ಗುರುಗಳ ಹೃದಯ ಗೆದ್ದಿರುವ ಶಿಷ್ಯರ ಬದುಕು ಸಾರ್ಥಕ

ಗುರುಗಳ ಹೃದಯ ಗೆದ್ದಿರುವ ಶಿಷ್ಯರ ಬದುಕು ಸಾರ್ಥಕ

ಯಲವಟ್ಟಿ : ಶತಾಯುಷಿ ಮುರುಗೆಪ್ಪಗೌಡ್ರ ಸನ್ಮಾನ ಕಾರ್ಯಕ್ರಮದಲ್ಲಿ ಯೋಗಾನಂದ ಶ್ರೀಗಳು

ಮಲೇಬೆನ್ನೂರು, ಜೂ.7- ತಮ್ಮ ನಿಜವಾದ ಭಕ್ತಿ-ಭಾವಗಳಿಂದ ಗುರುಗಳ ಹೃದಯ ಗೆದ್ದಿರುವ ಶಿಷ್ಯರು ಸಾರ್ಥಕ ಬದುಕು ಕಂಡುಕೊಂಡಿದ್ದಾರೆ. ಅಂತಹ ಶಿಷ್ಯರ ಪೈಕಿ ಮುರುಗೆಪ್ಪಗೌಡ್ರು ಕೂಡಾ ಒಬ್ಬರು ಎಂದು ಶ್ರೀ ಯೋಗಾನಂದ ಸ್ವಾಮೀಜಿ ಹೇಳಿದರು.

ಯಲವಟ್ಟಿ ಗ್ರಾಮದ ಶ್ರೀ ಗುರು ಸಿದ್ಧಾಶ್ರಮದಲ್ಲಿ ನಿನ್ನೆ ಹಮ್ಮಿಕೊಂಡಿದ್ದ ಅಮವಾಸ್ಯೆ ಸತ್ಸಂಗ ಕಾರ್ಯಕ್ರಮದಲ್ಲಿ ಗ್ರಾಮದ ಶತಾಯುಷಿ ಗೌಡ್ರ ಮುರುಗೆಪ್ಪಗೌಡ ಅವರನ್ನು ಗೌರವಿಸಿ, ಶ್ರೀಗಳು ಆಶೀರ್ವಚನ ನೀಡಿದರು.

ಯಲವಟ್ಟಿ ಮಠ ಪ್ರಾರಂಭವಾದ ಕಾಲದಿಂದಲೂ ಮುರುಗೆಪ್ಪಗೌಡ್ರು ಮಠದೊಂದಿಗೆ ಸಂಪರ್ಕ ಬೆಳಸಿಕೊಂಡು ಹಿಂದಿನ ಇಬ್ಬರು ಶ್ರೀಗಳ ನೆಚ್ಚಿನ ಶಿಷ್ಯರಾಗಿದ್ದರು. ನಾವು ಈ ಮಠಕ್ಕೆ ಬಂದ ನಂತರವೂ ಅದೇ ಒಡನಾಟ ಇಟ್ಟುಕೊಂಡಿದ್ದಾರೆ. ಹಾಗಾಗಿ ಅವರು ತಮ್ಮ ಸಾರ್ಥಕ ಬದುಕಿನ 100 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ, ನಮ್ಮೊಂದಿಗೆ ಇನ್ನೂ ಗಟ್ಟಿಮುಟ್ಟಾಗಿದ್ದಾರೆಂದು ಯೋಗಾನಂದ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾಜಮುಖಿಯಾಗಿರುವ ಮುರುಗೆಪ್ಪ ಗೌಡ್ರು, ಇನ್ನೂ ಹಲವು ವರ್ಷ ನಮಗೆ ಮಾರ್ಗದರ್ಶಕರಾಗಿರಲಿ ಎಂದು ಸ್ವಾಮೀಜಿ ಆಶಯ ವ್ಯಕ್ತಪಡಿಸಿ, ಶುಭ ಹಾರೈಸಿದರು.

