ನವದೆಹಲಿ, ಮೇ 28 – ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಏಷಿಯಾದಲ್ಲಿ ತೀವ್ರ ಬಿಸಿಗಾಳಿಯ ಪ್ರಕೋಪ ಕಂಡು ಬರುತ್ತಿದೆ. ತಾಪಮಾನದ ತೀವ್ರತೆ ಮೇ ತಿಂಗಳಲ್ಲಿ ದೆಹಲಿಯಲ್ಲಿ 52.3 ಡಿಗ್ರಿ ಸೆಲ್ಸಿಯಸ್ ಹಂತಕ್ಕೆ ತಲುಪಿದೆ. ಚುನಾವಣಾ ಸಮಯದಲ್ಲೇ ಬಂದ ಈ ಬಿಸಿಲು ಎಲ್ಲರನ್ನೂ ಹೈರಾಣು ಮಾಡುತ್ತಿದೆ.
ಈ ತಾಪಮಾನ ಏರಿಕೆ ಭಾರತಕ್ಕಷ್ಟೇ ಸೀಮಿತವಲ್ಲ. ಏಷಿಯಾದ ಉತ್ತರದ ಜಪಾನ್‌ನಿಂದ ಹಿಡಿದು ದಕ್ಷಿಣದ ಫಿಲಿಪೈನ್ಸ್‌ವರೆಗೆ ನಿರಂತರ ಬಿಸಿಗಾಳಿಯ ಅಲೆ ನಿತ್ಯ ಜೀವನವನ್ನು ಸಂಕಷ್ಟಕ್ಕೆ ದೂಡಿದೆ.
ಕಾಂಬೋಡಿಯಾದಲ್ಲಿ ಶಾಲೆಗಳಿಗೆ ರಜೆ ಘೋಷಿಸಿದ್ದರೆ, ಥೈಲ್ಯಾಂಡ್‌ನಲ್ಲಿ ಬೆಳೆಗಳ ನಾಶವಾಗಿದೆ. ನೂರಾರು ಜನರು ಬಿಸಿಗಾಳಿಗೆ ಸಿಲುಕಿ ಸಾವನ್ನಪ್ಪಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಬಿರು ಬಿಸಿಲ ಬೇಗೆ ವಿಶ್ವದಾದ್ಯಂತ ಕರಾಳ ಪರಿಣಾಮ ಬೀರುತ್ತಿದೆ. 2023ರಲ್ಲಿ ಅಮೆರಿಕದ ಫೀನಿಕ್ಸ್‌ನಲ್ಲಿ ತಾಪಮಾನ ಸತತ 31 ದಿನಗಳ ಕಾಲ 43.3 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗಿತ್ತು. ಇದನ್ನು `ಭೂಮಿಯ ಮೇಲಿನ ನರಕ’ ಎಂದು ಬಣ್ಣಿಸಲಾಗಿತ್ತು. ಹಾಗಿದ್ದರೆ 52 ಡಿಗ್ರಿ ಸೆಲ್ಸಿಯಸ್ ಮೀರುವ ತಾಪಮಾನವನ್ನು ಏನೆನ್ನಬೇಕು?
ಯುರೋಪ್ ಸಹ ಬಿಸಿ ಗಾಳಿಯಿಂದ ಮುಕ್ತವಾಗಿಲ್ಲ. ಗ್ರೀಕ್‌ನಲ್ಲಿ ಕಾಡ್ಗಿಚ್ಚು ಹರಡಲು ಹಾಗೂ ಸಾವು – ನೋವುಗಳು ಸಂಭವಿಸಲು ಬಿಸಿಗಾಳಿಯೇ ಕಾರಣವಾಗಿದೆ.
ಬೇರೆ ಬೇರೆ ದೇಶಗಳಲ್ಲಿ ಬಿಸಿಲಿನಿಂದ ಬೇರೆ ಬೇರೆ ಪರಿಣಾಮಗಳಾಗಿದ್ದರೂ, ಎಲ್ಲೆಡೆ ಕಂಡು ಬರುವ ಸಾಮಾನ್ಯ ಅಂಶ ಎಂದರೆ ವೃದ್ಧರು ಬಿಸಿಲಿನಿಂದ ಅತಿ ಹೆಚ್ಚು ಬಳಲುತ್ತಿದ್ದಾರೆ ಎಂಬುದು. ಮುಂಬರುವ ದಿನಗಳಲ್ಲಿ ಈ ಸಮಸ್ಯೆ ಇನ್ನಷ್ಟು ಉಲ್ಬಣಿಸಲಿದೆ.
