ದಾವಣಗೆರೆ, ಜೂ. 12 – ನೂತನ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಇಂದು ವಿವಿಧ ಸಭೆಗಳಲ್ಲಿ ಭಾಗವಹಿಸಿದ್ದರು.
ಜಿಲ್ಲಾ ಪಂಚಾಯತ್ ಮುಖ್ಯ ನಿರ್ವಹ ಣಾಧಿಕಾರಿಗಳು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಪ್ರಭಾ, ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನ ಮತ್ತು ಪ್ರಗತಿಯ ಕುರಿತು ಚರ್ಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ನಿರ್ವಹಣಾಧಿಕಾರಿ ಡಾ. ಸುರೇಶ್ ಬಿ. ಇಟ್ನಾಳ್, ಉಪಕಾರ್ಯದರ್ಶಿ ಕೃಷ್ಣನಾಯ್ಕ ಮತ್ತಿತರರು ಉಪಸ್ಥಿತರಿದ್ದರು.
ಸಭೆಯ ನಂತರ ಗೃಹ ಕಚೇರಿ ಶಿವ-ಪಾರ್ವತಿಗೆ ಆಗಮಿಸಿದ್ದ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಹಾಗೂ ಮತದಾರ ಬಾಂಧವರಿಂದ ಶುಭಾಶಯಗಳನ್ನು ಸ್ವೀಕರಿಸಿದರು.
ತಹಶೀಲ್ದಾರ್ ಡಾ. ಎಂ.ಬಿ. ಅಶ್ವತ್ಥ್ ಅವರೊಂದಿಗೆ ಸಂಜೆ ಸಭೆ ನಡೆಸಿದ ಸಂಸದರು, ಇತ್ತೀಚಿಗೆ ಸುರಿದ ಪೂರ್ವ ಮುಂಗಾರು ಮಳೆಗೆ ಹಾನಿಗೊಳಗಾದ ಬಟ್ಲ ಕಟ್ಟೆ ಗ್ರಾಮದ ಮನೆಗೆ ಪರಿಹಾರ ವಿತರಣೆಗೆ ಸೂಚಿಸಿ ಲಿಂಗತ್ವ ಅಲ್ಪಸಂಖ್ಯಾತರಿಗೆ, ವಿಧವೆ ಮತ್ತು ವೃದ್ಧರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸಮರ್ಪಕವಾಗಿ ವಿತರಿಸುವಂತೆ ಸೂಚಿಸಿದರು.
ಹಳೇ ಕುಂದುವಾಡ ಮತ್ತಿತರೆ ಗ್ರಾಮಗಳಲ್ಲಿ ಹಕ್ಕುಪತ್ರ ವಿತರಣೆಗೆ ಅಗತ್ಯ ಕ್ರಮ ಕೈಗೊಂಡು ಅರ್ಹ ಫಲಾನುಭವಿಗಳನ್ನು ಗುರುತಿಸುವಂತೆ ತಿಳಿಸಿದರು.