ಬೇಸಾಯ ತಜ್ಞ ಮಲ್ಲಿಕಾರ್ಜುನ್
ದಾವಣಗೆರೆ, ಜೂ. 11 – ನೇರ ಕೂರಿಗೆ ಭತ್ತ ಬಿತ್ತನೆ ಪದ್ಧತಿಯಿಂದ ನೀರಿನ ಉಳಿತಾಯದ ಜೊತೆಗೆ ಬೇಸಾಯದ ವೆಚ್ಚವೂ ಕಡಿಮೆಯಾಗುತ್ತದೆ ಹಾಗೂ ಪರಿಸರ ಸಂರಕ್ಷಣೆಯೂ ಆಗುತ್ತದೆ ಎಂದು ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞ ಬಿ.ಒ. ಮಲ್ಲಿಕಾರ್ಜುನ್ ಹೇಳಿದ್ದಾರೆ.
ಭತ್ತ ದಾವಣಗೆರೆ ಜಿಲ್ಲೆಯ ಪ್ರಮುಖ ಬೆಳೆಯಾಗಿದೆ. ಆದರೆ, ಕಳೆದ ವರ್ಷ ಮಳೆಯ ಅಭಾವ ಹಾಗೂ ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಚಾನಲ್ ನೀರು ಕಡಿಮೆಯಾದ ಕಾರಣದಿಂದ ಭತ್ತದ ಬೆಳೆಗೆ ಹಿನ್ನಡೆಯಾಗಿತ್ತು. ಬೋರ್ವೆಲ್ ಗಳಲ್ಲೂ ನೀರಿನ ಪ್ರಮಾಣ ಕಡಿಮೆಯಾಗಿತ್ತು.
ಈ ಬಾರಿ ಪೂರ್ವ ಮುಂಗಾರು ಉತ್ತಮವಾಗಿರುವುದರಿಂದ ರೈತರು, ಇದೇ ಪರಿಸ್ಥಿತಿ ಅನುಕೂಲದಲ್ಲಿ ಕೂರಿಗೆ ಮುಖಾಂತರ ಭತ್ತದ ಬಿತ್ತನೆ ಮಾಡಬಹುದು ಎಂದು ಮಲ್ಲಿಕಾರ್ಜುನ್ ಹೇಳಿದ್ದಾರೆ.
ಬೋರ್ವೆಲ್ ಮೂಲಕ ಭತ್ತ ಬೆಳೆಯುವ ರೈತರಿಗೆ ಈ ಪದ್ಧತಿ ವರದಾನವಾಗಿದೆ. ಈ ಪದ್ಧತಿಯನ್ನು ಅಳವಡಿಸಿಕೊಳ್ಳುವ ರೈತರು ಮಣ್ಣಿನ ಫಲವತ್ತತೆಯನ್ನೂ ಕಾಪಾಡಿಕೊಳ್ಳಬಹುದು ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಟಿ.ಎನ್. ದೇವರಾಜ್ ಅಭಿಪ್ರಾಯ ಪಟ್ಟಿದ್ದಾರೆ.
ಕೇವಲ ಇಳುವರಿಯನ್ನಷ್ಟೇ ಪರಿಗಣಿಸದೇ, ಒಟ್ಟಾರೆ ಬೆಳೆಗೆ ಆಗುವ ಖರ್ಚು ಹಾಗೂ ಆದಾಯವನ್ನು ಪರಿಗಣಿಸಿದಾಗ, ನೇರ ಕೂರಿಗೆ ಭತ್ತ ಬಿತ್ತನೆ ರೈತರಿಗೆ ಸಹಾಯಕವಾಗಿದೆ ಎಂದವರು ತಿಳಿಸಿದ್ದಾರೆ.