ಹೆಚ್ಚುತ್ತಿರುವ ವೃದ್ಧರ ಸಂಖ್ಯೆ :
ಒಂದೆಡೆ ವಿಶ್ವದಾದ್ಯಂತ ವೃದ್ಧರ ಸಂಖ್ಯೆ ಹೆಚ್ಚಾಗುತ್ತಿದೆ. ಮತ್ತೊಂದೆಡೆ ವಿಶ್ವದಾದ್ಯಂತ ತಾಪಮಾನ ಹೆಚ್ಚಾಗುತ್ತಿದೆ. ಇವೆರಡೂ ಅಂಶಗಳಿಂದ ಗಂಭೀರ ಪರಿಣಾಮಗಳಾಗುತ್ತಿವೆ ಎಂದು ಬೋಸ್ಟನ್ ವಿಶ್ವವಿದ್ಯಾಲಯದ ಉಪನ್ಯಾಸಕರಾದ ದೆಬೊರಾ ಕಾರ್ ಹಾಗೂ ಇಯಾನ್ ಸೂ ವಿಂಗ್ ಅವರು ರೂಪಿಸಿರುವ ವರದಿ ತಿಳಿಸಿದೆ.
2015ರಿಂದ 2023ರ ನಡುವಿನ ಸರಾಸರಿ ತಾಪಮಾನ, 1880ರ ನಂತರ ಅತಿ ಹೆಚ್ಚಾಗಿದೆ. 1880ರಿಂದ ಜಾಗತಿಕವಾಗಿ ತಾಪಮಾನ ದಾಖಲಿಸುವುದು ಆರಂಭವಾಗಿತ್ತು.
ವಿಶ್ವದಾದ್ಯಂತ ವೃದ್ಧರ ಸಂಖ್ಯೆ ಹೆಚ್ಚಾಗುತ್ತಿದೆ. 2050ರ ವೇಳೆಗೆ 60 ವರ್ಷಕ್ಕೂ ಹೆಚ್ಚಿನವರ ಸಂಖ್ಯೆ ಈಗಿರುವುದಕ್ಕಿಂತ ದುಪ್ಪಟ್ಟಾಗಿ 210 ಕೋಟಿಗೆ ತಲುಪಲಿದೆ. ಆ ವೇಳೆಗೆ ಒಟ್ಟು ಜನಸಂಖ್ಯೆಯ ಶೇ.21ರಷ್ಟು ಜನರು ವೃದ್ಧರಾಗಿರಲಿದ್ದಾರೆ. ಪ್ರಸಕ್ತ ಈ ಪ್ರಮಾಣ ಶೇ.13ರಷ್ಟಾಗಿದೆ.
ಈ ಎರಡೂ ಪರಿಣಾಮಗಳಿಂದಾಗಿ ಬಿಸಿಲಿನಿಂದ ಪೀಡಿತರಾಗುವ ವೃದ್ಧರ ಪ್ರಮಾಣ ಗಣನೀಯವಾಗಿ ಹೆಚ್ಚಾಗಲಿದೆ. ಅಂದಾಜಿನ ಪ್ರಕಾರ, 2050ರ ವೇಳೆಗೆ ವಿಶ್ವದ ತಾಪಮಾನ 37.5 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗಿರುವ ಪ್ರದೇಶದಲ್ಲಿ 69 ವಯಸ್ಸು ಮೀರಿದ ಶೇ.23ರಷ್ಟು ವೃದ್ಧರು ನೆಲೆಸಲಿದ್ದಾರೆ. 250 ದಶಲಕ್ಷ ವೃದ್ಧರು ಅಪಾಯಕಾರಿ ತಾಪಮಾನ ಎದುರಿಸಬೇಕಾಗುತ್ತದೆ.
