ ಹಠ ತೊಟ್ಟಂತಿದೆ ಅದರ ವರ್ತನೆ. ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ನಡೆಸುತ್ತಿರುವ ಪ್ರಯತ್ನ ಫಲಪ್ರದವಾಗದು ಎಂದು ಸಿದ್ದೇಶ್ವರ ತಿಳಿಸಿದರು.

ಈಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಸೋಲಿನಿಂದ ಹತಾಶವಾಗಿರುವ ಕಾಂಗ್ರೆಸ್ ಪಕ್ಷವು ಕಳೆದ 3-4 ತಿಂಗಳ ಹಿಂದೆ ಯಡಿಯೂರಪ್ಪ ವಿರುದ್ಧ ದಾಖಲಾಗಿ ಸತ್ತ ಹೋಗಿದ್ದ ಪೋಕ್ಸ್ ಪ್ರಕರಣಕ್ಕೆ ಇದೀಗ ಏಕಾಏಕಿ ಚಾಲನೆ ಕೊಟ್ಟಿರುವ ಹಿನ್ನೆಲೆ ಏನು ಎಂದು ಪ್ರಶ್ನಿಸಿದರು.

ಯಡಿಯೂರಪ್ಪ ಅವರ ವಿರುದ್ಧ ದ್ವೇಷದ ರಾಜಕಾರಣ ಮುಂದುವರೆಸಿದ್ದೇ ಆದಲ್ಲಿ ಬಿಜೆಪಿ ಬೀದಿಗಿಳಿದು ಹೋರಾಟ ನಡೆಸಬೇಕಾದೀತು ಎಂದು ಸಿದ್ದೇಶ್ವರ ಎಚ್ಚರಿಸಿದ್ದಾರೆ.

error: Content is protected !!