ಈಗಿನ ಸಾಂಪ್ರದಾಯಿಕ ಪದ್ಧತಿ ಪ್ರಕಾರ ಭತ್ತ ಬೆಳೆಯಲು ರೈತರು ಮೊದಲಿಗೆ ಸಸಿ ಮಡಿ ಮಾಡಿ ಆನಂತರದಲ್ಲಿ ಗದ್ದೆಯನ್ನು ಕೆಸರು ಮಾಡಿಕೊಂಡು ಭತ್ತದ ಪೈರನ್ನು ನಾಟಿ ಮಾಡುತ್ತಾರೆ. ಈ ಪದ್ಧತಿಯಲ್ಲಿ ಸಸಿಮಡಿ ಮಾಡಲು ಸಹ ನಾಲೆ ನೀರಿಗಾಗಿ ಕಾಯಬೇಕು. ಆದರೆ, ಕೂರಿಗೆ ಬಿತ್ತನೆಯಲ್ಲಿ ನೀರು ಬೇಕಾಗಿಲ್ಲ. ಮಳೆಯಾಗುತ್ತಿದ್ದಂತೆ ಗದ್ದೆಯನ್ನು ಹಸನು ಮಾಡಿಕೊಂಡು ನೇರವಾಗಿ ಭತ್ತ ಬಿತ್ತನೆ ಮಾಡಿ ಆನಂತರದಲ್ಲಿ ನೀರು ಹಾಯಿಸಬಹುದು.
ಪ್ರತಿ ಎಕರೆಗೆ 10 ರಿಂದ 12 ಕೆಜಿ ಬಿತ್ತನೆ ಬೀಜ ಬಳಸಿ, ಏಕಕಾಲಕ್ಕೆ ಬೀಜ ಮತ್ತು ಗೊಬ್ಬರ ಬಿತ್ತನೆ ಮಾಡುವ ಸಂಯುಕ್ತ ಕೂರಿಗೆ ಬಳಸಿ ಬಿತ್ತನೆ ಮಾಡಬಹುದು. ಜೈವಿಕ ಗೊಬ್ಬರಗಳಾದ ಅಜೋಸ್ಪಿರಲಂ ಹಾಗು ರಂಜಕ ಕರಗಿಸುವ ಗೊಬ್ಬರವನ್ನು 500 ಗ್ರಾಂ ಪ್ರತಿ ಎಕರೆ ಬೀಜಕ್ಕೆ ಲೇಪನ ಮಾಡಿ ಬಿತ್ತನೆ ಮಾಡುವುದರಿಂದ ಶಿಫಾರಸ್ಸು ಮಾಡಿದ ರಾಸಾಯನಿಕ ಗೊಬ್ಬರದಲ್ಲಿ 10% ರಷ್ಟು ಕಡಿತ ಮಾಡಬಹುದು ಎಂದು ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
ಆಳವಾದ ಉಳುಮೆಯ ಜೊತೆಗೆ ಕಲ್ಟಿವೇಟರ್ ಹಾಗೂ ಕುಂಟೆಯ ಮುಖಾಂತರ ಭೂಮಿ ಸಿದ್ಧತೆಯನ್ನು ಮಾಡಿಕೊಳ್ಳಬೇಕು.ಉತ್ತಮವಾದ ಭೂಮಿ ಸಿದ್ಧತೆಯಿಂದ, ಶೇಕಡ 49ರಷ್ಟು ಕಳೆ ನಿರ್ವಹಣೆಯನ್ನು ಸಾಧಿಸಬಹುದು ಎಂದೂ ಅವರು ತಿಳಿಸಿದ್ದಾರೆ.
ನೀರಾವರಿ ಪ್ರದೇಶದಲ್ಲಿ ಈ ಪದ್ಧತಿಯನ್ನು ಅಳವಡಿಸಿಕೊಳ್ಳುವ ರೈತರು ಕಳೆದ ಬಾರಿ ಬಳಸಿದ ತಳಿಯ ಬೀಜವನ್ನು ಬಿತ್ತನೆಗೆ ಬಳಸುವುದು ಸೂಕ್ತ ಎಂದು ಮಲ್ಲಿಕಾರ್ಜುನ್ ಹೇಳಿದ್ದಾರೆ.
ಕಳೆದ ಬೇಸಿಗೆ ಹಂಗಾಮಿನಲ್ಲಿ ಸಿರಿಗೆರೆಯ ಶಾಂತಿ ವನದಲ್ಲಿ ಈ ಪದ್ಧತಿಯನ್ನು ಪ್ರಾತ್ಯಕ್ಷಿಕೆಯ ಮೂಲಕ ಬೆಳೆದು ತೋರಿಸಲಾಗಿದೆ. ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲೂ ಪ್ರಾತ್ಯಕ್ಷಿಕೆ ಬೆಳೆ ಬೆಳೆಯಲಾಗಿದೆ.