ವೃದ್ಧರಿಗೆ ಹೆಚ್ಚಿನ ಆರೋಗ್ಯ ಸಮಸ್ಯೆ
ಹೆಚ್ಚಿನ ತಾಪಮಾನ ಎಲ್ಲರಿಗೂ ಬಾಧಿಸುತ್ತದೆ. ಆದರೆ, ವೃದ್ಧರಿಗೆ ತಾಪಮಾನ ಹೆಚ್ಚು ಆರೋಗ್ಯ ಸಮಸ್ಯೆ ಹಾಗೂ ಜೀವಕ್ಕೆ ಅಪಾಯ ತರುತ್ತದೆ. ತಾಪಮಾನದ ಕಾರಣದಿಂದಾಗಿ ಹೃದಯ, ಶ್ವಾಸಕೋಶ ಹಾಗೂ ಕಿಡ್ನಿ ಸಮಸ್ಯೆಗಳು ಉಲ್ಬಣಿಸುತ್ತವೆ.
ವೃದ್ಧರು ಕಿರಿ ವಯಸ್ಸಿನವರಷ್ಟು ಬೆವರುವ ಸಾಮರ್ಥ್ಯ ಹೊಂದಿರುವುದಿಲ್ಲ. ಕೆಲ ಸಾಮಾನ್ಯ ಔಷಧಿಗಳು ಅವರ ಬೆವರುವ ಸಾಮರ್ಥ್ಯವನ್ನು ಇನ್ನಷ್ಟು ಕಡಿಮೆ ಮಾಡುತ್ತವೆ. ಇದರಿಂದಾಗಿ ಅವರ ದೇಹದ ತಾಪಮಾನದಲ್ಲಿ ತೀವ್ರ ಏರಿಕೆಯಾಗುತ್ತದೆ.
ಇದರ ಜೊತೆಗೆ ಶುದ್ಧ ಕುಡಿಯುವ ನೀರಿನ ಕೊರತೆ, ವಾಯು ಗುಣಮಟ್ಟ ಕುಂಠಿತವಾಗುವುದು ಇನ್ನಷ್ಟು ಸಮಸ್ಯೆ ತರಲಿವೆ. ಈಗಾಗಲೇ ಶ್ವಾಸಕೋಶದ ತೊಂದರೆ ಎದುರಿಸುತ್ತಿದ್ದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ. ಅದರಲ್ಲೂ ತೇವಾಂಶ ಹೆಚ್ಚಾಗಿದ್ದರಂತೂ, ಮಧ್ಯಮ ಪ್ರಮಾಣದ ಬಿಸಿಲೂ ಸಂಕಷ್ಟ ಹೆಚ್ಚಿಸುತ್ತದೆ.
ಆದಾಯದ ಕೊರತೆ :
ಈ ವಲಯದ ಬಹುತೇಕ ವೃದ್ಧರು ಕಡಿಮೆ ಇಲ್ಲವೇ ಮಧ್ಯಮ ಆದಾಯದ ದೇಶಗಳಲ್ಲಿದ್ದಾರೆ. ಹೀಗಾಗಿ ಬಿಸಿ ವಾತಾವರಣ ಎದುರಿಸಲು ಅಗತ್ಯವಾದ ವಿದ್ಯುತ್, ತಾಪಮಾನ ನಿಯಂತ್ರಕ ಹಾಗೂ ಶುದ್ಧ ನೀರು ಹೊಂದುವುದು ಕಷ್ಟವಾಗಲಿದೆ.
ಉತ್ತರ ಅಮೆರಿಕ ಹಾಗೂ ಯುರೋಪ್ ಸೇರಿದಂತೆ ಉತ್ತರ ಗೋಳ ಇತಿಹಾಸದುದ್ದಕ್ಕೂ ಹೆಚ್ಚು ತಂಪಾಗಿದೆ. ಬಿಸಿ ಗಾಳಿಯ ಪ್ರದೇಶಗಳು ಏಷಿಯಾ, ಆಫ್ರಿಕ ಹಾಗೂ ದಕ್ಷಿಣ ಅಮೆರಿಕದಂತಹ ದಕ್ಷಿಣ ಗೋಳದಲ್ಲಿವೆ. ದಕ್ಷಿಣ ಗೋಳದಲ್ಲೇ ಜನಸಂಖ್ಯೆ ಪ್ರಮಾಣ ಹೆಚ್ಚಾಗುತ್ತಿದೆ. ಈ ಭಾಗದ ವೃದ್ಧರೇ ಹೆಚ್ಚು ಸಮಸ್ಯೆ ಎದುರಿಸಲಿದ್ದಾರೆ.