ಗ್ರಾಮದ ಹಿರಿಯ ಮುಖಂಡ ಡಿ.ಯೋಮಕೇಶ್ವರಪ್ಪ ಮಾತನಾಡಿ, ಮುರುಗೆಪ್ಪಗೌಡ್ರು 100 ವರ್ಷ ಪೂರೈಸಿದ್ದರೂ ಆರೋಗ್ಯದಿಂದ್ದಾರೆ. ನಮ್ಮೂರಿನಲ್ಲಿ ಇಷ್ಟು ವಯಸ್ಸು ಬಾಳಿದವರನ್ನು ನಮ್ಮ ಯುವ ಜನಾಂಗ ನೋಡಿ ಕಲಿಯಲಿ ಎಂದರು.

ಪ್ರವಚನಕಾರ ಸಿರಿಗೆರೆ ಸಿದ್ದೇಶ್ ಮಾತನಾಡಿ, ಮನುಷ್ಯ ಬದುಕಿನ ಶಾಂತಿ, ಸಮಾಧಾನ ಮತ್ತು ಎಲ್ಲರನ್ನೂ ಪ್ರೀತಿಸುವ, ಗೌರವಿಸುವ ಗುಣ ಬೆಳೆಸಿಕೊಂಡಲ್ಲಿ ಆಯು ರಾರೋಗ್ಯ ಭಾಗ್ಯ ಕಾಣಲು ಸಾಧ್ಯ ಎಂದರು.

ಕುಣೆಬೆಳಕೆರೆಯ ಮಹಾದೇವಪ್ಪ ಮಾತನಾಡಿದರು.

ಗ್ರಾಮದ ನಿವೃತ್ತ ಶಿಕ್ಷಕ ಜಿ.ಬಸಪ್ಪ, ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ಸಿರಿಗೆರೆಯ ಐಗೂರು ಕರಿಬಸಪ್ಪ, ಮಾಗೋಡ್ ರೇವಣಸಿದ್ದಪ್ಪ, ಮಾಗೋಡ್ ಮಂಜಪ್ಪ, ಹನುಮಗೌಡ್ರು, ಕುಂಬಳೂರಿನ ಕೆ.ಕುಬೇರಪ್ಪ, ಭೂಪಾಲಪ್ಪ, ಸದಾಶಿವ, ಯಲವಟ್ಟಿಯ ಹೊಸಮನಿ ಮಲ್ಲಪ್ಪ, ಡಿ.ರಾಜಪ್ಪ, ಬಿ.ಜಿ.ಮಲ್ಲೇಶಪ್ಪ, ಎ.ಜಗದೀಶ್, ಮದಕರಿ, ಹೊರಟ್ಟಿ ಕರಿಬಸಪ್ಪ, ಪತ್ರಕರ್ತರಾದ ಜಿಗಳಿ ಪ್ರಕಾಶ್, ಕೆ.ಎನ್.ಹಳ್ಳಿ ನಾಗೇಂದ್ರಪ್ಪ, ಕುಂಬಳೂರು ಸದಾನಂದ್, ಜಿಗಳಿಯ ಕೆ.ಎಸ್.ಮಾಲತೇಶ್, ಎ.ಕೆ.ಜಯ್ಯಪ್ಪ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.

ಈ ವೇಳೆ ಗ್ರಾಮದ ಕರಿಬಸಪ್ಪ ಚೌದ್ರಿ ಅವರ ಆತ್ಮಕ್ಕೆ ಚಿರಶಾಂತಿ ಕೋರಿ ಮೌನಾಚರಣೆ ಮಾಡಲಾಯಿತು.

ಗ್ರಾಮದ ಪಿಎಸಿಎಸ್ ಸಿಇಓ ಶೇಖರಪ್ಪ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

error: Content is protected !!