ನಿದ್ರಾ ಭಂಗ :
ರಾತ್ರಿ ವೇಳೆ ತಾಪಮಾನ ವೃದ್ಧರಿಗೆ ಇನ್ನಷ್ಟು ಸಂಕಷ್ಟ ತರುತ್ತದೆ. ರಾತ್ರಿ ತಾಪಮಾನ ಹೆಚ್ಚಾಗಿದ್ದರೆ ವೃದ್ಧರು ಸಮರ್ಪಕ ಪ್ರಮಾಣದ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ. ಬಿರು ಬಿಸಿ ಅಲೆಯ ವಾತಾವರಣ ಮಾನಸಿಕ ನೆಮ್ಮದಿಯ ಮೇಲೂ ಪರಿಣಾಮ ಬೀರುತ್ತದೆ.
ಬಿರು ಬಿಸಿಲಿನ ಕಾರಣದಿಂದ ಮನೆಯೊಳಗೇ ಉಳಿದುಕೊಳ್ಳುವ ವೃದ್ಧರು ಏಕಾಂಗಿತನ, ಬೇಸರ ಹಾಗೂ ಖಿನ್ನತೆಗೆ ಸಿಲುಕುವ ಸಾಧ್ಯತೆ ಹೆಚ್ಚಾಗುತ್ತದೆ. ಮಧ್ಯಮ ಹಾಗೂ ಕಡಿಮೆ ಆದಾಯ ದೇಶಗಳಲ್ಲಿನ ಜನರು ಕಡಿಮೆ ಗುಣಮಟ್ಟದ ಮನೆಗಳಲ್ಲಿರುತ್ತಾರೆ. ಇವು ತಾಪಮಾನದ ಸಮಸ್ಯೆ ಹೆಚ್ಚಿಸುತ್ತವೆ.
ಜಾಗತಿಕ ಎಚ್ಚರಿಕೆ ಗಂಟೆ :
ಜಾಗತಿಕ ತಾಪಮಾನ ಹೆಚ್ಚಿಸುವ ತ್ಯಾಜ್ಯಗಳನ್ನು ಕಡಿಮೆ ಮಾಡಲು ವಿಶ್ವದಾದ್ಯಂತ ಕ್ರಮ ತೆಗೆದುಕೊಳ್ಳುವುದೇ ಈಗಿರುವ ಉತ್ತಮ ಮಾರ್ಗವಾಗಿದೆ. ವೃದ್ಧರನ್ನು ಬಿಸಿಲಿನಿಂದ ರಕ್ಷಿಸಲು ಅಗತ್ಯ ಕ್ರಮಗಳತ್ತ ಗಮನ ಹರಿಸಬೇಕಿದೆ. ಪ್ರತಿಯೊಂದು ಪ್ರಾಂತ್ಯ ಹಾಗೂ ಜನಸಂಖ್ಯೆಯ ಸ್ವರೂಪ ಆಧರಿಸಿ ಬೇರೆ ಬೇರೆ ರೀತಿಯ ಕ್ರಮಗಳ ಅಗತ್ಯವಿದೆ.
ಏರುತ್ತಿರುವ ತಾಪಮಾನ ಹಾಗೂ ಹೆಚ್ಚಾಗುತ್ತಿರುವ ವೃದ್ಧರ ವಿಷಯಗಳನ್ನು ಎದುರಿಸುವಲ್ಲಿ ಈ ದಶಕ ಅತ್ಯಂತ ಮಹತ್ವದ್ದಾಗಿದೆ ಎಂದು ವಿಶ್ವ ಆರೋಗ್ಯ ಸಂಘಟನೆ ತಿಳಿಸಿದೆ. ಎಲ್ಲ ಪ್ರಾಂತ್ಯಗಳು, ಸಂಶೋಧಕರು, ವೈದ್ಯರು ಹಾಗೂ ನೀತಿ ರೂಪಿಸುವವರು ಈ ಎಚ್ಚರಿಕೆಯ ಗಂಟೆಗೆ ಕಿವಿಗೊಡಲೇ ಬೇಕಿದೆ.